ಮಂಗಳವಾರ, ಡಿಸೆಂಬರ್ 18, 2018

ಜಾನಪದ ಜಂಗಮ - ದಾವಲಸಾಬ್ ಅತ್ತಾರ



ಜಾನಪದ ಜಂಗಮ.....
ಹಾಡುಗಳ ಸರದಾರ- ದಾವಲಸಾಬ್ ಅತ್ತಾರ

ಕುಷ್ಟಗಿ ತಾಲೂಕಿನ ಹಾಬಲಕಟ್ಟೆ  ಗಡಿ ಗ್ರಾಮದ ಜಾನಪದ ಕಲಾವಿದ ದಾವಲಸಾಬ್ ಅತ್ತಾರ ನಿಷ್ಕಳಂಕ ವ್ಯಕ್ತಿತ್ವ. ಇವರಿಗೆ ಎಂದೋ ಜಾನಪದ ಕಲಾ ಅಕಾಡೆಮಿ ಪ್ರಶಸ್ತಿ ಸಿಗಬೇಕಿತ್ತು... ಸರ್ಕಾರ ಪ್ರತಿ ವರ್ಷ ಪ್ರಶಸ್ತಿ ಪ್ರಕಟಿಸಿದಾಗಲೆಲ್ಲಾ ಅವರ ಹೆಸರು ಅಯ್ಕೆ ಪಟ್ಟಿಯಲ್ಲಿ ಇರುತ್ತಿರಲಿಲ್ಲ ಎನ್ನುವ ಭ್ರಮನಿರಸನದಿಂದ ಸೋತು ಹೋಗಿದ್ದರು.
 ಸರ್ಕಾರದ ಧೋರಣೆ ಇವರಂತಹ ಕಲಾವಿದರಿಗೆ ತಾತ್ಸಾರ, ಅಸಡ್ಡೆ ಧೋರಣೆ ಹಿನ್ನೆಲೆಗೆ ಬೇಸರವೂ ಮುನಿಸು ಕೂಡ ಇತ್ತು. ಬಡವನ ಸಿಟ್ಟು ದವಡೆಗೆ ಮೂಲ ಎನ್ನುವ ಹಾಗೆ ಏನೇ ಸಿಟ್ಟು ಶೆಡವು ಇದ್ದರೂ ನುಂಗಿಕೊಂಡಿದ್ದ ದಾಬಲಸಾಬ ಎಂದಿಗೂ ಯಾರೋಂದಿಗೂ ತೋರಿಸಿಕೊಂಡವರಲ್ಲ. 
ಅವರು ಒಮ್ಮೊಮ್ಮೆ ನಮ್ಮಂತವರಿಗೆ ಎಲ್ಲಿ ಸಿಗತೈತ್ರಿ ನಾವ್ ಹಿಂಗಾ ಹಾಡಕೋಂತ ಹೋಗದ್ರೀ ಸರ್ಕಾರ ಗುರ್ತಿಸದೇ ಇದ್ರೂ ಜನ ಗುರುತಿಸುತ್ತರಲ್ಲಾ ಅಷ್ಟೇ ಸಾಕ್ರೀ... ಸರ್ಕಾರ ಯಾವಾಗ ನಮ್ಮಂತ ಬಡ ಕಲಾವಿದರ ಮ್ಯಾಗ ಕಣ್ ತೆಗೆಬೇಕ್ರೀ ಅಂದಿದ್ದರು. 
ಅವರೇ ಹೇಳಿದಂತೆ ಬೆಂಗಳೂರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳೆದ ಐದಾರು ವರ್ಷಗಳ ಹಿಂದೆ ಹೋದಾಗ ಅಲ್ಲಿ ಪ್ರಕಾಶ ಸರ್ ಎಂಬುವವರಿಗೆ ತಮ್ಮ ಕಲಾ ಸಾಧನೆ ಹೊತ್ತಿಗೆ ತೋರಿಸಿದ್ದರು. ಇವರ ಸಾಧನೆಗಳನ್ನು ಅವಲೋಕಿಸಿದ್ದ ಪ್ರಕಾಶ್ ಅವರು ನಿಮ್ಮಂತವರಿಗೆ ಅಲ್ಲದೆ ಇನ್ಯಾರಿಗೆ ಪ್ರಶಸ್ತಿ ಕೊಡಬೇಕ್ರೀ ಆ ಚಿಂತಿ ಬಿಡು... ನನಗ ಇಟಗಿ ಭೀಮವ್ವ ದೇವಸ್ಥಾನ ತೋರಿಸು ಎಂದಿದ್ದರು. ಜೊತೆಗೆ ದಾವಲಸಾಬ್ ಅತ್ತಾರ ಅವರನ್ನು ಕರೆದುಕೊಂಡು ದೇವಸ್ಥಾನದ ದರ್ಶನ ಮಾಡಿಸಿದ್ದಕ್ಕೆ ನೆರವಾದ  ಈ ಕಲಾವಿದನಿಗೆ ೫೦೦ ರೂ ಕೊಟ್ಟಿದ್ದರು. ಅವರು ಎಲ್ಲಿಯವರು ಎನ್ನುವುದು ಈ ಕಲಾವಿದನಿಗೆ ಗೊತ್ತಿಲ್ಲ ಅವರ ಶಿಫಾರಸ್ಸಿನಿಂದಲೇ ಈ ಪ್ರಶಸ್ತಿ ಬಂದಿದೆ ಎನ್ನುವುದು ಅವರ ಬಲವಾದ ನಂಬಿಕೆ ದಾವಲಸಾಬ್ ಅವರದು.ಅವರನ್ನು ಅಭಿನಂದಿಸಬೇಕು ಎನ್ನುವ ತುಡಿತವಿದೆ ಅದರೆ ಅವರ ಮೋಬೈಲ್ ಸಂಖ್ಯೆ ಸಹ ಬರೆದುಕೊಂಡಿಲ್ಲ. ಅದರೆ ಅವರನ್ನು ಕಂಡು ಕೃತಜ್ಞತೆ ಸಲ್ಲಿಸಬೇಕೆನ್ನು  ತುಡಿತವಿದೆ ಅದರೆ ಅವರೆಲ್ಲಿ ಇದ್ದಾರೆಯೋ ಗೊತ್ತಿಲ್ಲ.....

 ಜಾನಪದ ಕಲಾ ಅಕಾಡೆಮಿ ಈ ಪ್ರಶಸ್ತಿ ಬೆಟ್ಟದಷ್ಟಿದ್ದ ಕಷ್ಟಗಳೆಲ್ಲಾ ಮಂಜಿನಂತೆ ನೀರಾಗಿಸಿದೆ ಅವರ ಮೊಗದಲ್ಲಿ‌ ವ್ಯಕ್ತವಾಗುವ ಸಂತಸವೇ ಉಲ್ಲೇಖಿಸುತ್ತಿದೆ. ದಾವಲಸಾಬ್ ಸುಮಾರು ಮೂರು ತಲೆಮಾರಿನಿಂದ ಜಾನಪದವನ್ನು ಜತನ ಮಾಡಿರುವ ಅವರು ಜೀವನೋಪಯಕ್ಕೆ ಊರೂರು, ಜಾತ್ರೆಯಲ್ಲಿ ಊದುಬತ್ತಿ ಮಾರುವ ದಾವಲಸಾಬ್ ಅವರು, ಆತ್ಮಸಂತೋಷಕ್ಕೆ ರಿವಾಯತ್, ಲಾವಣಿ ಜಾನಪದ ಪ್ರಕಾರಗಳನ್ನು ಬೆಳಗಾಗುವತನ ಹಾಡಿದರೂ ದಣಿಯ ಧ್ವನಿ... 
ಈ ಧ್ವನಿಗೆ  ಬೆಲೆ ಕಟ್ಟಲಾಗದು.... ಸರ್ಕಾರ ತಡವಾಗಿ ಯಾದರೂ ಗುರುತಿಸಿ ಪ್ರಶಸ್ತಿ ಮೌಲ್ಯ ಹೆಚ್ಚಿಸಿಕೊಂಡಿದೆ ಎನ್ನುವುದು ಅತಿಶಯೋಕ್ತಿಯ ಮಾತು. 
ಜಾನಪದ ಕಲಾ ಜಂಗಮನಾಗಿರುವ ದಾವಲಸಾಬ್ ಮಾನವೀಯ ವ್ಯಕ್ತಿತ್ವಕ್ಕೆ ಜಾನಪದ ಅಕಾಡೆಮಿ ಪ್ರಶಸ್ತಿ ಎನ್ನುವ ಮೌಲ್ಯ ಕಟ್ಟಿಸಿಕೊಂಡಿರುವ ಹಾಬಲಕಟ್ಟಿಯ ಹಾಡುಗಳ ಸರದಾರ ದಾವಲಸಾಬ್ ಅತ್ತಾರ ಅವರಿಗೆ ಅಭಿನಂದನೆಗಳು.....

-ಮಂಜುನಾಥ ಮಹಾಲಿಂಗಪೂರ
ಕುಷ್ಟಗಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher