ಮಂಗಳವಾರ, ಏಪ್ರಿಲ್ 21, 2020

ಶಿಕ್ಷಣದಲ್ಲಿ ಭಾಷಾ ಗ್ರಹಿಕೆ ಮತ್ತು ಅಭಿವ್ಯಕ್ತಿ ಸಾಧನವಾಗಿ ಮಕ್ಕಳ ರಂಗಭೂಮಿ - ಗುರುರಾಜ ಎಲ್


ಮಕ್ಕಳ ರಂಗಭೂಮಿಯಲ್ಲಿ ಭಾಷೆಯ ಗ್ರಹಿಕೆಯ ಕುರಿತು ನಾವು ಅತ್ಯಂತ ಜವಾಬ್ದಾರಿಯುವಾಗಿ ಹೆಜ್ಜೆಯನ್ನು ಇಡಬೇಕಾಗಿದೆ. ಭಾಷೆಯನ್ನು ಕಲಿಸುವುದು ಎಂದು ಹೇಳಲಿಕ್ಕೆ ಆಗುವುದಿಲ್ಲ. ಮಕ್ಕಳ ಗ್ರಹಿಕೆಯ ಆಧಾರದಲ್ಲಿ ನಾವು ರಂಗಭೂಮಿಯ ಅಭಿವ್ಯಕ್ತಿ ಸಾಧನವಾಗಿ ಪ್ರಕ್ರಿಯೆಗೆ ಒಳ ಪಡಿಸಬೇಕಾಗಿದೆ. ಭಾಷೆಯನ್ನು ಗ್ರಹಿಕೆಯಲ್ಲಿ ಜಾಗತಿಕವಾಗಿ ನಮ್ಮ ಹಲವು ವಿದ್ವಾಂಸರು ಈಗಾಗಾಲೇ ತಮ್ಮ ಗಮನವನ್ನು ಸೆಳೆದಿದ್ದಾರೆ. ನಾನು ಅದರಿಂದ ಸ್ವಲ್ಪ ಹೊರ ಬಂದು ವಿಚಾರವನ್ನು ಹಂಚಿಕೊಳ್ಳಲು ಬಯಸುವೆ. 
ಸ್ಥಳೀಯತೆಯ ನೆಲೆಯಲ್ಲಿ ಭಾಷಾ ಗ್ರಹಿಕೆ ಮತ್ತು ಅಭಿವ್ಯಕ್ತಿ ಸಾಧನವಾಗಿ ಮಕ್ಕಳ ರಂಗಭೂಮಿ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದನ್ನು ನಾನಿಲ್ಲಿ ಸರಳೀಕರಿಸಲು ಪ್ರಯತ್ನಿಸುತ್ತೇನೆ. ರಂಗಭೂಮಿಯಲ್ಲಿ ತಮ್ಮದೇ ಚಾಪನ್ನು ಮೂಡಿಸಿದ್ದ ಬಿ.ವಿ ಕಾರಂತರು ತಮ್ಮ ನಾಟಕಗಳನ್ನು ಕಟ್ಟುವಾಗ ಬಳಸುತ್ತಿದ್ದ ಧ್ವನಿಯ ವಿನ್ಯಾಸವನ್ನು ಗಮನಿಸಿದರೇ ನಮಗೆ ಅವರ ಇನ್ನುಳಿದ ಎಲ್ಲ ನಾಟಕಗಳಲ್ಲಿ ಆ ಸೂಕ್ಷ್ಮ ರೀತಿಯಲ್ಲಿ ಧ್ವನಿಯ ಹಲವು ತಂದು ನಟರ ಜೊತೆಗೆ ಪ್ರೇಕ್ಷಕರನ್ನು ಕಟ್ಟಿ ಹಾಕುತ್ತದ್ದರು. ಪಂಜರ ಶಾಲೆಯಲ್ಲಿ ಆ ಪಕ್ಷಿಗಳು ರಾಜೋಧ್ಯನದಲ್ಲಿ ಬಂದು ಹಣ್ಣನ್ನು ತಿನ್ನುವಾಗ ತನ್ನ ಬಳಗವನ್ನು ಕರೆಯಲು ಬಳಸುವ ರೀತಿ
ಟೇಂ....ಟೇಂ....
ಅಪ್ಪ ಅಮ್ಮ
ಟೇಂ....ಟೇಂ....
ಚಿಕಪ್ಪ ದೊಡಪ್ಪ
ಟೇಂ....ಟೇಂ....
ಬನ್ನಿ ಬನ್ನಿ
ಟೇಂ....ಟೇಂ....
ಹಣ್ಣು ತಿನ್ನಿ
ಟೇಂ....ಟೇಂ....

ಹೀಗೆ ಕೆ.ರಾಮಯ್ಯ ಅವರ ಒಗಟಿನ ರಾಣಿ ನಾಟಕವನ್ನು ನೋಡುವುದಾದರೇ ಇಡೀ ಉತ್ಸಾವವೇ ಸಾಗಿದಂತೆ   ತನ್ನ ಧ್ವನಿಯನ್ನು ಭಾಷೆಯನ್ನಾಗಿ ಬಳಸುವುದಕ್ಕೆ ನಮ್ಮ ಮಕ್ಕಳ ರಂಗಭೂಮಿಯಲ್ಲಿ ಹೆಚ್ಚಿನ ಸಾಧ್ಯತೆಗಳಿವೆ. ಮಕ್ಕಳು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವಾಗ ಈ ಮ್ಯಾಜಿಕ್‍ನ್ನು ತುಂಬಾ ಆಸಕ್ತಿಯಿಂದ ಗ್ರಹಿಸುವುದರ ಜೊತೆಗೆ ತುಂಬಾ ಆಪ್ತತೆಯಿಂದ ಸ್ವೀಕರಿಸಿದ್ದರು ಹಾಗೇ ಇಂದಿಗೂ ಸ್ವೀಕರಿಸುತ್ತಿದ್ದಾರೆ. ಮಕ್ಕಳ ರಂಗಭೂಮಿಯಲ್ಲಿ ಮೊದಲು ನಾವು ರಚನೆಯಾದ ನಾಟಕಗಳನ್ನು ಗಮನಿಸ ಬೇಕಾಗುತ್ತದೆ. ಒಗಟಿನ ರಾಣಿಯಲ್ಲಿ ಕೆ.ರಾಮಯ್ಯ ಅವರು ಸರಳ ಹಾಗೂ ಸುಲಲಿತವಾಗಿ ಮಕ್ಕಳ ಬಾಯಲ್ಲಿ ಹರಿದಾಡುವಂಥ ಶಬ್ದಗಳ ಮೂಲಕ ಹೆಣೆದಿರುವುದು ತುಂಬ ಸುಂದರವಾಗಿದೆ.

ಹಗಲೆಲ್ಲ ಹಾಳ್ ತೋಟ
ರಾತ್ರಿ ಹೂವಿನ ತೋಟ
ಹೂ ಕುಯ್ಯೋರಿಲ್ಲ ಹೂ ಮುಡಿಯೋರಿಲ್ಲ
ಇದು ಯಾವ ತೋಟ ಹೇಳು

ಎಂಬ ಸಾಲುಗಳು ಭಾಷಾ ಗ್ರಹಿಕೆಯಲ್ಲಿ ನಾವೀನ್ಯತೆಯನ್ನೇ ತಂದು ಕೊಡುತ್ತದೆ. ಒಗಟುಗಳನ್ನು ಹಿಡಿದು ಮಕ್ಕಳ ಮನೋ ವಿಕಾಸವನ್ನು ಅದ್ಬುತವಾಗಿ ಕಟ್ಟಿ ಕೊಟ್ಟಿದ್ದಾರೆ. ಮನೆಯಲ್ಲಿ ಹಲವು ಸಂದರ್ಭಗಳಲ್ಲಿ ಹಿರಿಯರು ಒಗಟಿನ ರೂಪದಲ್ಲಿ ಬುದ್ದಿವಾದವನ್ನು ಹೇಳುವಾಗ ಬಳಸುವುದನ್ನೇ ಕೆ ರಾಮಯ್ಯ ನವರು ಮಕ್ಕಳಿಗಾಗಿ ಸುಂದರವಾಗಿ ಕಟ್ಟಿ ಕೊಟ್ಟಿದ್ದಾರೆ. ಇಡೀ ನಾಟಕ ಪೂರ್ತಿ ಹೀಗೆ ಕಣ್ಣಿಗೆ ಕಿವಿಗೆ ಇಂಪನ್ನು ನೀಡುತ್ತದೆ. ಮನೆಯ ಭಾಷೆಯನ್ನು ರಂಗಭಾಷೆಯಾಗಿ ಮಕ್ಕಳ ಅಭಿವ್ಯಕ್ತಿ ಸಾಧನವಾಗಿ ಬಳಸುವ ರೀತಿಯಾಗಿ ಕಂಡು ಬರುತ್ತದೆ. ಮಕ್ಕಳ ಮನಸ್ಸನ್ನು ಅರಳಿಸಿ, ಕುತೂಹಲವನ್ನು ಕೆರೆಳಿಸಿ, ಕಲ್ಪನೆಯ ರೂಪಿಸಿ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಮಕ್ಕಳ ರಂಗಭೂಮಿ ಕಾರ್ಯ ನಿರ್ವಹಿಸುತ್ತದೆ.

ನಾನು ನಮ್ಮ ಶಾಲೆಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಅನೇಕ ಬಾರಿ ಮಕ್ಕಳ ಮನೆ ಬೇಟಿ ಮಾಡುವಾಗ ಕಂಡ ಭಾಷಾ ವೈವಿಧ್ಯತೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಮೂಡಿ ಬಂದಿದೆ. ಪ್ರತಿ ಹಳ್ಳಿಯಲ್ಲೂ ಹಾಡುಗಳನ್ನು ಹಾಡುವುದು ವಾಡಿಕೆ. ಸಂಪ್ರಾದಾಯಿಕ ಹಾಗೂ ಸಂಪ್ರಾದಾಯಿಕವಲ್ಲದ ಜನಪದವನ್ನು ಕಟ್ಟಿ ಹಾಡುವಾಗ ತಮ್ಮ ಎಲ್ಲ ಕೆಲಸಗಳು ಸರಳವಾಗಿ ಸಾಗುವವು ಎಂದು ಇವರನ್ನು ನೋಡಿದರೆ ಕಂಡು ಬರುತ್ತದೆ. ಹಿಂದಿನ ಕಾಲದಲ್ಲಿ ಗಿರಣಿಗಳು ಇಲ್ಲದಂತ ಸಮಯದಲ್ಲಿ ಪ್ರತಿ ಮನೆಯಲ್ಲು ಬೀಸುವ ಕಲ್ಲುಗಳಿದ್ದವು. ಈ ಬೀಸುವ ಕಲ್ಲುಗಳಲ್ಲಿ ಧಾನ್ಯಗಳನ್ನು ಹಾಕಿ ಬಿಸುತ್ತ ಹಾಡುಗಳನ್ನು ಮಹಿಳೆಯರು ಹಾಡುತ್ತಾ ಇದ್ದರು. ಮಹಿಳೆಯರಿಗೆ ಮೀಸಲಾದ ಈ ಜಾನಪದ ಗೀತೆಗಳು ಬೀಸುವ ಕಲ್ಲಿನ ಪದಗಳು. ಮುಖ್ಯವಾಗಿ ಭಾವನಾತ್ಮಕ ಸಂಬಂಧ ಕುರಿತು ಹಾಡುತ್ತಾರೆ. ಮಹಿಳೆಯರಿಗೆ ಸಹಾಯ ಮಾಡಿದ ಮಹನೀಯರ ಕುರಿತು, ಅಣ್ಣ-ತಮ್ಮಂದಿರನ್ನು ಕುರಿತು, ತಂದೆ-ತಾಯಿಯ ಕುರಿತು, ತವರು ಮನೆಯ ಪ್ರೀತಿ-ಪ್ರೇಮದ ಕುರಿತು ಮಹಿಳೆಯರು ಬೀಸುವ ಕಲ್ಲನ್ನು ಬೀಸುತ್ತಾ ಈ ಪದಗಳನ್ನು ಹೇಳುತ್ತಾರೆ. ಮುಖ್ಯವಾಗಿ ಬೀಸುವ ಸಮಯದಲ್ಲಿ ಆಗುವ ಆಯಾಸವನ್ನು ನಿವಾರಿಸಿಕೊಳ್ಳಲು ಈ ಹಾಡುಗಳನ್ನು ಹೇಳುತ್ತಾರೆ. ಇಂಥಹ ಧ್ವನಿಗಳು ನಮ್ಮ ಮಕ್ಕಳಿಂದ ಕಣ್ಮರೆಯಾಗುವ ಕಾಲದಲ್ಲಿ ನಾವು ಅವರ ಗ್ರಹಿಕೆಯ ಆಧಾರದಲ್ಲಿ ಕಲಿಕಾ ಪ್ರಕ್ರಿಯೆಯನ್ನು ರೂಪಿಸಬೇಕಾಗಿದೆ. ಮಕ್ಕಳ ರಂಗಭೂಮಿ ಇವೆಲ್ಲವುಗಳನ್ನು ಒಳಗೊಂಡಂತೆ ಕಾರ್ಯ ನಿರ್ವಹಿಸುವುದರಲ್ಲಿ ಹಿಂದೆ ಬಿದ್ದಿಲ್ಲ.
ಬಿ.ವಿ ಕಾರಂತ, ಸಿ.ಬಸವಲಿಂಗಯ್ಯ, ಎ.ಎಸ್.ಮೂರ್ತಿ, ಐ.ಕೆ ಬೊಳುವಾರ, ಇಕ್ಬಲ್ ಅಹ್ಮದ್, ನಟರಾಜ ಹೊನ್ನವಳ್ಳಿಯಂಥಹವರು ನಂತರದಲ್ಲಿ ಬಂದ ನೀನಾಸಂ ರಂಗ ಶಿಕ್ಷಣ ಪದವಿ ಪಡೆದ ಅನೇಕರು ಮಕ್ಕಳ ರಂಗಭೂಮಿಯ ಕುರಿತು ತುಂಭ ಗಂಭೀರವಾದ ಕಾರ್ಯಗಳನ್ನು ಮಾಡಿದ್ದಾರೆ.
ಶಿಕ್ಷಣದಲ್ಲಿ ಮಕ್ಕಳ ಭಾಷಾ ಗ್ರಹಿಕೆ ಹಾಗೂ ಅಭಿವ್ಯಕ್ತಿ ಸಾಧನವಾಗಿ ಮಕ್ಕಳ ರಂಗಭೂಮಿಯಲ್ಲಿ ಹೇಗೆ ಬದಲಾವಣೆಗಳು ತೆರದುಕೊಂಡಿವೆ ಎನ್ನುವುದನ್ನು ಕಳೆದ 10-11 ವರುಷಗಳಿಂದ ಶಾಲೆಯಲ್ಲಿ ನಾಟಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಎಲ್ಲರೂ ವಿಶಿಷ್ಟವಾದ ಪ್ರಯತ್ನಗಳನ್ನು ನಾವು  ಕಾಣಬಹುದಾಗಿದೆ.


ನಾನು ಓದಿದ ಇತರೆ ಮಕ್ಕಳ ನಾಟಕಗಳು :

ನನ್ನ ಗೋಪಾಲ - ಕುವೆಂಪು
ಜಯಂಟ್ ಮಾಮಾ – ಕೆ.ವಿ.ಸುಬ್ಬಣ್ಣ
ಒಗಟಿನ ರಾಣಿ – ಕೆ.ರಾಮಯ್ಯ
ನಾಯಿಮರಿ – ವೈದೇಹಿ
ಕತ್ತಲೆ ನಗರ – ವೈದೇಹಿ
ಪುಸ್ತಕದ ಅಜ್ಜಿ - ಐ.ಕೆ ಬೊಳುವಾರ
ಪಂಜರ ಶಾಲೆ - ಬಿ.ವಿ.ಕಾರಂತ
ಕನಸಿನೂರು – ರಾಘು ಶಿವಮೊಗ್ಗ