ಮಂಗಳವಾರ, ಸೆಪ್ಟೆಂಬರ್ 15, 2015

ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ

             

ಸರ್ ಎಂ ವಿಶ್ವೇಶ್ವರಯ್ಯ ನವರ ಜನ್ಮ ದಿನವಾದ ಇಂದು ಜಿಲ್ಲೆಯ ಸ.ಹಿ.ಪ್ರಾ.ಶಾಲೆ, ರೈಲ್ವೆ ನಿಲ್ದಾಣ, ಕೊಪ್ಪಳ ಇಲ್ಲಿ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯ ವತಿಯಿಂದ ನಡೆದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸ್ಥಳೀಯ ಜಹಗೀರ ಗುಡದೂರ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಗಳಿಸಿ, ವಿಭಾಗ ಮಟ್ಟಕ್ಕೆ ಆಯ್ಕೆ ಹೊಂದಿದ್ದಾರೆ. ತಾಲೂಕಿನಿಂದ ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿ ಆಯ್ಕೆಗೊಂಡ ನಾಟಕಗಳನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಲಾಗಿತ್ತು. ನಾಲ್ಕು ತಾಲೂಕುಗಳಿಂದ ಒಟ್ಟು ಏಂಟು ತಂಡಗಳು ಇಂದು ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಉತ್ತಮ ನಟಿ ಗ್ಯಾನವ್ವ, ಮೊ.ವ.ನಿ.ಶಾಲೆ, ಕಾಟಪುರ ವಿದ್ಯಾರ್ಥಿನಿ ಪಡೆದರೆ, ಉತ್ತಮ ನಟ ಪ್ರಶಸ್ತಿಯನ್ನು ಲಕ್ಷ್ಮಣ ಗೊಲ್ಲರ, ಸ.ಪ್ರೌ.ಶಾಲೆ, ಜಹಗೀರಗುಡದೂರ ವಿದ್ಯಾರ್ಥಿ ಪಡೆದನು. ರಚನೆ, ನಿರ್ದೇಶನ ಈ ಎರಡು ಪ್ರಶಿಸ್ತಿಗಳನ್ನು ಶಿಕ್ಷಕರಾದ ಶ್ರೀ ಗುರುರಾಜ್ ಅವರು ಪಡೆದರು. ದ್ವಿತೀಯ ಬಹುಮಾನವನ್ನು ಮೊರಾರ್ಜಿ ಶಾಲೆ ಕಾಟಪುರ ಪಡೆದುಕೊಂಡಿದೆ.

ಮಂಗಳವಾರ, ಸೆಪ್ಟೆಂಬರ್ 1, 2015

ಪತ್ತಾರ ಮಾಸ್ತರರ ಬುತ್ತಿಯಿಂದ....


ಸುಮಾರು ೧೯೭೮ ರ ಕಥೆ. 

( ಅವಧಿಯಲ್ಲಿ  ಪ್ರಕಟಗೊಂಡಿದ್ದು )
ಶಿಕ್ಷಕರ ದಿನಾಚರಣೆ ಅಂಗವಾಗಿ ನನ್ನೊಂದಿಗೆ ಕಾರ್ಯ ನಿರ್ವಹಿಸುತ್ತಿರುವ, ನಿವೃತ್ತಿಯ ಅಂಚಿನಲ್ಲಿರುವ ದತ್ತಾತ್ರೇಯ ಶಾಮರಾವ್ ಪತ್ತಾರ್ ಗುರುಗಳು ನಾನು ಹುಟ್ಟುವ ಮುಂಚೆ ಪಾಠ ಮಾಡಲು ತೊಡಗಿಕೊಂಡವರು. ಅವರ ಒಂದೊಂದು ಅನುಭವಗಳನ್ನು ಕೇಳುತ್ತಾ ಇದ್ದರೆ ಕಾಣದ ಒಂದು ಪ್ರಪಂಚವೇ ಗೋಚರಿಸುತ್ತದೆ. ಕುಷ್ಟಗಿ ತಾಲೂಕಿನ ಪ್ರೌಢಶಾಲೆಯಲ್ಲಿ ತಮ್ಮ ಕೊನೆಯ ವರ್ಷದ ಸೇವೆಯಲ್ಲಿ ಅವರ್ ಮಾತುಗಳಲ್ಲಿಯೇ ಅವರನ್ನು ಕಾಣತೊಡಗಿದ್ದೇನೆ. ಶಿಕ್ಷಕನಿಗೊಂದು ಸಲಾಮು ಹೇಳುತ್ತಾ, ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭವನ್ನು ಕೋರುತ್ತೇನೆ.]
 
 4
ಒಂದು ದಿನ ಬೆಳಿಗ್ಗೆ ತೆಂತಂಡಿಗೆ ಅಂತ ನಾನು ಹೊರಟಿದ್ದೆ. ಅಲ್ಲೇ ಧಣೇರು ಒಂದು ನಾಯಿ ಕುನ್ನಿ ಹಿಡಕೊಂಡು ಮತ್ತೇ ರಾಜಸಾಬನ ಜೊತೆ ಹಂಗೇ ಅತ್ಲ ಕಡೇ ಬಂದ್ರೂ. ಅವರ ಕಂಪೋಂಡಿನ ಹತ್ತಿಲೇ ಹೋಗುತಿದ್ದ ನನ್ನ ನೋಡಿ, ರಾಜಸಾಬನಿಗೆ ” ಅಂವಾ ಮಾಸ್ತರಾಲ್ಲೇನು ? ” ಅಂತ ಅಂದ ಅದು ನನ್ ಕಿವಿಗೆ ಬಿದ್ದಿದ್ದೇ ನಾನು ” ಹೌದ್ರಿ ನಾನಾ ಮಾಸ್ತರ್, ದತ್ತಾತ್ರೇಯ ಮಾಸ್ತರಾ ” ಅಂತ ಅಲ್ಲೇ ಕೆಳಗೆ ಚರಗೀ ಇಟ್ಟು ನೆಲಕ್ಕೆ ಸಣ ಮಾಡ್ದೆ.
” ಹೇ ಮಾಸ್ತಾರ, ನೀ ಎಲ್ಲಿದಿಯಪ್ಪ….” ಅಂತ ಕೇಳಿದರು.
“ಇಲ್ಲರೀ ದಣೇರಾ, ಇಲ್ಲೇ ಪೋಸ್ಟ್ ಚನ್ನಯ್ಯನ್ ಮನೇಗಾ ಬಾಡಿಗಿ ಐದೀನ್ ರೀ…” ಅಂತಂದೆ..
” ಯಾಕಾ….? ನಾವಲ್ಲಿ ಸಾಲು ಹಿಡಿದು ಮಎ ಕಟ್ಟಿಸಿವಲ್ಲಾ, ನಮ್ಮ ದರ್ಬಾರ ಮುಂದೆ ಯಾರಿಗೆ ಕಟ್ಟಿಸಿವಿ ಅನ್ಕೋಂಡಿ ಅದು. ನೌಕರದಾರರಿಗೆ ಕಟಿಸಿದ್ದಪ್ಪ, ಅಲ್ಲಿರಬೇಕು.”
” ಆಯ್ತು ದಣೇರ. ದಣೇರಾ….. ಅಲ್ಲಿ ನೀರು ಪಾರು ಅನುಕೂಲ ಐತಿರೀ… ಸಾಲೀನು ಸನೇವು ಅಕ್ಕೇತಿ, ನಾನು ಒಬ್ನೇ ಬೇರೆ ಇರ್ತೀನಿ ಅದ್ಕ…… ಅಲ್ಲೇ……  ಚನ್ನಯ್ಯನ ಮನೇಗಾ ಇರ್ತೀನಿ ರೀ ” ಅಂದೆ
” ಏ ಇಲ್ಲ, ಇಲ್ಲ. ನಾನು ಅದನೆಲ್ಲ ಕೇಳೋದಿಲ್ಲ. ಸಿದಾ ಬಂದು ನಾವು ಕಟ್ಟಿಸಿದ್ದ ಮನೇಗಾ ಇರಬೇಕು.ಮತ್ತಾ ಯಾರಿಗೀ ಕಟ್ಟಿಸಿವಿ ಅದನ್ನ”
“ಅಯ್ತು ರೀ” ಅಂತಂದು ಅಲ್ಲಿಂದ ಹೊರಟೇ.
ಎರಡು ದಿನಗಳಾವರೆಗೆ ಅತ್ತ ಹೋಗೋದು ಬಿಟ್ಟೆ. ಮರೀತಾರೇನು ಅಂತ. ಶಾಲೆಗೆ ಇದ್ದ ಗಳಿಗೆಯಲಿ ಒಬ್ಬ ಆಳನ್ನ ಹೇಳಿ ಕಳುಹಿಸಿದರು.
” ಹಿಂಗರೀ ದಣೇರು ಕರಿಯಾಕುಂತಾರ ” ಅಂತ ಅಂದ ಬಂದ ಆಳು.
“ಇಲ್ಲಾಪ ನಾನು ಸಾಲೀ ಬಿಟ್ಟ ಮ್ಯಾಲೇ ಬರ್ತೀನಿ ಅಂತ ಹೇಳು ” ಅಂತಂದೆ
ಆಳು ” ಇಲ್ರೀ ಈಗಲೇ ಬರಬೇಕಂತೆ ” ಅಂತಂದ. ನಾನು ನೇರ ಹೆಡ್ ಮಾಸ್ತರರ ಬಳಿ ಹೋಗಿ ಕೇಳಿದೆ. ಅವರು ತಕ್ಷಣನೇ
” ಹೋಗು ತಡಮಾಡದೇ ಹೋಗಿ ಕಂಡು ಬಾ… ಹೋಗೂ ” ಅಂದ್ರು ನಾನು ಸೀದಾ ಆಳುವಿನ ಜೊತೆ ಹೊರಟೆ.
” ಯಾಕಪ ಮಾಸ್ತರ ಮೊನ್ನೆ ಹೇಳಿದ್ದು ಕಿವ್ಯಾಗ ಬೀಳಲಿಲ್ಲ ಏನು ನಿನಗಾ “
” ಇಲ್ಲರೀ ದಣೇರಾ… ಬರ್ತೀನಿ ರೀ..”
” ಎಂದು ಬರಾವ ನೀನು “
” ನಾಳೆ ಬರ್ತೀನಿ ರೀ “
” ಮಾಸ್ತರಾ… ಬಾಡಿಗೀ ಏಟು ಗೊತ್ತೈತೇನು ? ಅದ್ಕ ಎಲ್ಲ ಸೇರಿ ಎಂಟ್ರೂಪೈ ನೋಡು ಏಂಟ್ರೂಪೈ. ” ಅಂದ್ರು.
ನಾನು ” ಆಯ್ತ ರೀ  ದಣೇರಾ  ಅಂದೆ. “
” ನೋಡಾಪಾ ಮಾಸ್ತರಾ ಅದರಲ್ಲಿ ಲೈಟು-ಗೀಟೂ ಎಲ್ಲಾ ಬಂತೂ.  ಏನಾದ್ರೂ ಬೇಕಾದ್ರೆ ಕೇಳು. ಇಲ್ಲೇ ನಮ್ಮ ಹುಡುಗ್ರು ಇರ್ತಾವೇ..  ಮೊಸರು- ಪಸರು, ಮಜ್ಜಿಗಿ-ಪಜ್ಜಿಗಿ  ಯಾವುದಕ್ಕೂ ಸಂಕೋಚ ಪಡದೇ ಕೇಳು” ಅಂತಂದ್ರು.
ನನ್ನ ಜೊತೆ ಇದ್ದ ಒಂದು ಟ್ರಂಕ್,  ಚಾಪೆ, ಕೊಡಪಾನದ ಸಮೇತ ಬಂದು ದಣೇರು ಹೇಳಿದ್ದ ಕೊಣೆಯಲ್ಲಿ ವಾಸವಾದೆ.
ಇದು ನಾನು ೧೯೭೮ ರಲ್ಲಿ ನೌಕರಿಗೆ ಸೇರಿದಾಗ ಆದದ್ದು. ರಾಯಚೂರಿನ ಸಣ್ಣ ಹಳ್ಳಿಯಲ್ಲಿ ಯಾವುದೇ ಬಸ್ಸು ಸಂಚಾರವಿರದ ಜಾಗಕ್ಕೆ ನನ್ನ ನೇಮಕವಾಗಿತ್ತು. ಬಸ್ಸಿನ ಜಾಡು, ಊರಿಗೂ ಸರಿ ಸುಮಾರು ೪ ರಿಂದ ೫ ಕಿ.ಮೀ ನಡುಗೆಯಲ್ಲಿ ಸಾಗಬೇಕಿತ್ತು.