ಬುಧವಾರ, ಮಾರ್ಚ್ 7, 2012

ಶಿಕ್ಷಣ ಮತ್ತು ಮಕ್ಕಳ ರಂಗಭೂಮಿ


                                         
                                            ‘ಶಿಕ್ಷಣದಲ್ಲಿ ರಂಗಭೂಮಿ’ ಶೀರ್ಷಿಕೆಯಲ್ಲಿ ಇಂದು ಕನ್ನಡದ ಮಕ್ಕಳ ರಂಗಭೂಮಿಯು ಸೃಜನಾತ್ಮಕವಾಗಿದೆ. ನಾಟಕದಲ್ಲಿ ಮಕ್ಕಳು ತೊಡಗಿಳ್ಳುವುದು ಇಂಗ್ಲಿಷ ಮಾದರಿ ಶಿಕ್ಷಣ ಬಂದಂದಿನಿಂದಲೂ ( ಮಿಷನರಿಗಳು ಕರಾವಳಿ ಸೀಮೆಯಲ್ಲಿ ಮೊದಲು ಶಾಲೆಯಲ್ಲಿ  ನಾಟಕ ಆಡಿಸಿರುವ ದಾಖಲೆ ಸಿಗುತ್ತವೆ) ನಿರಂತರವಾಗಿ  ನಡೆಯುತ್ತ ಬಂದಿದೆ. ಅಷ್ಟೆ ಅಲ್ಲ ಕತೆ ಹೇಳುವ, ನಟಿಸುವ, ಹಾಡುವ,ಕುಣಿಯುವ ಪ್ರದರ್ಶನ ಮಾದರಿಗಳೆಲ್ಲವೂ ಮುಗ್ಧ ಮಕ್ಕಳ ಮನಸ್ಸಿನ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡೆ ಬೆಳೆದಂತವು. ಹೀಗೆ ಮುಗ್ಧ ಸ್ವಭಾವವನ್ನು ಮಕ್ಕಳ ಗುಣಲಕ್ಷಣದಲ್ಲಿ ಹೋಲಿಸುವುದನ್ನು ಗಮನಿಸಿದಾಗ ಅನುಕರಣೀಯವಾದ   ಕಲೆಗಳೆಲ್ಲವೂ ನೋಡುಗರನ್ನು, ಕೇಳುಗರನ್ನು,ಒಟ್ಟು ಸಹೃದಯರನ್ನ ವಯಸ್ಸಿನ ಅಡಚನೆಯಿಲ್ಲದೆ ಮಂತ್ರಮುಗ್ಧರನ್ನಾಗಿಸಿ ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ. ಆದ್ದರಿಂದ ಎಲ್ಲ ಪ್ರೇಕ್ಷಕರೂ ಮಕ್ಕಳ ರೀತಿಯಲ್ಲಿ ಪ್ರದರ್ಶನಗಳನ್ನು ಎದುರುಗೊಳ್ಳುವುದರಿಂದಾಗಿ ಮಕ್ಕಳ, ಹೆಂಗಸರ, ಯುವಕರ, ದೊಡ್ಡವರ ರಂಗಭೂಮಿಯಂದು ವರ್ಗೀಕರಿಸುವುದು ಅಷ್ಟು ಸರಿಯಾದ ಕ್ರಮ ಆಗಲಿಕ್ಕಿಲ್ಲ  ಎನಿಸುತ್ತದೆ. ಆದರೆ,,, ನಾತಗರೀಕತೆಯ ವಿಕಾರಗಳು ಮಕ್ಕಳನ್ನು ಮಕ್ಕಳನ್ನಾಗಿರಿಸಿ, ಅವರಷ್ಟಕ್ಕೆ ಅವರನ್ನು ಆಡಿಕೊಳ್ಳಲು ಬಿಡದೆ ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಚಟುವಟಿಕೆಗಳನ್ನು ನಡೆಸಬೇಕಾದ ಅನಿವಾರ್ಯತೆ ಬಂದೊದಗಿದೆ.


                                                      ಆಡಿ-ನೋಡಿ-ಮಾಡಿ ಅನುಭವಿಸುತ್ತ ಒಂದಾಗಿ ಬೆರೆತು-ಚಟುವಟಿಕೆಯಿಂದ ಇದ್ದಾಗ ಮಕ್ಕಳ ಆಸಕ್ತಿ ಇಮ್ಮಡಿಸುತ್ತದೆ, ಕಣ್ಣು ಕುತೂಹಲಗೊಂಡು ಹೊಸ ಆಟಿಗೆಯ ಒಂದೊಂದು ಭಾಗಗಳನ್ನು ಬಿಚ್ಚಿ ನೋಡುವ ಕೌತುಕದಂತೆ ಎಳೆಯರ ಗ್ರಹಣ ಶಕ್ತಿ ಸಶಕ್ತವಾಗಿ ಸಮೃದ್ಧಗೊಳ್ಳುತ್ತದೆ. ಹಾಗಾಗಿ ಲಲಿತಕಲೆಗಳ ಒಡನಾಟದಲ್ಲಿ ಮಕ್ಕಳು ಆಡುತ್ತ-ಹಾಡುತ್ತ, ಕುಣಿದು ಕುಪ್ಪಳಿಸಿ ಕೇಕೇ ಹಾಕಿ ನಲಿದಾಡುತ್ತ ಕಲಿಯುತ್ತಾರೆ. ಅದಲ್ಲದೆ ಕನ್ನಡದ ಮಟ್ಟಿಗೆ ಮಕ್ಕಳ ರಂಗಭೂಮಿ ಅಷ್ಟಾಗಿ ಬೆಳೆಯಲಿಲ್ಲ, ಆ ಕುರತಾಗಿ ಹೆಚ್ಚು ಕೆಲಸಗಳಾಗಿಲ್ಲ, ಹೆಚ್ಚು ನಾಟಗಳು ಬಂದಿಲ್ಲ, ಬರೆದ ನಾಟಕಗಳ ಕರ್ತೃಗಳೂ ಆ ಕೃತಿಗಳನ್ನು ತಮ್ಮ ಪ್ರಮುಖ ಕೃತಿಗಳ ಸಾಲಿನಲ್ಲಿ ಸೇರಿಸಿಲ್ಲ ಎಂಬೊಂದು ಮಾತು ಹಾಗೇ ಉಳಿದಿದೆ. ಹೌದು, ಮಕ್ಕಳ ನಾಟಕವೆಂದರೆ ಶಾಲೆಯ ವಾರ್ಷಿಕೋತ್ಸವ, ಗಣೇಶೋತ್ಸವ, ಪ್ರತಿಭಾಕಾರಂಜಿ, ಮುಂತಾದ ವಿಶೇಷ ಸಂದರ್ಭದಲ್ಲಿ ಮಾತ್ರ ಮಾಡುವಂಥದ್ದು ಅನ್ನೋದು ಈಗಲೂ ಉಳದು ಬಂದಿರುವ ವಾಡಿಕೆ ಆಗಿದೆ. ಇಲ್ಲವೇ ಬೇಸಿಗೆಯ ರಜೆಕಳೆಯಲು ಮೋಜಿನ ಸಂಗತಿಯಾಗಿ ಕೆಲವು ಪೋಷಕರಿಗೆ ನಾಟಕ ಬೇಕು. ಆಗ ರಂಗಶಿಬಿರಕ್ಕೆ ಎಲ್ಲಿಲ್ಲದ ಬೇಡಿಕೆ ತಾನಾಗಿಯೇ ಬಂದುಬಿಡುತ್ತದೆ. ಎಷ್ಟು ದುಡ್ಡು ಕಟ್ಟಿಯಾದರೂ ಸರಿ ಮಕ್ಕಳನ್ನು ಶಿಬಿರಕ್ಕೆ ಸೇರಿಸಿಬಿಡುತ್ತಾರೆ. ಒಂದು ಮಾತು- ಇಂಥ ಶಿಬಿರಗಳು ಯಾವೊಂದು ಸೃಜನಾತ್ಮಕ ಕಲಿಕೆಯನ್ನೂ ರೂಢಿಸುವುದಿಲ್ಲ ಮತ್ತು ಈ ತೆರನಾದ ಕಾರ್ಯಾಗಾರಗಳು ಮಕ್ಕಳ ಮನಸ್ಸಿನ ಮೇಲೆ ಏನೂ ಪರಿಣಾಮ ಮಾಡುವುದಿಲ್ಲ. ಯಾಕೆಂದರೆ ಆಸಕ್ತ ಪೋಷಕರೂ ಮತ್ತು ಶಾಲಾ ಮಾಸ್ತರರೂ ನಾಟಕ ಬಯಸುವುದು ರಜೆಯ ಸಂದರ್ಭಕ್ಕೆ, ಶಾಲಾ ವಾರ್ಷಿಕೋತ್ಸವಕ್ಕೆ,ಪ್ರತಿಭಾಕಾರಂಜಿ ಸಂದರ್ಭಕ್ಕೆ ಮಾತ್ರ ಆಗಿರುತ್ತದೆ. ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳು ಸ್ವಯಂಪ್ರೇರಿತರಾಗಿ ಕಲಿಯಲಿ ಎಂದು ಚಟುವಟಿಕೆಗಳನ್ನು ಪಠ್ಯೇತರವಾಗಿ ಅಭ್ಯಾಸಕ್ಕಿಟ್ಟರೆ ಅದು ಕೂಡಾ ಕಲಿಸುವ ಮಾದರಿಯಾಗಿಬಿಟ್ಟಿರುವುದು ವಿಚಿತ್ರ ಸಂಗತಿ.


                                                ಬೇಸಿಗೆ ರಂಗಶಿಬಿರಗಳು ಸ್ಪರ್ಧಾ ಕಣಕ್ಕೆ ಮಕ್ಕಳನ್ನು ತಯಾರ ಮಾಡುವ ವಿಕಸನ ಶಿಬಿರಗಳಾಗಿರುವುದು, ವ್ಯಕ್ತಿತ್ವ ನಿರ್ಮಾಣ ಮಾಡುವ ಕಾರ್ಯಾಗಾರಗಳಾಗಿರುವುದು ಕೊಂಚ ಬೇಸರದ ಸಂಗತಿ. ಆದರೆ ನಿಜವಾಗಿಯೂ ನಾಟಕವೆಂದರೆ ಮಕ್ಕಳ ಬದುಕನ್ನ ಅರಳಿಸುವ ಕ್ರಿಯೆ, ಮಗು ಪ್ರಪಂಚವನ್ನು ಅರಿಯುವ, ತಿಳಿದುಕೊಳ್ಳುವ, ಈ ಜಗತ್ತಿನೊಂದಿಗೆ ವ್ಯವಹರಿಸುವ, ತನ್ನನ್ನು ಇತರರೊಂದಿಗೆ ಮುಕ್ತವಾಗಿರಿಸಿಕೊಳ್ಳುವ, ಇಲ್ಲದ ಧಿಮಾಕನ್ನು ತೊರೆಯುವ ಸರಳತೆಯನ್ನ ರೂಢಿಸುವ ಮತ್ತು ಸಮುದಾಯ ಪ್ರಜ್ಞೆಯನ್ನ ಬೆಳೆಸುವ, ನೈತಿಕತೆಯನ್ನ ಅವನಿಗರಿವಿಲ್ಲದೆ  ಕಲಿಸುವ ದೊಡ್ಡ ಪ್ರಕ್ರಿಯೆ ನಾಟಕ. ಹೀಗೆ ಶಿಕ್ಷಣದಲ್ಲಿ ರಂಗಭೂಮಿ ತನ್ನ ಕಾರ್ಯ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡದ್ದೆ ಆದರೆ ನಿಜಕ್ಕೂ ಮಕ್ಕಳ ರಂಗಭೂಮಿ ಕೆಲಸ ಕನ್ನಡದಲ್ಲಿ ನಡೆಯುತ್ತದೆ ಎಂದು ಹೇಳಬಹುದು.

ಶುಕ್ರವಾರ, ಮಾರ್ಚ್ 2, 2012