ಗುರುವಾರ, ಅಕ್ಟೋಬರ್ 31, 2019

ಮಂಗಳವಾರ, ಅಕ್ಟೋಬರ್ 29, 2019

ಶಿಕ್ಷಣದಲ್ಲಿ ರಂಗಭೂಮಿ - ಪರಂಪರೆ ಹಾಗೂ ಪ್ರಯೋಗಗಳು

(ಡಾ. ಕುಮಾರ ಸ್ವಾಮಿ ಎಚ್,  ಉಪನ್ಯಾಸಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಮೈಸೂರು)


ಪ್ರಸ್ತುತ ಶಿಕ್ಷಣದಲ್ಲಿ ರಂಗಭೂಮಿಯ ಪರಂಪರೆ ಏನಿದೆ ಎಂದು ವಿಚಾರಿಸಿದರೆ ರಾಷ್ಟ್ರೀಯ ನಾಟಕ ಶಾಲೆಯ ಟಿ ಐ ಇ (Theatre in Education)ನಿಂದ ಮೊದಲಾಗಿ ನಮ್ಮ ಊರುಗಳಲ್ಲಿ ನಡೆಸುವ ಮಕ್ಕಳ ನಾಟಕಗಳವರೆಗೆ ಒಂದು ಪ್ರಮುಖ ಚಿಂತನಾ ಕ್ರಮ ಕಂಡುಬರುತ್ತದೆ.  ಶಿಕ್ಷಣದಲ್ಲಿ ರಂಗಭೂಮಿಯ ಕುರಿತಾದ ಇತರ ವೆಬ್ ಸೈಟ್ ಗಳನ್ನು ಪ್ರವೇಶಿಸಿದರೆ ಅಲ್ಲಿ ಮೊದಲಿಗೆ ಕಣ್ಣಿಗೆ ಬೀಳುವ ವಿಷಯವೆಂದರೆ ಮಕ್ಕಳಿಗಾಗಿ ವಿವಿಧ ವಿಷಯಗಳ ಕುರಿತಂತೆ ನಾಟಕಗಳನ್ನು ಪ್ರದರ್ಶಿಸುವ ಜಾಹಿರಾತುಗಳು.  ಅಂತೆಯೇ  ರಂಗಕಲೆಯಲ್ಲಿ ಮಕ್ಕಳಿಗೆ ತರಬೇತಿ ನೀಡುವ ಸಂಸ್ಥೆಗಳು, ವಿವಿಧ ರಂಗ ತಾಲೀಮುಗಳನ್ನು ಮಾಡಿಸುವ ಸಂಸ್ಥೆಗಳು,  ಮಕ್ಕಳ ಕಥೆಗಳು,  ಪಠ್ಯವಸ್ತುಗಳನ್ನು ನಾಟಕಗಳಾಗಿ ಪರಿವರ್ತಿಸಿ ಪ್ರದರ್ಶಿಸುವ ಸಾಧ್ಯತೆಗಳ ಕುರಿತಾದ ಹಲವು ಮಾಹಿತಿಗಳು ದೊರಕುತ್ತವೆ.  ಆದರೆ ಈ ಎಲ್ಲ ವಿಚಾರಗಳ ನಡುವೆ ಎರಡು ಮುಖ್ಯ ಚಿಂತನಾ ಕ್ರಮಗಳು ನನಗೆ ಮುಖ್ಯ ಎಂದೆನಿಸುತ್ತದೆ.

1. ಶಿಕ್ಷಣಕ್ಕಾಗಿ ರಂಗಭೂಮಿ ಎಂಬ ಪರಿಕಲ್ಪನೆ
2. ಶಿಕ್ಷಣದಲ್ಲಿ ರಂಗಭೂಮಿ ಎಂಬ ಪರಿಕಲ್ಪನೆ

ಮೇಲ್ನೋಟಕ್ಕೆ ಒಂದೇ ಎಂದು ಭಾವಿಸಬಹುದಾದ ಈ ಎರಡು ಎಳೆಗಳ ಕುರಿತಂತೆ ಸಾಕಷ್ಟು ಚರ್ಚೆಯಾಗಿದೆ.  ಈ ಎರಡೂ ಚರ್ಚೆಗಳ ಮುಖ್ಯಾಂಶಗಳನ್ನು ಈ ಕೆಳಗಿನಂತೆ ಸಾರಾಂಶಿಸಬಹುದು.
ಶಿಕ್ಷಣಕ್ಕಾಗಿ ರಂಗಭೂಮಿಯನ್ನು ಬಳಸಬಹುದು ಎಂಬ ಕಲ್ಪನೆ ರಂಗಭೂಮಿಯ ಸಾಧ್ಯತೆಗಳ ಮೂಲಕ ವಿವಿಧ ವಿಷಯಗಳ ಕುರಿತಂತೆ ಶಿಕ್ಷಣ ನೀಡುವ ಸಾಧ್ಯತೆಗಳ ಕುರಿತಾದುದು.  ಮುಖ್ಯವಾಗಿ ಸಾಮಾಜಿಕ ಜಾಗೃತಿ ಉಂಟುಮಾಡುವ ಬೀದಿ ನಾಟಕಗಳಂತಹ ಹಲವು ರಂಗಭೂಮಿ ಚಟುವಟಿಕೆಗಳಿಗೆ ಇಂತಹ ಚಿಂತನೆಯೇ  ಮೂಲ.  ತರಗತಿ ಕಲಿಕೆಯಲ್ಲಿಯೂ ರಂಗಭೂಮಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.  ವಿಷಯ ಕಲಿಕೆ ಸಾಧಿಸಲು ನಾಟಕ ಮಾಧ್ಯಮವನ್ನು ಬಳಸಬಹುದು ಎಂಬ ಚಿಂತನೆ ಶಿಕ್ಷಣ ಇಲಾಖೆಯಲ್ಲಿಯೂ ಇದೆ.   ಭಾಷಾ ಪಾಠಗಳನ್ನು, ವಿಜ್ಞಾನ ಪಾಠಗಳನ್ನು, ಸಮಾಜ ವಿಜ್ಞಾನದ ಪಾಠಗಳನ್ನು ನಾಟಕಗಳಾಗಿ ಪರಿವರ್ತಿಸಿ ಪ್ರಸ್ತುತ ಪಡಿಸುವಂತಹ ಚಟುವಟಿಕೆಗಳು ಸಾಮಾನ್ಯವಾಗಿ ನಡೆಯುತ್ತಿರುತ್ತವೆ.  ವಿಜ್ಞಾನ ನಾಟಕಗಳು ವೈಜ್ಞಾನಿಕ ಮನೋಭಾವ ಬೆಳೆಸುವುದರೊಂದಿಗೆ ವಿವಿಧ ಪರಿಕಲ್ಪನೆಗಳನ್ನು ಬೆಳೆಸಲೂ ಸಹಕಾರಿ ಎನ್ನುವುದನ್ನು ಗಮನಿಸಬಹುದು.   ಶಿಕ್ಷಣಕ್ಕಾಗಿ ರಂಗಭೂಮಿಯನ್ನು ಬಳಸಿಕೊಳ್ಳುವಾಗ ಅದಕ್ಕೊಂದು ಔಪಚಾರಿಕ ನೆಲೆಗಟ್ಟು ಇರುತ್ತದೆ.  ಮೊದಲಿಗೆ ಕಲಿಸಬೇಕಾದ ಅಥವಾ ಪ್ರೇಕ್ಷಕರಿಗೆ ದಾಟಿಸಬೇಕಾದ ವಿಷಯಗಳನ್ನು ಗುರುತಿಸಿ, ಅದಕ್ಕೆ ಸರಿಯಾದ ಸ್ಕ್ರಿಪ್ಟ್ ಬರೆಯಬೇಕು.  ವಿಷಯ ತಜ್ಞರಿಂದ ಆ ಸ್ಕ್ರಿಪ್ಟ್ ಅನುಮೋದನೆಗೊಳ್ಳಬೇಕು.   ಬಳಿಕ ಪಾತ್ರಗಳ ಆಯ್ಕೆ  ಮಾಡಿಕೊಂಡು ರಿಹರ್ಸಲ್‍ಗಳಾಗಬೇಕು. ಅಂತಿಮವಾಗಿ ಉದ್ದೇಶಿತ ವೀಕ್ಷಕರೆದುರಿಗೆ ನಾಟಕ ಪ್ರದರ್ಶನಗೊಳ್ಳುತ್ತದೆ.   ಇಲ್ಲಿ ಒಟ್ಟಾರೆ ಪ್ರಕ್ರಿಯೆಗಳು ಒಂದು ನಿರ್ದಿಷ್ಟ ಗುರಿಯತ್ತ ಮುಖ ಮಾಡಿರುತ್ತವೆ.  ನಾಟಕದ ಪ್ರದರ್ಶನ ಮತ್ತು ಅದರ ಮೂಲಕವಾಗುವ ಕಲಿಕೆಯೇ  ಇಲ್ಲಿನ ಗುರಿ.  ನಾಟಕದ ವಸ್ತು ಯಾರನ್ನು ತಲುಪಬೇಕೋ ಅವರು ವೀಕ್ಷಕರಾಗಿರುತ್ತಾರೆ.  ಕೆಲವೊಮ್ಮೆ ಅವರಲ್ಲೇ ಕೆಲವರು ನಾಟಕದ ಪಾತ್ರಧಾರಿಗಳಾಗಿರಲೂ ಸಾಕು.  ಆದರೆ ನಾಟಕದ ಮೂಲಕ ಒಂದು ಸಂದೇಶ ದಾಟಿಸುವುದು ಇಲ್ಲಿನ ಉದ್ದೇಶ.  ಎಂದರೆ ತರಗತಿಯ ಮಟ್ಟಿಗೆ ಹೇಳುವುದಾದರೆ ನಾಟಕ ವಿಧಾನವೂ ಒಂದು ಬೋಧನಾ    ವಿಧಾನ.   ಶಿಕ್ಷಣ ಮತ್ತು ರಂಗಭೂಮಿಗಳನ್ನು ಜೊತೆಯಾಗಿ ನೋಡುವಾಗ ಸಾಮಾನ್ಯವಾಗಿ ಮಕ್ಕಳಿಗೆ, ಪಠ್ಯವಸ್ತುವಿಗೆ ಸಂಬಂಧಿಸಿರುವಂತಹ ಒಂದು ಅಂತಿಮ ಉತ್ಪನ್ನವೆನಿಸಬಹುದಾದ ನಾಟಕದ ಪ್ರದರ್ಶನವೇ ನಮ್ಮ ಮನಸ್ಸಿಗೆ ಬರುತ್ತದೆ.   ಆ ನಾಟಕವು ಮಕ್ಕಳ ವಯಸ್ಸಿಗೆ ಸರಿಹೊಂದುವಂತಿರಬೇಕು,  ಅದರ ಮೂಲಕ ಮಕ್ಕಳಿಗೆ ಒಂದಷ್ಟು ಸಂದೇಶಗಳನ್ನು ದಾಟಿಸಬೇಕು ಎಂಬಿತ್ಯಾದಿ ವಿಚಾರಗಳೂ ಬರುತ್ತವೆ.   

ಶಿಕ್ಷಣದಲ್ಲಿ ರಂಗಭೂಮಿ ಎಂದು ಯೋಚಿಸಲಾರಂಭಿಸಿದಾಗ ರಂಗಭೂಮಿಯ ಪ್ರಕ್ರಿಯೆಗಳನ್ನು ಶಿಕ್ಷಣ ಪ್ರಕ್ರಿಯೆಯಲ್ಲಿ  ಅಡಕಗೊಳಿಸುವುದು ಮುಖ್ಯವಾಗುತ್ತದೆ.  ಇಲ್ಲಿ ಯಾವುದೋ ಒಂದು ಅಂತಿಮ ಉತ್ಪನ್ನದ ಗುರಿಗಿಂತಲೂ, ವಿವಿಧ ಪ್ರಕ್ರಿಯೆಗಳ ಮೂಲಕ ಪ್ರತಿಯೊಬ್ಬರೂ ತಾವೇ ಭಾಗೀದಾರರಾಗಿ ಜ್ಞಾನ ಕಟ್ಟಿಕೊಳ್ಳುವುದರಲ್ಲಿ ನಿರತರಾಗುತ್ತಾರೆ.  ಯಾವುದೋ ಒಂದು    ಪಾಠವನ್ನು ನಾಟಕ ಮಾಧ್ಯಮದ ಮೂಲಕ ಮಾಡುವುದೇ ಇಲ್ಲಿನ ಕೇಂದ್ರವಲ್ಲ.  ಒಟ್ಟಾರೆ ರಂಗಭೂಮಿ ಪ್ರಕ್ರಿಯೆಗಳು ಮಾನವನನ್ನು ಕಟ್ಟುವ ನಿಟ್ಟಿನಲ್ಲಿ ಬಹಳ ಪರಿಣಾಮಕಾರಿ ಎಂಬ ನಂಬಿಕೆ ಇಲ್ಲಿ ಕೆಲಸ ಮಾಡುತ್ತದೆ.  ಅದಕ್ಕಾಗಿ ರಂಗಭೂಮಿಯ ಸಾಧ್ಯತೆಗಳು ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ, ಹಾಗೂ ಎಲ್ಲ ವೀಕ್ಷಕರಿಗೂ ವ್ಯಾಪಕವಾಗಿ ಅನ್ವಯವಾಗುತ್ತವೆ.   ಬೋಧನಾ ವಿಷಯಗಳ ಸಂರಚನೆಗಳನ್ನು ಪ್ರತಿಯೊಬ್ಬರೂ ತಮಗೆ ಬೇಕಾದಂತೆ ಒಗ್ಗಿಸಿಕೊಳ್ಳುವ ಸಾಧ್ಯತೆಗಳು ಇಲ್ಲಿ ಜಾಸ್ತಿ.  ವ್ಯಕ್ತಿ ಎಲ್ಲಿದ್ದಾನೆಯೋ  ಅಲ್ಲಿಂದ ಮುಂದುವರಿಯಲು ಅನುಕೂಲಿಸುವುದು ಇಲ್ಲಿನ ಒಂದು ಮುಖ್ಯ ಆಯಾಮ.  ಎಂದರೆ ಜ್ಞಾನ ರಚನೆ ಪುನಾರಚನೆಯ ಕಾರ್ಯ ಪ್ರತಿಯೊಬ್ಬರಲ್ಲಿಯೂ ಅವರವರ  ಸಾಮರ್ಥ್ಯಗಳಿಗನುಗುಣವಾಗಿ ಸಾಧ್ಯವಾಗುವಂತೆ ಅನುಕೂಲಿಸುವುದು ರಂಗಭೂಮಿಯ ಪ್ರಕ್ರಿಯೆಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಂಡಾಗ ಆಗುವ ಲಾಭ.

ರಂಗಭೂಮಿಯನ್ನು ಯಾವುದೋ ಗುರಿ ತಲುಪುವ ಸಾಧನ ಎಂದು ಭಾವಿಸುವುದಕ್ಕಿಂತಲೂ ರಂಗ ಪ್ರಕ್ರಿಯೆಗಳು ಕಲಿಕೆಯನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಗಳೇ ಆಗಿವೆ ಎಂದು ನೋಡುವುದು ಹೆಚ್ಚು ಸಮಗ್ರ ಎನಿಸುತ್ತದೆ.  ಆದರೆ ಇದುವರೆಗಿನ ಅನುಭವಗಳನ್ನು ಅವಲೋಕಿಸಿದರೆ ಮಕ್ಕಳ ನಾಟಕಗಳು ಪ್ರದರ್ಶನಕ್ಕೇ ಹೆಚ್ಚಿನ ಒತ್ತು ಕೊಟ್ಟಿರುವುದು ಕಂಡುಬರುತ್ತದೆ.  ನಾಟಕ ಅಂತಿಮವಾಗಿ ಹೇಗೆ ಪ್ರದರ್ಶಿತವಾಯಿತು ಎಂಬ ವಿಷಯ ಮಾತ್ರ ಮುಖ್ಯವಾಗುತ್ತದೆ.  ನಾಟಕ ಮಾಡುವ ಪ್ರಕ್ರಿಯೆಯಲ್ಲಿ ಮಕ್ಕಳಿಗೆ ಆದ ಅನುಭವಗಳಾವುವು, ಇದರಿಂದ ಮಕ್ಕಳಿಗೆ ಏನು ಲಾಭವಾಯಿತು ಎನ್ನುವುದು ಮುಖ್ಯವಾಗುವುದೇ ಇಲ್ಲ.  ಈ ಅಂತಿಮ ಉತ್ಪನ್ನಕ್ಕೇ ಜೋತು ಬೀಳುವ ಅಭ್ಯಾಸ ಎಷ್ಟೋ ಬಾರಿ ಕಲಿಕೆಯ ಪ್ರಕ್ರಿಯೆಯ ಬಗ್ಗೆ ಚಿಂತಿಸುವ ಅವಕಾಶ ನೀಡುವುದೇ  ಇಲ್ಲ.   ಹೇಗಾದರೂ ಸರಿ, ಫಲಿತಾಂಶ ಬರಬೇಕು ಎಂಬ ಧೋರಣೆಯೂ ಇಲ್ಲಿಂದಲೇ ಬೆಳೆಯುವುದು.  ರಂಗ ಪ್ರಕ್ರಿಯೆಗಳು ಎಂದಾಕ್ಷಣ ಅಲ್ಲೊಂದು ಸ್ಟೇಜ್ ಇರುತ್ತದೆ.  ಒಂದು ನಾಟಕದ ಪ್ರದರ್ಶನವಾಗುತ್ತದೆ ಎಂದೇ ಭಾವಿಸಬೇಕಾಗಿಲ್ಲ.   ಒಬ್ಬ ಒಳ್ಳೆಯ ಸಂವಹನಕಾರ ಯಾವಾಗಲೂ ರಂಗಭೂಮಿಯ ಹಲವು ಪ್ರಕ್ರಿಯೆಗಳನ್ನು ತನ್ನ ಒಟ್ಟಾರೆ ಅಭಿವ್ಯಕ್ತಿಯಲ್ಲಿ ಅಳವಡಿಸಿಕೊಂಡಿರುತ್ತಾನೆ ಎನ್ನುವುದನ್ನು ಗಮನಿಸಬೇಕು.  ಅಂತೆಯೇ  ಒಳ್ಳೆಯ ಶಿಕ್ಷಕರೂ ತಮ್ಮ ಅಭಿವ್ಯಕ್ತಿಯೊಳಗೆ ರಂಗಭೂಮಿಯ ಅನೇಕ ಅಂಶಗಳನ್ನು ಅಳವಡಿಸಿಕೊಂಡಿರುತ್ತಾರೆ.   ಹೀಗೇ ಯೋಚಿಸುತ್ತಾ ಹೋದಾಗ ರಂಗಭೂಮಿಯ ಅಂಶಗಳು ತರಗತಿ ಕೋಣೆಗಳೊಳಗೆ ಕೂಡಾ ಇರುವುದು ನಮಗೆ ಗೋಚರಿಸುತ್ತಾ ಹೋಗುತ್ತದೆ.   ಅಂತೆಯೇ  ರಂಗಭೂಮಿ ನಮಗೆ ಆಪ್ತವಾಗುತ್ತಲೂ ಸಾಗುತ್ತದೆ.  ಶಿಕ್ಷಣ ಕ್ಷೇತ್ರಕ್ಕೆ ರಂಗಭೂಮಿ ಯಾಕೆ ಅಷ್ಟೊಂದು ಆಪ್ತವಾಗುತ್ತದೆ ಹಾಗೂ ಪ್ರಸ್ತುತವಾಗುತ್ತದೆ ಎನ್ನುವುದನ್ನು ಸಮಕಾಲೀನ ಶೈಕ್ಷಣಿಕ ಚಿಂತನೆಯ ಒಲವುಗಳ ದೃಷ್ಟಿಯಿಂದ ನಾನು ಇಲ್ಲಿ ವಿಶ್ಲೇಷಿಸುವ ಪ್ರಯತ್ನ ಮಾಡಿದ್ದೇನೆ.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ನಮ್ಮ ದೇಶದ ಶೈಕ್ಷಣಿಕ ಚಿಂತನೆಗೆ ಒಂದು ಚೌಕಟ್ಟು ಒದಗಿಸುತ್ತದೆ.  ಇಲ್ಲಿ ಸೂಚಿಸಿರುವ ಹಲವಾರು ಸಲಹೆಗಳಲ್ಲಿ ರಂಗಭೂಮಿಯ ದೃಷ್ಟಿಯಿಂದ ಎರಡು ಅತಿ ಮುಖ್ಯ ಎನಿಸುತ್ತದೆ.

1. ಅನುಭವಗಳ ಮೂಲಕ ಜ್ಞಾನ ಕಟ್ಟಿಕೊಳ್ಳುವಿಕೆಯನ್ನು ಅನುಕೂಲಿಸುವುದು
2. ವಿಮರ್ಶಾಯುಕ್ತ ಶಿಕ್ಷಣಕ್ರಮದ ಮೂಲಕ ಮಕ್ಕಳಲ್ಲಿ ಚಿಂತನೆ, ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ಹಾಗೂ  ಸಾಮಾಜಿಕ ಜವಾಬ್ದಾರಿಗಳನ್ನು ಬೆಳೆಸುವುದು

ಇವೆರಡು ಚಿಂತನೆಗಳ ಮುಖ್ಯಾಂಶಗಳನ್ನು ಹೇಳಿದಾಗ ಇವು ಯಾಕೆ ರಂಗಭೂಮಿಯ ಅಂಶಗಳನ್ನು ಒಳಗೊಳ್ಳುತ್ತವೆ ಎನ್ನುವುದು ಸ್ಪಷ್ಟವಾಗುತ್ತದೆ.

ರಚನವಾದಿ ಪಠ್ಯಕ್ರಮದಲ್ಲಿ ಅನುಭವಗಳ ಮೂಲಕ ಜ್ಞಾನ ಕಟ್ಟಿಕೊಳ್ಳುವಿಕೆಯನ್ನು ಪ್ರಸ್ತಾಪಿಸಲಾಗಿದೆ.  ಅನುಭವಗಳು ದೊರೆಯಬೇಕಾದರೆ ವ್ಯಕ್ತಿ ವಿವಿಧ ರೀತಿಯ ಜೀವನ ಕ್ರಮಗಳಿಗೆ ತೆರೆದುಕೊಳ್ಳಬೇಕು ಹಾಗೂ ಅವುಗಳಲ್ಲಿ ಬದುಕಬೇಕು.  ನಾವು ಅನುಭವಿಸುವ ಎಲ್ಲವೂ ನಮ್ಮ ಜ್ಞಾನವೇ ಆಗುತ್ತದೆ.  ಜ್ಞಾನವು ಅತ್ಯಂತ ವೈಯಕ್ತಿಕವೂ, ವ್ಯಕ್ತಿನಿಷ್ಠವೂ ಆಗಿರುತ್ತದೆ.  ಈ ರೀತಿಯಾಗಿ ನಡೆಯುವ ಕಲಿಕೆ ಪ್ರತಿ ಕಲಿಕಾದಾರನಿಗೂ ಆತ್ಮೀಯವಾಗುತ್ತದೆ.  ತರಗತಿ ಕೋಣೆಯೊಳಗೆ ಶಿಕ್ಷಕರ ಬೋಧನೆಯಿಂದ ಮಕ್ಕಳು ಒಂದು ಮಟ್ಟಿಗಿನ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ.  ಆದರೆ ಯಾವುದು ಅನುಭವ ರೂಪದಲ್ಲಿ ಅವರಿಗೆ ದೊರಕುತ್ತದೆಯೋ ಅದೆಲ್ಲವೂ ಅವರ ಜ್ಞಾನವೇ ಆಗುತ್ತದೆ.  ಈಗ ನಮ್ಮ ಮುಂದಿರುವ ಪ್ರಶ್ನೆ ಒಂದೇ: ಮಕ್ಕಳಿಗೆ       ಕಲಿಕೆಯ ಅನುಭವಗಳನ್ನು ನೀಡುವುದು ಹೇಗೆ?  ಅನುಭವಗಳಿಂದ ಕಲಿಕೆಯನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಕಲಿಕಾದಾರರ     ಹಿಂದಿನ ಜ್ಞಾನ ಮುಖ್ಯವಾಗುತ್ತದೆ.  ಹಿಂದಿನ ಅನುಭವಗಳ ನೆಲೆಯಲ್ಲಿ ಸದ್ಯದ ಅನುಭವಗಳನ್ನು ಮಿಳಿತಗೊಳಿಸಿ ಅವೆರಡೂ ಸೇರಿದ ಒಂದು ಸಮಗ್ರ ಅನುಭವದ ರಚನೆ ಮಾಡಿಕೊಳ್ಳುವ ಚಟುವಟಿಕೆ ಇಲ್ಲಿ ಎಡೆಬಿಡದೆ ನಡೆಯುತ್ತಿರುತ್ತದೆ.

ರಂಗಭೂಮಿ ಪ್ರಕ್ರಿಯೆಗಳು ಎಲ್ಲ ಹಂತಗಳಲ್ಲಿಯೂ ಅನುಭವಾಧಾರಿತವೇ.  ಅಲ್ಲಿ ಔಪಚಾರಿಕ ತರ್ಕಗಳಿಗೆ ಅವಕಾಶವಿಲ್ಲ.  ಯಾವ ತಾತ್ವಿಕ ಚಿಂತನೆಯಿದ್ದರೂ ಅದು ಯಾವುದಾದರೊಂದು ಪಾತ್ರದ ಅನುಭವವಾಗಿಯೇ  ಅಭಿವ್ಯಕ್ತಿಸಲ್ಪಡುತ್ತದೆ.   ತರಗತಿಯಲ್ಲಿರಬೇಕು ಎಂದು ನಿರೀಕ್ಷಿಸುವ ಜ್ಞಾನ ರಚನೆ ಪುನಾರಚನೆ ಪ್ರಕ್ರಿಯೆಗೂ ರಂಗಭೂಮಿಯ ಈ ಪ್ರಕ್ರಿಯೆಗಳಿಗೂ ಇರುವ ಸಾಮ್ಯತೆಗಳಿಂದಾಗಿಯೇ  ರಂಗಭೂಮಿಯು ಶಿಕ್ಷಣದಲ್ಲಿ ಹಲವು ಆಯಾಮಗಳಲ್ಲಿ ಪ್ರಸ್ತುತವಾಗುತ್ತದೆ.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಎರಡನೆಯ ಮುಖ್ಯ ಅಂಶ ವಿಮರ್ಶಾಯುಕ್ತ ಶಿಕ್ಷಣ ಕ್ರಮದ ಕುರಿತಾದದ್ದು(ಅಡಿiಣiಛಿಚಿಟ Pegಚಿgogಥಿ).  ವಿಮರ್ಶಾಯುಕ್ತ ಶಿಕ್ಷಣ ಕ್ರಮದಲ್ಲಿ ಸಂಘರ್ಷಗಳಿಗೆ ಮುಖಾಮುಖಿಯಾಗಿ ಅವುಗಳ ವಿಶ್ಲೇಷಣೆಯ ಮೂಲಕ ಕಲಿಕಾದಾರರು ತಮ್ಮ ಕಲಿಕೆ ಕಟ್ಟಿಕೊಳ್ಳುತ್ತಾರೆ.  ವಿವಿಧ ಸಂಸ್ಕೃತಿಗಳ, ಮತಗಳ, ಚಿಂತನೆಗಳ ಇಂದಿನ ಪ್ರಪಂಚದಲ್ಲಿ ಸಂಘರ್ಷಗಳು ಹಿಂದೆಂದಿಗಿಂತಲೂ ಪ್ರಮುಖವಾಗಿವೆ.  ಬೇಕಾಗಲೀ, ಬೇಡದಿರಲಿ, ಪ್ರತಿಯೊಬ್ಬರೂ ಈ ಸಂಘರ್ಷಗಳ ಯಾವುದಾದರೊಂದು ಬದಿ ಇರುತ್ತಾರೆ.  ಇಂತಹ ಸಂಘರ್ಷಗಳನ್ನು ಒಪ್ಪುವುದಿಲ್ಲ ಎಂದಾಕ್ಷಣಕ್ಕೆ ಅವು ಇಲ್ಲವಾಗುವುದಿಲ್ಲ.  ಸಂಘರ್ಷಗಳಿಗೆ ಮುಖಾಮುಖಿಯಾಗುತ್ತಾ ಅವುಗಳನ್ನು ಮೀರಿದ ಸಮಾಜ ಜೀವನವನ್ನು ಕಟ್ಟಿಕೊಳ್ಳಲು ವಿಮರ್ಶಾಯುಕ್ತ ಶಿಕ್ಷಣ ಕ್ರಮ ಅನುಕೂಲಿಸುತ್ತದೆ.

ರಂಗಭೂಮಿಯೂ ಇದನ್ನೇ ಮಾಡುವುದು.  ಹಾಗೆ ನೋಡಿದರೆ ಸಂಘರ್ಷಗಳೇ ರಂಗಭೂಮಿಗೆ ಚೈತನ್ಯ ನೀಡುವ ಅಂಶಗಳು.  ಒಪ್ಪಬಹುದಾದ ಅಥವಾ ಒಪ್ಪಲು ಸಾಧ್ಯವಾಗದ ಎರಡು ಭಿನ್ನ ಚಿಂತನೆಗಳನ್ನು ಜೊತೆಯಾಗಿಟ್ಟು ನೋಡುವ, ಅವೆರಡರ ವಿವಿಧ ಆಯಾಮಗಳನ್ನು ಶೋಧಿಸುವ ಕ್ರಿಯೇ  ಇಲ್ಲಿ ನಡೆಯುತ್ತದೆ.  ಈ ಕಾರಣಕ್ಕೇ ರಂಗಭೂಮಿ ಶಿಕ್ಷಣ ಕ್ಷೇತ್ರಕ್ಕೆ ಅತ್ಯಂತ ಹೆಚ್ಚು ಪ್ರಸ್ತುತವಾಗುತ್ತದೆ.

ಈ ಎರಡೂ ನೆಲೆಗಟ್ಟುಗಳ ಆಧಾರದಲ್ಲಿ ವಿಚಾರ ಮಾಡಿದಾಗ ಶಿಕ್ಷಣದಲ್ಲಿ ರಂಗಭೂಮಿಯ ಪರಂಪರೆಯನ್ನು ಅರ್ಥಮಾಡಿಕೊಳ್ಳುವ ರೀತಿಗೇ ಒಂದು ಹೊಸ ಆಯಾಮ ದೊರಕುತ್ತದೆ.  ಈಗ ನಮ್ಮೆದುರಿಗಿರುವ ಸಾಧ್ಯತೆಗಳು ಅಪಾರ.  ಇಂತಹ ಸಾಧ್ಯತೆಗಳನ್ನು ಇದುವರೆಗಿನ ಪ್ರಯೋಗಗಳು ಶೋಧಿಸಿವೆಯೆ   ಎಂಬುದು ಒಂದು ಪ್ರಶ್ನೆಯಾದರೆ ಇನ್ನು ಮುಂದಿನ ಪ್ರಯೋಗಗಳು ಯಾವ ದಿಕ್ಕಿನಲ್ಲಿ ಮುಂದುವರಿಯಬೇಕು ಎನ್ನುವುದು ಇನ್ನೊಂದು ಚರ್ಚಿಸಬೇಕಾದ ವಿಷಯ.  ಈ ಎರಡು ಪ್ರಶ್ನೆಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ನಮ್ಮ ಇದುವರೆಗಿನ ಪ್ರಯೋಗಗಳು ಹೆಚ್ಚೂ ಕಡಿಮೆ ಅಂತಿಮ ಉತ್ಪನ್ನಗಳನ್ನು ತೋರಿಸುವ ನಿಟ್ಟಿನಲ್ಲಿ ನಡೆದಂತಹವು          ಎನಿಸುತ್ತದೆ.  ಪಠ್ಯವಸ್ತುವನ್ನು ಯಶಸ್ವಿಯಾಗಿ ಕಲಿಸುವ ಮಾಧ್ಯಮವಾಗಿ,  ಶಿಕ್ಷಕರಲ್ಲಿ ಉತ್ತಮ ಸಂವಹನಾ ಕೌಶಲಗಳನ್ನು ಬೆಳೆಸುವ ಮಾಧ್ಯಮವಾಗಿ ನಾಟಕಗಳನ್ನು ಬಳಸಿಕೊಳ್ಳಲಾಗುತ್ತಿದೆ.  ಇವುಗಳಲ್ಲಿ ದೊಡ್ಡವರ ದೃಷ್ಟಿಕೋನದಿಂದ ಮಕ್ಕಳಿಂದ
ಆಡಿಸುವ ನಾಟಕಗಳೆಷ್ಟು, ಮಕ್ಕಳ ಮಟ್ಟದಿಂದಲೇ ಆರಂಭವಾಗಿ ಅವರು ಮೇಲೇರಲು ಸಹಾಯ ಮಾಡುವ ನಾಟಕಗಳೆಷ್ಟು ಎನ್ನುವುದು ವಿಚಾರ ಮಾಡಬೇಕಾದ ಅಂಶ.  ಇದಕ್ಕಾಗಿಯೇ  ಮಕ್ಕಳ ನಾಟಕಗಳು ಎಂಬ ಹೊಸದೊಂದು ಪರಂಪರೆಯೇ  ಸೃಷ್ಟಿಯಾಗಿದೆ.  ಅಲ್ಲಿ ಮಕ್ಕಳಿಗೆ ಇಷ್ಟವಾಗುವ ಎಲ್ಲ ಅಂಶಗಳೂ ಇರುತ್ತವೆ.  ಹಾಡು, ನೃತ್ಯ,  ಫ್ಯಾಂಟಸಿ, ಚಲನೆ,  ಹಾಸ್ಯ ಎಲ್ಲವೂ ಇರುತ್ತದೆ.  ಮಕ್ಕಳು ಕೇಳುವ ಪ್ರಶ್ನೆಗಳೂ ಇರುತ್ತವೆ.  ಆದರೆ ಈ ರೀತಿಯಾಗಿರುವ ನಾಟಕಗಳನ್ನು ಮಕ್ಕಳಿಗಾಗಿ ಸೃಷ್ಟಿ ಮಾಡುವವರು ದೊಡ್ಡವರು ಎಂಬ ಒಂದು ಅಂಶ ಗಮನಿಸಬೇಕಾಗಿದೆ.  ಇದು ತಪ್ಪೇ  ಎಂದು ಹೇಳಲಾಗದು.  ಯಾಕೆಂದರೆ ಮಕ್ಕಳು ಅವನ್ನು ಖಂಡಿತವಾಗಿಯೂ ಅತ್ಯಂತ ಖುಷಿಯಿಂದಲೇ ಸ್ವೀಕರಿಸುತ್ತಾರೆ.  ಆದರೂ ಅದು ಹೊರಗಿನಿಂದ ನೀಡಲ್ಪಟ್ಟದ್ದು ಎನ್ನುವ ಆಂಶ ಉಳಿದೇ ಉಳಿಯುತ್ತದೆ.  ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ರಚನವಾದಿ ಕಲಿಕೆಯ ತತ್ವಗಳನ್ನು ಇನ್ನೊಮ್ಮೆ ಪರಾಮರ್ಶಿಸಬೇಕಾಗುತ್ತದೆ.

ಜ್ಞಾನದ ರಚನೆ ಅನುಭವಗಳಿಂದಾಗುತ್ತದೆ.  ನಮ್ಮ ಅನುಭವಗಳನ್ನು ನಾವು ಹಿಂದಿನ ಅನುಭವಗಳಿಗೆ ಜೋಡಿಸಿಕೊಳ್ಳುತ್ತಾ      ನಮ್ಮ ಜ್ಞಾನವನ್ನು ರಚಿಸುತ್ತಾ, ಪುನಾರಚಿಸುತ್ತಾ ಬೆಳೆಯುತ್ತೇವೆ.  ಇಲ್ಲಿ ಹೊರಗಿನಿಂದ ನೀಡಿದ್ದೆಲ್ಲವೂ ಮಾಹಿತಿ.  ಕಲಿಕಾದಾರರ ಅನುಭವಕ್ಕೆ ಬಂದುದಷ್ಟು ಜ್ಞಾನವಾಗುತ್ತದೆ.  ಹೀಗೇ ಕಟ್ಟಿಕೊಳ್ಳುವ ಜ್ಞಾನವೂ ಅತ್ಯಂತ ವೈಯಕ್ತಿಕವೂ,  ವ್ಯಕ್ತಿನಿಷ್ಠವೂ ಆಗಿರುತ್ತದೆ.  ನಮಗೆ ಬಂದ ಮಾಹಿತಿಯನ್ನೂ ನಾವು ಹೀಗೆಯೇ  ಸ್ವೀಕರಿಸುವುದು.  ಆದರೆ ಅಲ್ಲಿನ ಕಲಿಯುವಿಕೆ ಮೇಲ್ಪದರದ್ದಾಗಿರುತ್ತದೆ.  ಟಿ ವಿ ಇತ್ಯಾದಿ ಮಾಧ್ಯಮಗಳ ಮೂಲಕ ಮಗು ತನ್ನದಲ್ಲದ ಎಷ್ಟೋ ವಿಷಯಗಳನ್ನು ತಿಳಿದುಕೊಳ್ಳುತ್ತದೆ.  ಮಾಹಿತಿಗಳ ಆಗರಗಳೇ ಆಗಿರುವ ಮಕ್ಕಳ ವ್ಯಕ್ತಿತ್ವಕ್ಕೆ ಅಗಲ ಇರುತ್ತದೆ.  ಆದರೆ ಆಳ ಇರುತ್ತದೆ ಎಂದು ಹೇಳಲಾಗುವುದಿಲ್ಲ.  ಬಡತನದ ಬಗ್ಗೆ ನಿರರ್ಗಳವಾಗಿ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸುವ ಮಗು ತನ್ನ ವಯಸ್ಸಿನ ಇನ್ನೊಂದು ಮಗು ಆಸೆಯಿಂದ ನೋಡುತ್ತಿರುವಂತೆಯೇ  ಅದರ ಎದುರಿಗೇ ಐಸ್ ಕ್ರೀಂ ಮೆಲ್ಲಬಲ್ಲದು.  ಆ ಮಗುವಿಗೆ ಏನೂ ಅನಿಸುವುದಿಲ್ಲ.  ರಸ್ತೆ ಬದಿಯಲ್ಲಿ ಪಾನಿ ಪೂರಿ ತಿನ್ನುತ್ತಾ ನಿಂತವರು ತಮ್ಮನ್ನು ನೋಡುತ್ತಾ ನಿಂತವರಿಗೆ ಪಾನಿಪೂರಿ ಕೊಡಿಸುತ್ತಾರೆಯೇ     ಕೊಡಿಸಿದರೂ ಅದು ಒಳಗೆ ತಕ್ಷಣಕ್ಕೇ ಕಾಡುವ ಅಪರಾಧಿ ಪ್ರಜ್ಞೆಯಿಂದ ಮರೆಯಾಗಲು ಮಾತ್ರ.  ಮನೆಯಲ್ಲಿ ಹೊಟ್ಟೆಗೆ ಬೇಡದಷ್ಟು ಸಿಹಿ ತಿನ್ನುವಾಗ ಬಡವರ ನೆನಪಾಗುತ್ತದೆಯೇ ?    ಹಾಗಾದರೆ ನಮ್ಮ ಜ್ಞಾನಕ್ಕೇನು ಅರ್ಥ?  ಈ ಬಡವರ ನೋವು ಒಬ್ಬ ಗಾಂಧಿಗೆ ಅರ್ಥವಾಗಿತ್ತು.  ಮಕ್ಕಳಲ್ಲಿರುವ ಸ್ವಾಭಾವಿಕವಾಗಿರುವ ಈ ‘ಗಾಂಧಿ’ಯನ್ನು ಉಳಿಸಿಕೊಳ್ಳುವುದು ಹೇಗೆ?  ಅವರಿಗೆ ಅನುಭವಗಳನ್ನು ಕಟ್ಟಿಕೊಳ್ಳಲು ಸಹಾಯ ಮಾಡುವುದು ಹೇಗೆ ಎಂಬುದೇ ಶಿಕ್ಷಣ ಪ್ರಕ್ರಿಯೆಯ ಮುಖ್ಯ ಪ್ರಶ್ನೆಯಾಗಿದೆ, ಪ್ರಶ್ನೆಯಾಗಬೇಕು.  ಆದ್ದರಿಂದಲೇ ಮಕ್ಕಳಿಗೆ ಖುಷಿಯಾಗುವುದೆಲ್ಲವೂ ಅವರಿಗೆ ಪ್ರಸ್ತುತ ಎಂದು ತಿಳಿಯುವುದು ಬಾಲಿಶವಾದೀತು.

ಪಠ್ಯವಸ್ತುವನ್ನು ನಾಟಕಕ್ಕೆ ಅಳವಡಿಸಿಕೊಳ್ಳುವುದು ಎಂಬ ಕಲ್ಪನೆ ಹುಟ್ಟಿಕೊಳ್ಳುವುದು ಮಾಹಿತಿಯನ್ನು  ಹೇಗೆ ಯಶಸ್ವಿಯಾಗಿ ಮಕ್ಕಳಿಗೆ ದಾಟಿಸಬಹುದು ಎಂಬ ಒಂದು ಉದ್ದೇಶದೊಡನೆ.  ಇದಕ್ಕಾಗಿ ರಂಗಭೂಮಿಯ    ಹಲವು ತಂತ್ರಗಳನ್ನು ಬಳಸಿಕೊಳ್ಳಬಹುದು.  ಆದರೆ ಮೇಲಿನ ಚರ್ಚೆಯ ಬೆಳಕಿನಲ್ಲಿ ಯೋಚಿಸಿದಾಗ ಇದು    ‘ಶಿಕ್ಷಣದಲ್ಲಿ ರಂಗಭೂಮಿ’ ಎಂಬ ಪರಿಕಲ್ಪನೆಯ ಸೀಮಿತ ಚಿತ್ರಣ ಮಾತ್ರ ಎನಿಸುತ್ತದೆ.   ಎಲ್ಲ ಪಠ್ಯವಸ್ತುಗಳನ್ನೂ ಸಂಪೂರ್ಣವಾಗಿ ನಾಟಕ ಮಾಧ್ಯಮಕ್ಕೆ ಅಳವಡಿಸಿಕೊಳ್ಳಲು ಸಾಧ್ಯವೇ?  ಅದರ ಅಗತ್ಯವಿದೆಯೇ?  ಸಾಧ್ಯ ಎಂದಾದರೆ  ಹೇಗೆ?  ಇದಕ್ಕಾಗಿ  ತರಬೇತಿ ನೀಡುವುದು ಯಾವಾಗ?  ತರಬೇತಿ ಬೇಕೇ?   ಈ ವಿಷಯಗಳು ಎಲ್ಲರನ್ನೂ ಕಾಡುತ್ತವೆ.  ಆದರೆ ಜೀವನ ಕೌಶಲಗಳನ್ನು ಬೆಳೆಸುವ ದೃಷ್ಠಿಯಿಂದ ಯೋಚಿಸಿದಾಗ ಈ ಪ್ರಶ್ನೆಗಳು ಬಹಳ ಮುಖ್ಯ ಎಂದೇನೂ ಅನ್ನಿಸುವುದಿಲ್ಲ.  ಪಠ್ಯವಸ್ತುವು ಮಗುವಿನ ಒಟ್ಟಾರೆ ಕಲಿಕೆಯ ಅನುಭವಗಳ ಒಂದು ಚಿಕ್ಕ ಭಾಗ ಮಾತ್ರ.  ನಾವು ಅದನ್ನೇ ಅತ್ಯಂತ ದೊಡ್ಡದು ಎಂದು    ತಿಳಿದಿರುವುದು ಒಂದು ದೊಡ್ಡ ದುರಂತ.  ಪಠ್ಯವಸ್ತು ಮುಖ್ಯವೇ.  ಆದರೆ ಅದೇ ಸರ್ವಸ್ವವಲ್ಲ.

ನಾಟಕಗಳನ್ನು ಆಡಿಸುವುದು ಹಾಗೂ   ನಾಟಕಗಳನ್ನು ಮಾಡಿಸುವುದು
ಈ ಎರಡು ಪ್ರಯೋಗಗಳೂ ಬಳಕೆಯಲ್ಲಿವೆ.  ಆದರೆ ಇವುಗಳನ್ನು ನಾವು    ಪ್ರಜ್ಞಾಪೂರ್ವಕವಾಗಿ ಬಳಸುತ್ತೇವೆಯೋ ಎನ್ನುವುದು ಬೇರೆ ಪ್ರಶ್ನೆ.  ಇಲ್ಲಿ `ಆಡಿಸುವುದು' ಎಂದಾಗ ಯಾರೋ ಬರೆದ ನಾಟಕಗಳನ್ನು ಒಂದು ತಂಡದಿಂದ ಆಡಿಸುವುದು ಎಂದು ಅರ್ಥಮಾಡಿಕೊಳ್ಳಬಹುದು.  ಇದಕ್ಕೆ ವಿರುದ್ಧವಾಗಿ ನಾಟಕಗಳನ್ನು `ಮಾಡಿಸುವ' ಪ್ರಕ್ರಿಯೆ ಇದೆ.  ಇಲ್ಲಿ ಯಾರೊಬ್ಬರು ಬರೆದು    ಸಿದ್ಧಪಡಿಸಿದ ನಾಟಕವೂ ಇರುವುದಿಲ್ಲ.   ಎಲ್ಲಾ ಭಾಗೀದಾರರೂ ಸೇರಿಕೊಂಡು ತಮ್ಮದೇ ಆದ ವಸ್ತುವನ್ನು ಆಯ್ದುಕೊಂಡು ಅದನ್ನು ಒಟ್ಟಾಗಿ ಕುಳಿತು ಮಾತನಾಡುತ್ತಾ ನಾಟಕ ರೂಪಕ್ಕೆ ತರುತ್ತಾರೆ.  ನಾಟಕದ ವಸ್ತುವು ಏನಿದ್ದರೂ ಪ್ರತಿ ಪಾತ್ರಧಾರಿಯೂ ತನ್ನನ್ನು ತಾನು ಅಲ್ಲಿ ಪ್ರತಿಬಿಂಬಿಸಿಕೊಳ್ಳಲು ಸಾಧ್ಯವಾಗುವುದು ಈ ವಿಧಾನದ ಒಂದು ಪ್ರಮುಖ ಅಂಶ.  ಅದೇ ಅದರ ಜೀವಾಳ ಕೂಡಾ.   ಬಹುಶ: ಮಕ್ಕಳಿಂದ ನಾಟಕಗಳನ್ನು ಆಡಿಸುವುದಕ್ಕಿಂತಲೂ ಮಾಡಿಸುವುದು ಯಾವತ್ತಿಗೂ ಹೆಚ್ಚು ಮೈಲೇಜ್ ಕೊಡುವ ಚಟುವಟಿಕೆಯಾದೀತು ಎನಿಸುತ್ತದೆ.   ಇಲ್ಲಿ ಮಕ್ಕಳೂ ನಾಟಕದ ಭಾಗೀದಾರರಾಗುತ್ತಾರೆ,  ಗುರುತಿಸಿಕೊಳ್ಳುವಿಕೆ ಇರುತ್ತದೆ,  ನಿರ್ಧಾರಗಳನ್ನು ಮಾಡಿ ಅದರಂತೆ ನಡೆಯುವ ಜವಾಬ್ದಾರಿ ಇರುತ್ತದೆ,  ಇತರರೊಂದಿಗೆ ಹೊಂದಿಕೊಂಡು ತಮ್ಮತನವನ್ನು ಬೆಳೆಸಿಕೊಳ್ಳಬೇಕಾದ ಪರಿಸ್ಥಿತಿ ಇರುತ್ತದೆ.  ಅದಕ್ಕಾಗಿಯೇ ಈ ವಿಧಾನವು ಸಾಮಾಜಿಕವಾಗಿ ಆರೋಗ್ಯಪೂರ್ಣ ಹಾಗೂ ಸೃಜನಶೀಲ ವ್ಯಕ್ತಿತ್ವಗಳನ್ನು ಬೆಳೆಸುವ ಪ್ರಕ್ರಿಯೆಯಾಗುತ್ತದೆ.1

ಪಠ್ಯವಸ್ತುವನ್ನೇ ಬಳಸಬೇಕು ಎಂದಾಗ ನಾವು ನಿಜಕ್ಕಾದರೂ ರಂಗಭೂಮಿಯ ಎಲ್ಲ ಸಾಧ್ಯತೆಗಳನ್ನೂ ಸೀಮಿತಗೊಳಿಸಿಬಿಡುತ್ತೇವೆ.  ವಿಷಯ ನಿರೂಪಣೆ ಮಾಡುವ ಕಲೆಯಾಗಿ ಶಿಕ್ಷಕರು ನಾಟಕ ತಂತ್ರಗಳನ್ನು      ಬಳಸಿಕೊಳ್ಳಲಿ.  ಅದಕ್ಕಾಗಿ ತರಬೇತಿಯನ್ನೂ ನೀಡೋಣ.  ಆದರೆ ಅದುವೇ ‘ಶಿಕ್ಷಣದಲ್ಲಿ ರಂಗಭೂಮಿ’ ಎಂಬ ಪರಿಕಲ್ಪನೆಯ ಸಾಕಾರ ರೂಪವಾಗುವುದಿಲ್ಲ.   ಅಲ್ಲಿ ನಾಟಕಗಳನ್ನು ಮಾಡಿಸುವುದು ಮುಖ್ಯವಾಗಬೇಕು.  ವಸ್ತುವು ಪಠ್ಯಕ್ಕೆ ಸಂಬಂಧಪಟ್ಟುದು ಮಾತ್ರ ಎಂದು ಹಠ ಹಿಡಿಯಲಾಗದು.   ನಾವು ಯಾವುದರ ಬಗ್ಗೆ ಮಕ್ಕಳ ಗಮನ ಸೆಳೆಯಬೇಕು, ಅವರಲ್ಲಿ ಒಳನೋಟಗಳನ್ನು ಬೆಳೆಸಬೇಕು ಎಂದುಕೊಳ್ಳುತ್ತೇವೆಯೋ ಅದುವೇ ನಮ್ಮ ಪ್ರಯೋಗಗಳ ವಸ್ತುವಾಗಬೇಕು.  ಆಗ ಮಾತ್ರ ಮಕ್ಕಳಿಗೆ ಲಾಭವಾದೀತು.   ನಾಟಕದ ಪ್ರಕ್ರಿಯೆ ಅದು ಕಲಿಯುವ ಪ್ರಕ್ರಿಯೆಯೂ ಹೌದು.  ಪ್ರಕ್ರಿಯೆಯನ್ನು ಅಧರಿಸಿದ ಯಾವುದೇ ಅನುಭವ ನೀಡುವುದರಿಂದ ಹಲವು ಲಾಭಗಳಿವೆ.


1. ಅಂತಿಮ ಉತ್ಪನ್ನಗಳಿಗೇ ಜೋತು ಬೀಳುವ ಅಭ್ಯಾಸ ಕಡಿಮೆಯಾಗುತ್ತದೆ.
2. ಅಂತಿಮ ಉತ್ಪನ್ನದ ಮಹತ್ವ ಕಡಿಮೆಯಾದ ಕೂಡಲೇ ವ್ಯವಸ್ಥೆಯ ಮೇಲಿನ ಅನಗತ್ಯ ಒತ್ತಡವೂ ಕಡಿಮೆಯಾಗುತ್ತದೆ.  ಒತ್ತಡಗಳಿಲ್ಲದಿದ್ದಾಗ ಮಾಡುವ ಕೆಲಸಗಳು ಸದಾ ಹೆಚ್ಚು ಅರ್ಥಪೂರ್ಣವಾಗಿರುತ್ತವೆ.
3. ಕಲಿಕೆಯೆಂಬುದು ಒಂದು ಪ್ರಕ್ರಿಯೆ, ಅದು ಕೊನೆಗೊಳ್ಳುವುದಿಲ್ಲ ಎಂಬ ಸಂದೇಶ ಎಲ್ಲರಿಗೂ ತಲುಪುತ್ತದೆ.
4. ನಾಟಕಗಳು ಮಕ್ಕಳ ನಿಜ ಜೀವನದ  ಅನುಭವದ  ಭಾಗವಾಗಿಬಿಡುತ್ತವೆ.  ತಮ್ಮನ್ನು ತಾವೇ ಬೇರೆ ಬೇರೆ ಕೋನಗಳಿಂದ ನೋಡಿಕೊಳ್ಳಲು, ತಮ್ಮ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸಲು ಮಕ್ಕಳು ಇಲ್ಲಿ ಕಲಿಯುತ್ತಾರೆ.   ಪೂರ್ವ ನಿರ್ಧಾರಿತ ಚಟುವಟಿಕೆಗಳಲ್ಲಿ ಇಂತಹ ಅವಕಾಶಗಳಿರುವುದಿಲ್ಲ.
5. ನಾಟಕ ಮಾಡುವ ಪ್ರಕ್ರಿಯೆಯು ಮಗುವಿನ ಜೀವನದ ಸಮಗ್ರತೆಯ ಒಂದು ಭಾಗವಾಗುವುದರಿಂದ ಜೀವನದ ಮೌಲ್ಯಗಳು ನಾಟಕಕ್ಕೂ,  ನಾಟಕದಲ್ಲಿ ಕಲಿತ ಮೌಲ್ಯಗಳು ಜೀವನಕ್ಕೂ ಬರುತ್ತವೆ.  ಮಗುವೂ ಒಂದು ಸಮಗ್ರ ದೃಷ್ಠಿಕೋನವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.

ನಾಟಕಗಳನ್ನು ಮಾಡುವ ಪ್ರಕ್ರಿಯೆಯಲ್ಲಿ

- ಮಕ್ಕಳು ನಿರ್ಧಾರಗಳನ್ನು ಕೈಗೊಳ್ಳಲು ಕಲಿಯುತ್ತಾರೆ
- ತಾವು ಮಾಡುತ್ತಿರುವುದೇ ಶ್ರೇಷ್ಠವಾಗಿರಬೇಕಿಲ್ಲ, ತಮ್ಮ ಹೊರತಾದ ಒಂದು ವಾಸ್ತವವೂ ಇದೆ,  ಅಲ್ಲೂ ಎಷ್ಟೋ ಆಸಕ್ತಿದಾಯಕ, ಶ್ರೇಷ್ಠ ವಿಚಾರಗಳಿರುತ್ತವೆ ಎಂದು ಅರಿತುಕೊಳ್ಳುತ್ತಾರೆ.
- ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಕಲಿಯುತ್ತಾರೆ.
- ಬಹುಮಾನ, ಪುರಸ್ಕಾರಗಳನ್ನು ಮೀರಿದ ಸ್ವ ಅಭಿವ್ಯಕ್ತಿ ಬೆಳೆಸಿಕೊಳ್ಳುತ್ತಾರೆ.
- ತಾವು ಮಾಡುತ್ತಿರುವ ಕೆಲಸಗಳಲ್ಲಿ ಖುಷಿ ಕಾಣುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ.
- ಸ್ವ ಅಭಿವ್ಯಕ್ತಿಯ ಹೊಸ ಆಯಾಮಗಳನ್ನು ಶೋಧಿಸುವ ಅಭ್ಯಾಸ ಮಾಡುತ್ತಾರೆ.
- ಇತರರೊಂದಿಗೆ ಹೊಂದಿಕೊಂಡು ಸಮೂಹ ಹಿತಕ್ಕಾಗಿ ಕೆಲಸಮಾಡುವುದನ್ನು ಕಲಿಯುತ್ತಾರೆ.
- ಇತರರನ್ನು ಒಪ್ಪಿಕೊಳ್ಳಲು ಕಲಿಯುತ್ತಾರೆ.
- ತಮ್ಮ ವಿಚಾರಗಳನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸಲು ಅಭ್ಯಾಸ ಮಾಡುತ್ತಾರೆ.
- ತಮ್ಮನ್ನು ತಾವೇ ಅವಲೋಕಿಸಿಕೊಂಡು ಪಡೆದ ಹಿಮ್ಮಾಹಿತಿಯ ಆಧಾರದಲ್ಲಿ ತಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಶಕ್ತರಾಗುತ್ತಾರೆ.
- ಇತರರನ್ನು ನೋಯಿಸದ ರೀತಿಯಲ್ಲಿ ಅವರಿಗೆ ಹಿಮ್ಮಾಹಿತಿ ನೀಡಲು ಅಭ್ಯಾಸ ಮಾಡುತ್ತಾರೆ.
- ಕಲ್ಪನಾ ಶಕ್ತಿ ಬೆಳೆಸಿಕೊಳ್ಳುತ್ತಾರೆ.
- ದೇಹ-ಭಾವಗಳೊಳಗೆ ಸಮನ್ವಯತೆ ಸಾಧಿಸಲು ಶಕ್ತರಾಗುತ್ತಾರೆ.
- ಬದುಕಿನ ಬಗ್ಗೆ, ವ್ಯಕ್ತಿಗಳ ಬಗ್ಗೆ ಸಕಾರಾತ್ಮಕ ಧೋರಣೆಗಳನ್ನು ಬೆಳೆಸಿಕೊಳ್ಳುತ್ತಾರೆ.


ಶಿಕ್ಷಕರ ವೈಯಕ್ತಿಕ ಬೋಧನಾ ಸಾಮಥ್ರ್ಯಗಳ ಮೇಲೆ ಈ ಮಾಧ್ಯಮದ ಪ್ರಭಾವವೇನು?

ಈ ಮೇಲಿನ ಎಲ್ಲ ವಿಷಯಗಳು ಶಿಕ್ಷಕರಿಗೂ ಸಂಗತವೇ.  ಶಿಕ್ಷಕರೂ ಜೀವನದ ವಿದ್ಯಾರ್ಥಿಗಳು.  ಅವರೂ ಕಲಿಯುತ್ತಲೇ ಇರುತ್ತಾರೆ.  ಇದರ ಜೊತೆಗೆ ನಾಟಕ ಮಾಧ್ಯಮವನ್ನು ಶಿಕ್ಷಣದಲ್ಲಿ ಬಳಸುವ ಕುರಿತಾಗಿ ವಿಶೇಷ ತರಬೇತಿ ಪಡೆಯುವುದರಿಂದ ಶಿಕ್ಷಕರಲ್ಲಿ ಕೆಲವು ವಿಶಿಷ್ಟ ಸಾಮಥ್ರ್ಯಗಳನ್ನು ಬೆಳೆಸಬಹುದು.

- ವಿಷಯವನ್ನು ಪ್ರಸ್ತುತ ಪಡಿಸುವ ಕಲೆ - ಶ್ರವ್ಯ-ದೃಶ್ಯ ಮಾಧ್ಯಮಗಳನ್ನು ಬಳಸಿ.
- ನಿರರ್ಗಳವಾದ ಮಾತು
- ತಾರ್ಕಿಕವಾದ ವಿಷಯ ನಿರೂಪಣೆ
- ಆರೋಗ್ಯಪೂರ್ಣ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವುದು
- ವಿಷಯ ವಿವರಣಾ ಕೌಶಲ
- ದೇಹ ಭಾಷೆಯ ಅರಿವು ಬೆಳೆಸಿಕೊಂಡು ಸೂಕ್ತವಾದ ಹಾವಭಾವಗಳ ಬಳಕೆ
- ಧ್ವನಿಯ ಏರಿಳಿತದಿಂದ ಕೂಡಿದ ಮಾತು

ನಾಟಕ ತರಗತಿ ಪ್ರಕ್ರಿಯೆಗೆ ಪೂರಕವಾಗಬಲ್ಲ ಮಾಧ್ಯಮ ಅಥವಾ ಸ್ವತಂತ್ರವಾಗಿಯೂ ಶೈಕ್ಷಣಿಕ ಮೌಲ್ಯಗಳನ್ನು ಮಕ್ಕಳಿಗೆ ದಾಟಿಸಬಲ್ಲ ಮಾಧ್ಯಮ.  ತರಗತಿ ಕಲಿಕೆಗೆ ಪೂರಕ ಎಂದು ಭಾವಿಸಿಕೊಂಡಾಗ ನಮ್ಮ ಚಿಂತನೆಯು ಪಠ್ಯವಸ್ತುವಿನ ಸುತ್ತಲೇ ಇದ್ದು ನಿಜವಾದ ಜೀವನ ಕೌಶಲಗಳನ್ನು ನಾವು ಬದಿಗೊತ್ತಿಬಿಡುವ ಸಂಭವವಿದೆ.     ಹೀಗಾಗಬಾರದು.   ರಂಗಭೂಮಿಯ ಸಮಸ್ತ ಪ್ರಯೋಜನಗಳೂ ಶಿಕ್ಷಣ ಕ್ಷೇತ್ರಕ್ಕೆ ದೊರಕುವಂತಾಗಬೇಕು.   ಶಿಕ್ಷಕರ ಕೌಶಲಗಳನ್ನು   ಬಲಪಡಿಸುವುದಾಗಲೀ, ಮಕ್ಕಳಿಗೆ ವಿಷಯ ಅರ್ಥವಾಗುವಂತೆ ಮಾಡುವುದಾಗಲೀ ರಂಗ ಮಾಧ್ಯಮದ ಒಂದು ಅಂಶ ಮಾತ್ರ.   ಜೀವನದ ಕುರಿತಾಗಿ ಸಮಗ್ರ ದೃಷ್ಠಿಕೋನವನ್ನು ಬೆಳೆಸಬಲ್ಲ ಸಾಮಥ್ರ್ಯ ರಂಗಭೂಮಿಗೆ ಇದೆ.  ಅದನ್ನು ತನ್ನ ಪ್ರಯೋಜನಕ್ಕಾಗಿ ಬಳಸಿಕೊಳ್ಳಬೇಕಾದ್ದು ಶಿಕ್ಷಣದ ಕೆಲಸ ಹಾಗು ಜವಾಬ್ದಾರಿ.

ರಂಗಭೂಮಿ ಕಾರ್ಯಕರ್ತರನ್ನು ಶಿಕ್ಷಣ ತಜ್ಞರೆನ್ನಲಾಗದು.  ಅಂತೆಯೇ  ಶಿಕ್ಷಕರನ್ನು ರಂಗಭೂಮಿ ತಜ್ಞರೆಂದೂ ಭಾವಿಸಲಾಗದು.  ಇವರಿಬ್ಬರನ್ನೂ ಒಟ್ಟಾಗಿಸಿದರೆ ‘ಶಿಕ್ಷಣದಲ್ಲಿ ರಂಗಭೂಮಿ’ ಎಂಬ ಪರಿಕಲ್ಪನೆ ಸಾಕಾರವಾಗಬಹುದು.  ಅಂತಿಮವಾಗಿ            ಶಿಕ್ಷಣದಲ್ಲಿ ರಂಗಭೂಮಿ ಎಂಬ ಕ್ಷೇತ್ರಕ್ಕೆ ಶಿಕ್ಷಕರೇ ನಿಜವಾದ ವಾರಸುದಾರರು ಎನಿಸುತ್ತದೆ.  ಅವರು ಯಾವಾಗಲೂ ಮಕ್ಕಳೊಂದಿಗೇ ಇರುವವರು.  ಅವರನ್ನು ರಂಗಭೂಮಿಯ ತಂತ್ರಗಳನ್ನು ಬಳಸಿಕೊಳ್ಳುವಂತೆ ಸಜ್ಜುಗೊಳಿಸುವುದು ರಂಗಭೂಮಿಯ ಕಾರ್ಯನಿರತರ ಜವಾಬ್ದಾರಿ.  ಮಕ್ಕಳೊಡನೆ ಸದಾ ಒಡನಾಡುವ ಶಿಕ್ಷಕರು ಮಾತ್ರ ಪ್ರಕ್ರಿಯೆಗಳನ್ನೇ ಗಮನದಲ್ಲಿರಿಸಿಕೊಂಡು ಕೆಲಸಮಾಡಲು ಸಾಧ್ಯ.  ಉಳಿದ ಎಲ್ಲರೂ ಮಕ್ಕಳೊಡನೆ ಒಂದು ಸೀಮಿತ ಅವಧಿಯಲ್ಲಿ ಒಡನಾಡಬಹುದಷ್ಟೆ.  ಅಂತಹ ಸಂದರ್ಭಗಳಲ್ಲಿ ಅವರು ಉತ್ಪನ್ನಗಳನ್ನೇ ಹೆಚ್ಚು ಹೆಚ್ಚು ಒಪ್ಪಿಕೊಳ್ಳಬೇಕಾಗುತ್ತದೆ.  ಶಿಕ್ಷಕರಿಗೆ ಈ ಒತ್ತಡ ಇರುವುದಿಲ್ಲ.  ಶಿಕ್ಷಣಕ್ಕಾಗಿ ರಂಗಭೂಮಿ ಏನೆಲ್ಲ ನೀಡಬಹುದೋ ಅದನ್ನೆಲ್ಲ ಶಿಕ್ಷಕರ ಮೂಲಕ ನೀಡುವಂತಾದರೆ ಅವೆಲ್ಲವೂ ಹೆಚ್ಚು ಮಕ್ಕಳಿಗೆ ತಲುಪಲು ಸಾಧ್ಯವಾಗುತ್ತದೆ.  ಈ ನಿಟ್ಟಿನಿಂದ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಾದುದು ಇಂದಿನ ಅಗತ್ಯ.



ಭಾನುವಾರ, ಅಕ್ಟೋಬರ್ 27, 2019

Modalali Banadodeya....

ಸೋಮವಾರ, ಅಕ್ಟೋಬರ್ 21, 2019

ಶನಿವಾರ, ಅಕ್ಟೋಬರ್ 19, 2019

ಜಾನಪದೀಯ ಚಿಂತನೆಗಳು, ಕಲಾ ಪ್ರಕಾರಗಳು ಮತ್ತು ಸಾಹಿತ್ಯ ಉದಾಹರಣೆಗಳು- ಕಲಿಕೆ ಅನ್ನುವುದರ ಮೂಲ ವೇದಿಕೆ.

ಜಾನಪದೀಯ ಚಿಂತನೆಗಳು, ಕಲಾ ಪ್ರಕಾರಗಳು ಮತ್ತು ಸಾಹಿತ್ಯ ಉದಾಹರಣೆಗಳು- ಕಲಿಕೆ ಅನ್ನುವುದರ ಮೂಲ ವೇದಿಕೆ.

- ಗುರುರಾಜ ಎಲ್




                 ನಾನು ಎರಡು ಬಾರಿ ಐ ಎಫ್ ಎ ನ ಯೋಜನೆಯನ್ನು ನಮ್ಮ ಶಾಲೆಯಲ್ಲಿ ಕೈಗೊಂಡಿದ್ದೇನೆ. ಮೊದಲು 2012 ರಲ್ಲಿ ನಂತರ 2016 ರಲ್ಲಿ. ಎರಡು ಬಾರಿ ನನ್ನ ಹುಡುಕಾಟ ಜಾನಪದದ ಸುತ್ತಲೇ ಸಾಗಿದ್ದು. ಕಾರಣ ನಾವು ಕೆದಿಕಿದಷ್ಟು ಹೊಸ ವಿಚಾರಗಳು, ಹೊಸ ಅರ್ಥಗಳು ಸಿಗುತ್ತಾ, ನಮ್ಮ ಮಕ್ಕಳ ಕಲಿಕೆಯಲ್ಲಿ ಸಾಕಷ್ಟು ಸುಧಾರಣೆಗಳು ಕಂಡು ಬಂದ ಕಾರಣ ನಾನು ಮತ್ತೇ ಮತ್ತೇ ಮುಂದುವರಿಸಲು ಬಯಸಿದ್ದು. ಇಂದಿಗೂ ನಾನು ಸ್ಥಳೀಯ ಜನಪದವನ್ನು ಕಟ್ಟಿಕೊಂಡೇ ಸಾಗುತ್ತಿದ್ದೇನೆ. ಜನಪದ ನಮ್ಮ ಕಾರ್ಯಕ್ಕೆ ಹೊಸ ಜೀವಂತಿಕೆಯನ್ನು ನೀಡುತ್ತೇ ಎಂದು ನನಗೆ ಮೊದಲಿಗೆ ಅನಿಸಿರಲಿಲ್ಲ. ಆದರೆ ನಮ್ಮ ಶಾಲೆಯಲ್ಲಿ ಯೋಜನೆಯನ್ನು ಪ್ರಾಂರಂಭಿಸಿ ಅದರ ಸುತ್ತ ಕಾರ್ಯ ಚಟುವಟಿಕೆಗಳನ್ನು ನಡೆಸಿದಾಗ ಹೊಸ ದಾರಿಯೇ ನನಗೆ ಗೋಚರಿಸಿತು. ಹೆಜ್ಜೆಗಳು ಜಾನಪದದತ್ತ... ಹೆಸರಿನಡಿ ನಮ್ಮ ಕಾರ್ಯ ಸಾಗಿದ್ದು ನೇರವಾಗಿ ನಮ್ಮ ಮಕ್ಕಳ ಮನೆಗಳೆಡೆಗೆ. ಅಜ್ಜಿ, ಮುತ್ತಜ್ಜಿಯರ ಜೊತೆ ತಾಯಂದಿರು ಯುವತಿಯರು ಸೇರಿ ನಮ್ಮ ಮುದ್ದು ಮಕ್ಕಳು ಜನಪದವನ್ನು ಇಂದು ಹಾಡುತ್ತಿರುವುದು ತುಂಬಾನೇ ಸಂತೋಷವಾಗುತ್ತದೆ. ಮಕ್ಕಳ ಕಲಿಕೆಯಲ್ಲಿ ಆಸಕ್ತಿಯ ಜೊತೆಗೆ ನಮ್ಮ ನಾಟಕಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ವಿಶೇಷ. ನಮ್ಮೂರಿನ ದೇವಕಿಯಮ್ಮ ಎಂಬ 80-85 ವರ್ಷದ ಅಜ್ಜಿ ಇಂದಿನ ಶಿಕ್ಷಣ ಪದ್ದತಿಯನ್ನೇ ತೆಗಳುತ್ತಾಳೆ. ಏನೆಲ್ಲ ಸೌಲಭ್ಯಗಳು ಬಂದಿರಬಹುದು ಆದರೆ ನಾವು ಕಲಿಯುವಾಗ ಇರೋ ಶಿಸ್ತು ಇಂದಿನ ಮಕ್ಕಳಲ್ಲಿ ಕಾಣಲ್ಲ ಎಂದು ನೇರವಾಗಿಯೇ ಹೇಳುತ್ತಾರೆ. ಅದು ನಿಜವೂ ಆಗಿದ್ದರೂ ನಾವು ಶಿಕ್ಷಕರು ಮಕ್ಕಳನ್ನು ಮತ್ತಷ್ಟು ಕ್ರಿಯಾಶೀಲತೆಯಿಂದ ತೊಡಗಿಸಲು ಸಾಧ್ಯವಿದೆ ಎನ್ನುವುದನ್ನು ನಮ್ಮ ಮಕ್ಕಳು ಇಂದು ಎಲ್ಲ ಚಟುವಟಿಕೆಗಳಲ್ಲಿ ಭಾಗುವಹಿಸುವ ರೀತಿಯಿಂದಲೇ ತಿಳಿದು ಬಂದಿದೆ. 

ನಮ್ಮ ವಿದ್ಯಾರ್ಥಿಗಳ ಮನೆ ಮನೆಗಳಲ್ಲಿ ಬೀಸುವ ಸಂದರ್ಭದಲ್ಲಿ, ಕುಟ್ಟೋ ಸಂದರ್ಭದಲ್ಲಿ ಇಂದಿಗೂ ಹಾಡುವ ರೂಢಿ ಇದ್ದಿದ್ದನ್ನು ನಮ್ಮ ಮಕ್ಕಳ ಮೂಲಕ ದಾಖಲಾತಿಯನ್ನು ಮಾಡುತ್ತಿದ್ದೇನೆ. ಮಕ್ಕಳೇ ಆ ಹಾಡುಗಳನ್ನು ಕಲಿಯುವ ಪ್ರಯತ್ನದ ಜೊತೆಗೆ ಉಳಿಸುವ ಕಾರ್ಯವನ್ನು ಮಾಡುತ್ತಿರುವುದು ಗ್ರಾಮದ ಹಿರಿಯರಿಗೆ ಎಲ್ಲಿಲ್ಲದ ಆನಂದ. ಮನೆಯಲ್ಲಿ ಮಗು ಜನಿಸಿದಾಗ, ತೊಟ್ಟಿಲಿಗೆ ಹಾಕುವಾಗ, ಕಿವಿ ಚುಚ್ಚುವ ಸಂದರ್ಭದಲ್ಲಿ ಹಾಗೆಯೇ ಹೆಣ್ಣು ಮಕ್ಕಳು ಪ್ರಾಯಕ್ಕೆ ಬಂದಾಗ, ಮದುವೆಯ ಸಂದರ್ಭಗಳಲ್ಲಿ, ಮದುಮಗ/ಮದುಮಗಳನ್ನು ತಯಾರಿ ಮಾಡುವ ಸಂದರ್ಭದಲ್ಲಿ, ಆರತಿ ಬೆಳಗುವ ಸಂದರ್ಭಗಳಲ್ಲಿ, ಮನೆ ತುಂಬಿಸುವ ಸಂದರ್ಭದಲ್ಲಿ, ಬಾಣಂತಿಯಾದಾಗ  ಹೀಗೆ ಪ್ರತಿ ಸಂದರ್ಭದಲ್ಲೂ ಹಾಡುವ ಹಾಡುಗಳು ಕಣ್ಮರೆಯಾದದ್ದನ್ನು ಇಂದು ನಮ್ಮ ಮಕ್ಕಳ ಉತ್ಸಾಹದಿಂದ ತೊಡಗಿಸಿಕೊಂಡಿರುವುದರಿಂದ ಮರು ಜೀವಂತಿಕೆ ಪಡೆದಿವೆ.
ನಮ್ಮ ಜನಪದ ನಿರಂತರವಾಗಿ ಉಳಿಸಿಕೊಳ್ಳಬೇಕು ಎನ್ನುವ ಮಾತುಗಳು ನಮ್ಮ ಪಾಲಕರ ಮನೆ ಮನಗಳಲ್ಲಿ ಮೂಡಿ ಬಂದಿರುವುದು ಸಂತೋಷದ ವಿಷಯವಾಗಿದೆ.

     ಸೋಬಾನೆ, ಕುಟ್ಟೋಪದ, ಬಿಸೋಪದ, ತತ್ವಪದ, ಜೋಗುಳಪದ, ರಿವಾಯಿತಿ ಪದಗಳು ಹೀಗೆ ಪ್ರತಿಯೊಂದು ಹಾಡುಗಳು ಅದರದೇ ಹಿನ್ನಲೆಯನ್ನು ಹೊಂದಿದ್ದು ನಮ್ಮ ಮಕ್ಕಳ ಕುತೂಹಲದಿಂದ ಅವುಗಳನ್ನು ಕೇಳಿ ಕಲೆತು ಇಂದು ಹಾಡುತ್ತಿರುವುದು ಖುಷಿ ಕೊಡುತ್ತದೆ. ಮಕ್ಕಳನ್ನು ಜಾನಪದದಲ್ಲಿ ತೊಡಗಿಸುವಿಕೆಯಿಂದ ನಮ್ಮ ನಾಟಕ ಪ್ರಕ್ರಿಯೆಯಲ್ಲಿ ಹೊಸತನವನ್ನು ಬಳಸಿಕೊಳ್ಳುತ್ತಿದ್ದೇವೆ.


ಮೊಹರಂನ ರಿವಾಯಿತಿ ಪದಗಳು ಹಾಗೂ ಹೆಜ್ಜೆಕುಣಿತ ನಮ್ಮ ಪ್ರಾಜೆಕ್ಟನಲ್ಲಿ ಬಳಸಿಕೊಳ್ಳುವಾಗ ಇದು ಬೇಕಾ ಎಂಬ ಅನುಮಾನ ಹುಟ್ಟಿದ್ದ ನಿಜ. ಆದರೆ ನಾವು ಹಿರಿಯರೊಟ್ಟಿಗೆ ಒಡನಾಟ ಬೆಳೆಸಿ ಅವರೊಂದಿಗೆ ಚರ್ಚಿಸುತ್ತಾ ಸಾಗಿದಾಗ ಮೊಹರಂ ಆಚರಣೆಯ ಹಲವು ಸಾಧ್ಯತೆಗಳು ಬಿಚ್ಚಿಕೊಳ್ಳುತ್ತಾ ಹೋದವು. ಗುದ್ದಲಿ ಪೂಜೆಯಿಂದ ಹಿಡಿದು ದಫನ್ ಮಾಡುವವರಿಗೂ ಬಗೆಬಗೆಯ ಆಚರಣೆಗಳು ತೆರೆದುಕೊಳ್ಳುತ್ತಾ ಮೂರು ತಿಂಗಳಿಂದ ಹೆಜ್ಜೆ ಕುಣಿತ ಅಭ್ಯಾಸ ಮಾಡುವ ಊರಿನ ಹಿರಿಯರು, ಯುವಕರು ತಮ್ಮ ಹೊಲ ಮನೆ ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿ ರಾತ್ರಿಯ ಹೊತ್ತು ಎಲ್ಲರೊಡಗೂಡಿ ರಿವಾಯಿತ್ ಪದಗಳನ್ನು ಅಭ್ಯಾಸ ಮಾಡುತ್ತಾ ಹೆಜ್ಜೆ ಕುಣಿತದ ಅಭ್ಯಾಸ ಮಾಡುವುದೇ ವಿಶೇಷ. ಈ ಎಲ್ಲ ಸಂದರ್ಭಗಳಲ್ಲಿ ಮಕ್ಕಳ ಆಸಕ್ತಿ ತಮ್ಮ ಇತರೇ ತರಗತಿಗಳಲ್ಲಿ ಇರುವ ರೀತಿಯಲ್ಲಿರದೇ ನೂರಕ್ಕೆ ನೂರರಷ್ಟು ತಮ್ಮನ್ನು ತಾವು ಕೊಟ್ಟು ಕೊಂಡಿದ್ದು ನನ್ನನ್ನು ಸೆಳೆದಿತ್ತು. ಮಕ್ಕಳಿಗೆ ತಮ್ಮ ಹಬ್ಬ ಆಚರಣೆಯನ್ನು ವಿವರಿಸುವುದು ಸಿಹಿಯೂಟ ಮಾಡಿದಷ್ಟು ತೃಪ್ತಭಾವ ಅವರಲ್ಲಿ ಕಂಡುಬಂದಿದ್ದನ್ನು ನಾನು ಗುರುತಿಸಿದ್ದೆ. 

  ಭಾರತಕ್ಕೆ ಮೊಹರಂ ಹಬ್ಬ ಮುಸ್ಲಿಂರ ಆಕ್ರಮಣದ ಜೊತೆ ಜೊತೆಗೆ ಬಂದಿದ್ದನ್ನು ಇಂದು ಉತ್ತರ ಕರ್ನಾಟಕದೆಲ್ಲೆಡೆ ತಮ್ಮ ಮನೆಯ ಹಬ್ಬವೆಂಬಂತೆ ಹಿಂದೂಗಳೇ ಆಚರಿಸುತ್ತಿರುವುದು ವಿಶೇಷ. ಮೊಹರಂ ಹಿನ್ನಲೆಯ ಕುರಿತು ತಿಳಿಸಲು ಕೇಳಿದಾಗ ಅದು ನಮ್ಮ ಹಬ್ಬ ಎನ್ನುವುದಷ್ಟೇ ತಿಳಿದಿದ್ದ ಮಕ್ಕಳಿಗೆ ಊರಿನಲ್ಲಿ, ಮನೆಗಳಲ್ಲಿ ತಮ್ಮ ಹಿರಿಯರು ನಂಬಿದ್ದನ್ನೇ ಕೇಳಿಕೊಂಡಿದ್ದ ಮಕ್ಕಳು ಅದರ ಇತಿಹಾಸದ ಕುರಿತು ತಿಳಿದುಕೊಳ್ಳಲು ಆಸಕ್ತರಾಗಿದ್ದರು. ಹಸೇನ್-ಹುಸೇನ್ (ಪೀರ್) ನಿಗೂ - ದ್ಯಾಮವ್ವಳಿಗೂ ಯಾವ ತರಹದ ಸಂಬಂಧ....? ಮುಸಲನಿಗೂ ಹಾಗೂ ಹಿಂದೂ ದೇವತೆಗೂ ಹೇಗೆ ಸಂಬಂಧ.....? ಪುರಾಣದಲ್ಲಿ ಎಲ್ಲಿಯೂ ಈ ಧರ್ಮಗಳು ಕೂಡಿದ್ದು ಕಂಡು ಬರಲ್ಲ ಅದರೇ ಇಲ್ಲಿಯವರೆಗೂ ತಮ್ಮ ಮನೆಯ ಹಿರಿಯರು, ತಾವು, ಎಲ್ಲರೂ ಅದನ್ನೇ ನಂಬಿಕೊಂಡು ಬಂದಿದ್ದು ಹೇಗೆ ಎನ್ನುವ ಸಹಜವಾದ ಪ್ರಶ್ನೇಗಳು ಮಕ್ಕಳಿಂದ ಬಂದಾಗ ಮಕ್ಕಳ ಸಮಸ್ಯೆಗಳನ್ನು ಮೂಲದಿಂದ ಹಿಡಿದು ವಿವರವಾಗಿ ಸರಳಗೊಳಿಸುತ್ತಾ ಇಸ್ಲಾಂ ಧರ್ಮ ಸ್ಥಾಪನೆಯಿಂದ ಹಿಡಿದು,  ಇಸ್ಲಾಂ ಧರ್ಮ ರಕ್ಷಣೆಗಾಗಿ ಹೊರಾಡಿದ ಪೈಗಾಂಬರರ ಮೊಮ್ಮಕ್ಕಳು, ಹಸೇನ್‍ನಿಗೆ ವಿಷ ನೀಡಿ ಕೊಂದ ಬಗೆ, ಹುಸೇನ್‍ನ ಮಕ್ಕಳು ಹಸಿವಿನಿಂದ ಭಿಕ್ಷೆ ಬೇಡಿದಾಗ ನೀರು ನೀಡದೇ ಹೊಡೆದು ಸಾಯಿಸುತ್ತಾರೆ. ಈ ಆಚರಣೆಯನ್ನು ಮುಸ್ಲಿಂರು ಮೌನದಿಂದ ಇದ್ದು ರೋಜಾ (ಉಪವಾಸ) ಕೈಗೊಳ್ಳುವುದನ್ನು ನಡೆಸಿ ಹಸೇನ್-ಹುಸೆನ್ ರನ್ನು ನೆನೆಯುವುದು ಒಂದು ಕಡೇಯಾದರೆ, ಹುಲಿ ವೇಶ ಹಾಕಿ, ಕುಣಿದಾಡುವವರು ಹಸೇನ್-ಹುಸೇನ್‍ರ ವಿರೋಧಿ ಬಣದವರ ಎಂಬ ಸಂಕೇತಿಕವಾಗಿ ಕಾಣುತ್ತಾರೆ. 
               ಈ ರೀತಿಯ ಕಥೆಗಳು ಬಿಚ್ಚಿಕೊಳ್ಳುತ್ತಾ ಸಾಗಿದಾಗ ನಮ್ಮ ವಿದ್ಯಾರ್ಥಿಗಳು ಐತಿಹಾಸಿಕ ಹಿನ್ನಲೆಗಳ, ಧರ್ಮ, ಆಚರಣೆಗಳು, ಅದರ ಹಿಂದಿನ ಕಥೆಗಳ ಕುರಿತು ತುಂಬಾ ಗಂಭೀರವಾಗಿ ಚಿಂತಿಸುವ ಚರ್ಚಿಸುವ ವಾತವರಣ ಬೆಳೆದು ಬಂದಿದ್ದು ಶಾಲೆಯ ಎಲ್ಲರಿಗೂ ಸಂತೋಷ ತಂದಿತು. ಜಾನಪದೀಯ ಸಾಕ್ಷ್ಯಚಿತ್ರವನ್ನು ತೋರ್ಪಡಿಸುವ ಮೂಲಕವೇ ನಮ್ಮ ಶೈಕ್ಷಣಿಕ ವರ್ಷ ಪ್ರಾರಂಭಗೊಂಳ್ಳುವುದರ ಮೂಲಕ ಮಕ್ಕಳಿಗೆ ಪ್ರಶ್ನೀಸುವ, ಚಿಂತಿಸುವ ಅವಕಾಶಗಳನ್ನು ನೀಡುವುದರ ಮೂಲಕ ಮಕ್ಕಳಲ್ಲಿ ತಮ್ಮ ಮೂಲದ ಜನಪದದ ಜೊತೆ ಜೊತೆಗೆ ತಮ್ಮ ಕಲಿಕೆಯನ್ನು ಮುಂದುವರೆಸುವ ಆಸಕ್ತಿಯನ್ನು ಬೆಳೆಸಿದ್ದೇವೆ.


      ಸಾಹಿತ್ಯದ ಹುಡುಕಾಟವು ನಮ್ಮ ಮಕ್ಕಳಲ್ಲಿ ನಿರಂತರವಾಗಿ ಬೆಳೆಸುತ್ತಿರುವುದರಿಂದ ಇಂದು ನಮ್ಮ ಶಾಲೆಯ ವಿದ್ಯಾರ್ಥಿಯೊಬ್ಬ ಕಿರುಚಿತ್ರಕ್ಕೆ ಸಾಹಿತ್ಯವನ್ನು ಬರೆಯುತಲಿದ್ದಾನೆ. ಅದು ಸ್ಥಳೀಯ ಜನಪದವನ್ನೇ ಆಧಾರಿಸಿ ಬರೆದ ಕಥೆಯು ಕೆಲವು ಬದಲಾವಣೆ ಮಾಡಿ ನೀಡಿ ಎಂದು ಪ್ರತಿಷ್ಟಿತ ಚಾನಲ್ ಒಂದು ನಮ್ಮ ವಿದ್ಯಾರ್ಥಿಗೆ ಅವಕಾಶ ನೀಡಿದ್ದಾರೆ. ಮಕ್ಕಳ ಪ್ರತಿಭೆಯನ್ನು ಇಂದು ನಮ್ಮ ಭಾಗದ ಎಲ್ಲ ಶಿಕ್ಷಕರು, ಆಧಿಕಾರಿಗಳು ಕೊಂಡಾಡುತ್ತಿದೆ. ನಾವು ಮಾಡಿದ ಈ ಕಾರ್ಯ ಇಂದು ಊರಿನ ಯಾವುದೇ ಕಾರ್ಯಕ್ರಮದಲ್ಲಿ ಜನಪದಕ್ಕೆ ಒಂದು ವೇದಿಕೆಯ ಅವಕಾಶ ದೊರಕುತ್ತಿದೆ. ಮಕ್ಕಳು ಶಿಕ್ಷಣ ಪಡೆಯಲು ಬೇರೆ ಕಡೇಗೆ ಸಾಗಿದರು ಅವರ ಈ ಸಾಹಿತ್ಯ, ಜನಪದ ಹಾಗೂ ಕಲಾ ಶಿಕ್ಷಣದ ಹಿನ್ನಲೆಯಲ್ಲಿಯೇ ಚಿಂತನೆ ನಡೆಸುತ್ತಿರುವುದು ಕಂಡುಬಂದಿದೆ. ಕಲಿಕೆಯ ಮೂಲ ವೇದಿಕೆಯಾಗಿ ನಮ್ಮ ಜಾನಪದೀಯ ಚಿಂತನೆಗಳು, ಕಲಾಪ್ರಕಾರಗಳು ಹಾಗೂ ಸಾಹಿತ್ಯ ಇಂದು ನಮ್ಮ ಗ್ರಾಮದಲ್ಲಿ ಆಗಿರುವುದನ್ನು ನಾನು ಇಲ್ಲ ಒಪ್ಪಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ನಾನು ಹಳ್ಳಿ ಬಿಟ್ಟು ಹೋದರು ರಂಗಭೂಮಿ ಹಾಗೂ ಜಾನಪದೀಯ ಕಾರ್ಯಗಳು ನಿರಂತರವಾಗಿರುತ್ತದೆ ಎಂಬ ವಿಶ್ವಾಸವನ್ನು ನನಗೆ ಗ್ರಾಮದ ಹಿರಿಯರು, ಯುವಕರು ಹಾಗೂ ವಿದ್ಯಾರ್ಥಿಗಳು ಮೂಡಿಸಿದ್ದಾರೆ ಎನ್ನುವುದನ್ನು ತಿಳಿಯಪಡಿಸುತ್ತೇನೆ.


ಗುರುರಾಜ ಎಲ್
ನಾಟಕ ಶಿಕ್ಷಕ
ಸರಕಾರಿ ಪ್ರೌಢಶಾಲೆ
ಜಹಗೀರಗುಡದೂರ
ತಾ||ಕುಷ್ಟಗಿ ಜಿ||ಕೊಪ್ಪಳ

ಶುಕ್ರವಾರ, ಅಕ್ಟೋಬರ್ 11, 2019

ಕಲ್ಯಾಣದಲ್ಲಿ ಮಾಯೆ

ಮಕ್ಕಳ ರಂಗಭೂಮಿ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ - ಧಾರವಾಡ

ಮಕ್ಕಳ ರಂಗಭೂಮಿ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ  - ಧಾರವಾಡ