ಸೋಮವಾರ, ಮಾರ್ಚ್ 23, 2015

ಪ್ರಶಂಸನಾ ಪತ್ರ


ಭಾನುವಾರ, ಮಾರ್ಚ್ 22, 2015

'ಯಾನುಲ್ ಡೇ ಮಾಡೇವಿ.......

'ಯಾನುಲ್ ಡೇ ಮಾಡೇವಿ. . . . ನೋಡಾಕ ಬರೋರೇನ?' - ಶಾಲಾ ವಾರ್ಷಿಕೋತ್ಸವಗಳ ಬಗ್ಗೆ ಬರೆದಿರುವುದು, ಒಮ್ಮೆ ತಪ್ಪದೇ ಓದಿ ಆಮೇಲೆ ಹೇಳಿ ಹೇಗಿದೆ ಎಂದು...
'ಸರಾ ಏನೇನ್ ತಗೋಬೇಕ್ರಿ' ಅಂದೆ ರಂಗನಾಥಸರಿಗೆ.
'ಏ ಏನಿಲ್ರಿ ಎರಡು ಶಾಲ್ ತಾಟ್,ಹಣ್ಣು ಮತ್ತ್ ಒಂದೆರಡು ಗಿಫ್ಟ್ ತಗೋಳ್ಳೋಣು' ಅಂದ್ರು.' ಅಲ್ರೀ ಮಾಡೂದು ಯಾನುವಲ್ ಡೇ, ಸನ್ಮಾನ ಯಾರಿಗೆ' ಅಂದೆ. 'ಸ್ಟೇಜು ಸೌಂಡಿಗೆ ರೊಕ್ಕಾ ಕೊಟ್ಟಾರಲಾ ಅವರಿಗೆ' ಅಂದ್ರು. ಒಂದು ಕೈಲಿ ಸಾಯ ಮಾಡಿದ್ರ ಇನ್ನೊಂದ್ ಕೈಗ್ ಗೊತ್ತಾಗಬಾರದು ಅಂತಾರಲ್ರೀ ಸರಾ. ಮತ್ತಿದೇನು ಅವರು ಕೊಟ್ಟ ಯಾಲ್ಡೆಲ್ಡ್ ಸಾವ್ರದಾಗ ಐದೈದನೂರ್ ಸನ್ಮಾನಕ್ಕ ಖರ್ಚ ಆಗ್ತದಲ್ರೀ ಅಂದೆ. ಇಲ್ರೀ ಸರಾ ಸನ್ಮಾನಕ್ಕ ಬ್ಯಾರೇನ ರೊಕ್ಕ ಕೊಟ್ಟಾರ ಅಂದ್ರು. ಛಲೋ ಆತ್ ನಡೀರಿ ಅಂದೆ. ಸರಾ ಇವ್ರಿನ್ನಾ ಪಾಡ. ಇನ್ನೊಂದಿಬ್ರು ಬಂದಿದ್ರು. ಸನ್ಮಾನಕ್ಕೆಷ್ಟ ಆಗ್ತದ್ರಿ ಕೊಡ್ತೀವಿ ನಮಗೂ ಮಾಡ್ರಿ ಅನ್ನಾಕತ್ತಿದ್ರು ಅಂದ್ರು. ಅದಕ್ಕಂತಾನೇ ಬಾಳ ಮಂದಿ ಅದಾರಲ್ಲ ಅಲ್ಹೋಗಿ ರೊಕ್ಕ ಕೊಟ್ ಸನ್ಮಾನಮಾಡಿಸ್ಕೊಂಬರ್ರಿ ಅಂದ್ರಿಲ್ಲೋ ಅಂದೆ. ಅದ್ನೇನ ಮಾಡೋರು ಬಿಡ್ರಿ ಸರಾ ಲಗೂ ಲಗೂ ಸಂತಿ ಮಾಡ್ಕೊಂಡ ಹೋಗೂಣು ನಡೀರಿ ಅಂತ ಅವಸರಮಾಡಿದ್ರು.ನೂರಿನ್ನೂರು ಕೊಟ್ಟೋರಿಗ್ ಗುಲಾಬಿಹೂ, ಐನೂರು ಕೊಟ್ಟೋರಿಗೆ ಮಾಲಿ, ಸಾವ್ರದ ಮ್ಯಾಲ ಕೊಟ್ಟೋರಿಗೆ ಶಾಲಾಕಿ ಸನ್ಮಾನ ಮಾಡಾಕ ಎಲ್ಲಾ ತೊಗೊಂಡು ಮನಿಕಡೆ ಹೊಂಟ್ವಿ.
*************
ಲೇ ವಿನ್ಯಾ ಮೈಕಲ್ ಜಾಕ್ಸನ್ ಸತ್ತೋಗಿ ಬಾಳ ದಿನಾ ಆತಲಾ ಇಲ್ಯಾಂಗ ಬಂದ್ರು ಅಂದೆ. ಸರಾ ಅವಾ ಸಿದ್ಯಾ ರೀ. ಡಾನ್ಸಿಗ್ ರಡಿ ಆಗಿ ಊರಾಗ ಅಂವಂದ್ ಅರವಿ ತೋರ್ಸಕೋಂತ ಹರಗ್ಯಾಡಾಕ ಹೊಂಟಾನ ಅಂದ ವಿನ್ಯಾ. ಅಲಲೇ ಪ್ರೋಗ್ರಾಂ ಇರೂದು ಸಂಜೀಮುಂದಲ ಇಟ್ ಲಗೂ ರಡಿ ಆಗ್ಯಾನಾ ಅಂದೆ. ಸರಾ ಕಾವೇರಿ ನಿನ್ನಿ ರಾತ್ರಿನೇ ಭಾರತಾಂಬೆ ಡ್ರೆಸ್ ಹಾಕ್ಕೊಂಡ್ ರಡಿಯಾಗಿ ಮಕ್ಕೊಂಡಿದ್ಲಂತ್ರಿ. ಈಗ ನೋಡಿದ್ರ ಸಿಟ್ಟಿಗ್ ಬಂದಿರೋ ಚಾಮುಂಡಿಗತೆ ಕಾಣಾಕತ್ತಾಳ್ರಿ ಅಂದ. ಇನ್ನ ಸಂಜೀಮಟ ಹಿಂಗ ಇದ್ರ ಯಾರ್ಯಾರ್ ಹೆಂಗೆಂಗ್ ಕಾಣ್ತಾರೋ. . . ದೇವರೇ ನೀ ಇದ್ರ ನಮ್ನೂ ಕಾಪಾಡಪಾ.. ಅಂತ ಮನಸಿನೊಳಗಾ ಬೇಡ್ಕೊಂಡೆ.
ಎಲ್ರೂ ನಿಮ್ ನಿಮ್ ಮನಿಗುಳಾಗ ಸಂಜೀಕ ಕಾರ್ಯಕ್ರಮ ನೋಡಾಕ ಬರ್ರಿ ಅಂತ ಹೇಳಬರ್ಯಪಾ. ಮಾಡೂದ ಫಸ್ಟ್ ಟೈಮ್ ಮತ್ ನಂಗ್ಹೇಳಲಿಲ್ಲ ನಿಂಗ್ಹೇಳಲಿಲ್ಲ ಅಂತ ಜಗಳ ತಗದ್ ಇದಾ ಲಾಸ್ಟ್ ಟೈಮ್ ಮಾಡಿಗಿಡ್ಯಾರು ಅಂದೆ ಹುಡ್ರಿಗೆ. ಮನಿಗ್ಹೋಗಾಕ ಸಿಕ್ಕಿದ್ದ ಛಾನ್ಸು ಅಂತ ಪೇರಿ ಕಿತ್ರು.
ಹಂಗೂ ಹಿಂಗೂ ಹೆಂಗೆಂಗೋ ನಮಗ್ ಹರದಷ್ಟ್ ತಯಾರಿಮಾಡ್ಕೊಂಡ್ವಿ. ಆಜುಬಾಜೂ ಸಾಲಿಗೋಳ ಮಾಸ್ತಾರಗೋಳಿಗೂ ಬರಾಕ ಹೇಳಿದ್ವಿ. ಯಾವುದಕ್ಕೂ ಮಾಸ್ತಾರ್ ಮಂದಿ ಸ್ವಲ್ಪ ಹೆಚ್ಚಿರ್ಲಿ ಕಷ್ಟದಾಗ ಸಹಾಯಕ್ಕಾದ್ರೂ ಆಕ್ಕಾರ. ಮದ್ಲಾ ಈ ಊರಾಗಿರೋ ಗಂಡಸ್ರ ಸಂಕಿ ಸಂಜಿ ಆಗ್ತಿದ್ದಂಗ ಡಬಲ್ ಆಗಿರ್ತದ. ಒಬ್ಬೊಬ್ಬರೇ ಇದ್ದೋರು ಔಷದ ತಗೊಂಡ್ ಕೂಡ್ಲೆ ಇಬ್ಬಿಬ್ರ ಆಗಿರ್ತಾರ. ಇರ್ಲಿ ಅದೂ ಒಳ್ಳೇದ ಬಿಡ್ರಿ. ನಾಕ್ ಮಂದಿ ಇರೋ ನಾವು ಅವರಿಗೆ ಡಬಲ್ ಕಾಣ್ತೀವಲಾ ಜರಾ ದೂರ ಇರ್ಬೋದು ಅನ್ಕೊಂಡು ಸಮಾಧಾನ ಮಾಂಡ್ಕೊಂಡ್ನಿ. 
ಸಂಜಿಯಾಗ್ತಿದ್ದಂಗ ಊರಾಗಿರೋ ಹುಡುಗ್ರು ಹುಪ್ಪಡಿ ಸಾಲಿ ಅಂಗಳದಾಗ ಸೇರಿದ್ರು. ಗಂಡಸರೆಲ್ಲ ರಸ್ತಾ ಅಳತಿ ಮಾಡೋರಗತೆ ಆ ತುದಿಯಿಂದ ಈ ತುದಿಗಂಟ ಹೆಜ್ಜಿ ಹಾಕ್ಕೊಂಡ್ ಬರ್ತಿರೋದ ನೋಡಿ ಯಾಕೋ ಎದಿ ರವರವ ಅನ್ನಾಕತ್ತಿ. ಅವರ್ ಬಂದ್ ವರವರ ಅನ್ನೋದಕ್ಕ ಮೊದ್ಲ ಪ್ರೋಗ್ರಾಂ ಚಾಲೂ ಮಾಡೋದ ಛಲೋ ಅಂತ ಬಡಬಡ ವೇದಿಕಿಗೆ ಹತ್ತಿ, ದುಡ್ ಕೊಟ್ಟೋರನ್ನ, ಸ್ಟೇಜಿನ ಮ್ಯಾಲೆ ಮಾಲಿ ಹಾಕಿದಾಗ ಕೊಡೋರನ್ನ ಸೇರ್ಸಿ ಕರದ್ ಕುರ್ಚಿಗಳನ್ನ ತುಂಬಿಸಾಕತ್ವಿ. ತಮ್ಮ ಕುರ್ಚಿಗೆ ಯಾರೋ ಮಂತ್ರಿಸಿ ನಿಂಬಿಕಾಯಿ ಕಟ್ಯಾರಂತ ಕುರ್ಚಿನ ಪಂಚಾಯಿತಿಂದ ಹೊರಾಗ್ ಒಗದ್ ನೆಲದ ಮ್ಯಾಲಾ ಕುಂಡ್ರೋ ಪಂಚಾಯಿತಿ ಮೆಂಬರನ್ನ, ನಮ್ ಕೈಯಾಗ ಕಲೀತಿದ್ದಾಗ ಸಿಕ್ಕಂಗ್ ಬಡಸ್ಕೋಂಡ್ ಸಾಲಿ ಬಿಟ್ ಕಾವಿ ಹಾಕ್ಕೊಂಡ್ಈಗ ಎಲ್ರನ್ನೂ ತನ್ನ ಕಾಲಿಗ್ ಬೀಳಂಗ್ ಮಾಡ್ಕೊಂಡಿರೋ ನಮ್ ಹಳೇ ವಿದ್ಯಾರ್ಥಿ ಈಗಿನ ದೊಡ್ ಸ್ವಾಮೀಜಿಯನ್ನ ದಿವ್ಯ ಸಾನಿಧ್ಯವಹಿಸಾಕ ಬೇಡ್ಕೊಂಡೂ ಆತು. ಎಲ್ರೂ ಹ್ಯಾವೀಲೆ ನಾಮುಂದು ತಾಮುಂದು ಅಂತ ಸ್ಟೇಜಿನ ಮೊದಲನೇ ಸಾಲಿನ ಕುರ್ಚಿಗಳಲಿ ಕುಂಡ್ರಾಕತ್ರು. 
ಹೆಂಗೋ ಉದ್ಘಾಟನೆ ಮುಗೀತು ಇನ್ನೇನ್ ಡಾನ್ಸ್ ಚಾಲೂ ಮಾಡ್ಬೇಕು. ಬಾಜು ಸಾಲಿ ಮಾಸ್ತರ ಮೆಳವಂಕಿ ಸರ್ ಮತ್ ನಾ ಹಾಡಾ ಹಚ್ಚಾಕ ಸೌಂಡಿನೋರ ಹತ್ರ ಕುಂತ್ವಿ. ಎರಡ್ಮೂರು ಡಾನಸ್ ಆಗಿರ್ಬೇಕು, ಮಾಂತ್ಯಗೋಳ ಅಪ್ಪ ಸ್ಟೇಜ್ ಹತ್ತಾಕಂತ ಬರ್ತಿದ್ದ. ಪತ್ತಾರ ಸರಾ ಓಡ್ರಿ ಅವನ್ ಸೈಡಿಗ್ ನಿಲ್ಸ್ ಹೋಗ್ರಿ ಅಂತ ಪುಸಲಾಯಿಸಿದೆ. ಅವರು ಹೋಗಿ ಯಾಕಪಾ ಸ್ಟೇಜಿಗೆ ಹೊಂಟೀರಿ ಅಂತ ಕೇಳಿದ್ರು. ನಾ ಒಂದ ಡಾನ್ಸ್ ಮಾಡಾಂವ್ರಿ ಅಂದ ಮಾಂತ್ಯಗೋಳ ಅಪ್ಪ. ಒಂದ್ಸೊಲ್ಪೊತ್ ತಡೀರಿ ಮಾಡೋಂಕ್ರಿ ಅಂತ ಸಮಾಧಾನ ಮಾಡಿದ್ರು. ಇನ್ನ ‘ನೇಗಿಲು ಹಿಡಿದು ಹೊಲದೊಳು ದುಡಿವ ಯೋಗಿಯ ನೋಡಲ್ಲಿ’ ಅನ್ನೋ ಹಾಡು ಹಚ್ಚಬೇಕಾಗಿತ್ತು. ಮೈಕಲ್ ಜಾಕ್ಸನ್ಗತೆ ಡ್ರೆಸ್ ಮಾಡ್ಕೊಂಡ್ ಕರಿ ಚಸ್ಮಾ ಹಾಕ್ಕೊಂಡಿದ್ ಸಿದ್ಯಾ ಬಂದ್ ನಿಂತ. ಲೇ ಮಗನ ಯಾವ ಹಾಡಿಗೈತಲೇ ನಿನ್ ಡಾನ್ಸ್ ಅಂತ ಕೇಳೀನಿ ಗಾಬರಿಯಾಗಿ. ಸರಾ ನೇಗಿಲಯೋಗಿ ಹಾಡ್ರಿ ಅಂದ. ರೈತನಗತೆ ಅರವಿ ಹಾಕ್ಕೊಂಡ್ ಬರೋದ್ ಬಿಟ್ ಇದೇನ್ಲೇ ನಿನ್ನ ಅವತಾರ ಅಂತ ದಿಗಿಲಾಗಿ ಸಿಟ್ಟೀಲೇ ದಬಾಸಿದ್ನಿ. ಸರಾ ನಾ ಮುಂಜಾನಿಂದ ರಡಿ ಆಗೀನ್ರಿ ಹಾಡಾ ಹಚ್ರಿ ಲಗೂ ಅಂತ ಚಸ್ಮಾ ಸರಿಮಾಡ್ಕೊಂಡ. ಇನ್ನ ಕಲ್ಲು ಬೀಳೋದು ಗ್ಯಾಂರಂಟಿಯಾತು. ಆದ್ರೂ ಅನಿವಾರ್ಯ ಇತ್ತು. ‘ಲೇ ಹಾಡಾ ಹಚ್ರೋ’ ಅಂತ ಮಂದಿ ಒದ್ರಾಡಾಕತ್ರು. ಮಾಸ್ತಾರಗೋಳು ಹಾಡಾ ಹಚ್ಚಾತ್ತಾರ ಅಂಬೋದು ಅವರಿಗಾರ ಏನ್ ಗೊತ್ತು. 
ಚಿಕನಿ ಚಮೇಲಿ ಹಾಡಿಗೆ ಚನ್ಯಾ ಹೋಗಿನಿಂತ. ಲೇಡಿ ಡಾನ್ಸಿಗೆ ಹುಡುಗ! ಮೆಳವಂಕಿ ಸರಾ ನಾ ಒಂದಕ್ಹೋಗಿ ಬರ್ತೀನ್ರಿ ಅಂತ ಹೇಳಿ ಹತ್ತು ನಿಮಿಷ ಸ್ಟೇಜಿನ ಹಿಂದ್ ಹೋಗಿ ನಿಂತ್ ಬಿಟ್ನಿ.ಆ ಹಾಡ್ ಮುಗದ್ ಐದು ನಿಮಿಷ ಆದಮ್ಯಾಕ ಸವಕಾಶ ಬಂದ್ ಕುಂತ್ನಿ. ಮುಂದಿಂದು ಜೈ ಹೋ ಹಾಡಿತ್ತು. ವಿಟ್ಯಾ, ಮಂಜಾ, ನಾಗ್ಯಾ ಮತ್ತ್ ಮೈಬು ಸ್ಟೇಜಿಗ್ ಬಂದ್ ಸ್ಟೈಲಾಗಿ ಮಂದಿಕಡೆ ಬೆನ್ನುಮಾಡಿ ನಿಂತ್ರು. ಹಾಡಾ ಚಾಲೂ ಆತು. ಮೆಳವಂಕಿ ಮಾಸ್ತಾರ ಸರಾ ಇವರದು ಹಾಡು ಬ್ಯಾರೇ ಇರ್ಬೇಕ್ ನೋಡ್ರಿ ಅಂದ್ರು. ಯಾಕ್ರೀ ಸರ್ ಅಂತ ಕೇಳ್ದೆ. ಜೈಹೋ ಹಾಡಿಗೆ ಜಡ್ಡಿನಾಕ ಪಂಪನಾಕ ಅಂತ ಹಲಗಿ ಬಡ್ದಾಗ ಕುಣದಂಗ ಕುಣ್ಯಾತ್ತಾರಲಾ ಅಂದ್ರು. ಈ ಮಕ್ಳಿಗೆ ‘ಸಾಲ್ಯಾಗ ಟೀಚರ್ ಯಾರೂ ಇಲ್ರಪಾ, ಎಲ್ಲಾ ಸರ್ಗಳೇ ಅದೀವಿ. ಡಾನ್ಸ್ ಕಲಸಾಕ ನಮಗೂ ಪಕ್ಕಾ ಬರೂದಿಲ್ಲ. ನೀವೇ ಕಲ್ಕೊಳ್ರಿ’ ಅಂದಿದ್ನಿ. ಏಕಲವ್ಯನ ಮೀರಿಸೋರಂಗ ಹಿಂಗ್ ಕಲ್ತಾರ ನೋಡ್ರಿ ಸರ್ ಅಂದೆ. ಬಗೆಹರೀತು ಬಿಡ್ರಿ ಅಂತ ಅನ್ನಾಕತ್ರು ಮೆಳವಂಕಿ ಸರ್. 
ಜನಾ ನೋಡಿದ್ರ ಕ್ಯಾಕಿ ಹೊಡ್ದು ಎಂಜಾಯ್ ಮಾಡಾಕತ್ತಾರ. ರಾತ್ರಿ ಹನ್ನೆಲ್ಡಾದ್ರೂ ಒಬ್ರೂ ಹೋಗಾಕವಲ್ರು. ನಾವೇನ್ ಕಡಮಿ ಅಂತ ಒಂದಾದ ಮ್ಯಾಲೊಂದ ಹಾಡಾ ಹಚ್ಚೇಹಚ್ಚೀವಿ. ಮಕ್ಕಳು ಕುಣದೇ ಕುಣದ್ವು. ಲಾಸ್ಟಿಗ್ ನಮಗಾ ಸಾಕಾಗಿ ‘ಸರಾ ಇನ್ನ ಕೊನೇ ತಯಾರಿ’ ಅಂತ ಒದರ್ರಿ ಅಂದ್ರು ನಮ್ ಸರ್. ಏ ತಯಾರಿ ಎಲ್ಲೈತ್ರಿ, ಏನಿದ್ರೂ ಡೈರೆಕ್ಟ್ ಶೋ ಮಾಡೋ ನಟರಾಜರು ನಮ್ ಮಕ್ಳು ಅಂದೆ. ನಿದ್ದಿ ಬರಾತೈತಿ ಸಾಕ್ ನಿಲ್ಲಸ್ರಿ ಹೋಗೂಣು ಅಂತ ಕಾಡಾಕತ್ರು. ಸರಿ ಇದೇ ಲಾಸ್ಟ್ ಪ್ರೋಗ್ರಾಂ ಅಂತ ಮೈಕಿನ್ಯಾಗ ಒದರಿ ಕೊನೆಗೂ ಕಾರ್ಯಕ್ರಮ ಮುಗಿಸಿದ್ವಿ. ಹಂ ಅಂದಂಗ ಆಯೇರಿ(ಕಾರ್ಯಕ್ರಮ ಮೆಚ್ಚಿ ದುಡ್ ಕೊಡೋದು) ಮಾಡೋರದೇ ಒಂದ್ ಕತಿ ಆಗ್ತದ ಅದನ್ ಆಮ್ಯಾಕ ಹೇಳ್ತೀನಂತ. ಸರೀನಾ... . . 
ಸೂರ್ಯಕಾಂತ ಬಳ್ಳಾರಿ
ಮೊ:9902865762

ಮಂಗಳವಾರ, ಮಾರ್ಚ್ 10, 2015

ಆಹಾರ ನಾಟಕ ಪ್ರದರ್ಶನ








ಎಸ್.ಬಿ.ಪಾಟೀಲ್
ವಿ.ಜಿ.ಸೂಡಿಮಠ
ಜಗದೀಶ್.ಎಸ್.ಬಿ

ಸೋಮವಾರ, ಮಾರ್ಚ್ 9, 2015

ಆಹ್ವಾನ


ಗುರುವಾರ, ಮಾರ್ಚ್ 5, 2015

ವಿದ್ಯಾರ್ಥಿಗಳ ಚಿತ್ರಗಳು

ಚನ್ನಬಸವ ನೀಲಗುಂದ

ರತ್ನಕ್ಕ ಹೊನ್ನರು ೮ನೆ

ರತ್ನಕ್ಕ ಹೊನ್ನರು, ೮ನೆ