ಶನಿವಾರ, ಫೆಬ್ರವರಿ 21, 2015

ಬಣ್ಣದ ತಗಡಿನ ತುತ್ತೂರಿ...

( ಶ್ರೀವತ್ಸ ಜೋಷಿ ಯವರು ತಮ್ಮ Facebook ನಲ್ಲಿ ಮೂಡಿಸಿದ್ದನ್ನು ಇಲ್ಲಿ ಹಂಚಿಕೊಂಡಿದ್ದೇವೆ. )



 ಜಿ.ಪಿ.ರಾಜರತ್ನಂ ಅವರ ಅತಿಪ್ರಖ್ಯಾತ ಪದ್ಯ "ಬಣ್ಣದ ತಗಡಿನ ತುತ್ತೂರಿ"!

ಇದು ಕೂಡ ನನಗೆ ’ಕಂದನ ಕಾವ್ಯ ಮಾಲೆ’ ಪುಸ್ತಕದಲ್ಲಿ ಸಿಕ್ಕಿತು. 1933ರಲ್ಲಿ ಮುದ್ರಿತವಾದ ಆ ದಿವ್ಯ ಅಕ್ಷರಗಳ ಡಿಜಿಟಲ್ ಪ್ರತಿಯನ್ನೇ ಇಲ್ಲಿ ಬಳಸಿದ್ದೇನೆ. ಆಮೇಲೆ ಬಹಳಷ್ಟು ಪಠ್ಯಪುಸ್ತಕಗಳಲ್ಲಿ, ಮತ್ತು ಬೊಳುವಾರರ ’ತಟ್ಟು ಚಪ್ಪಾಳೆ ಪುಟ್ಟ ಮಗು’ ಸಂಕಲನದಲ್ಲೂ ಈ ಪದ್ಯ ಸೇರಿಕೊಂಡಿದೆಯಾದರೂ, ಜಿ.ಪಿ.ರಾಜರತ್ನಂ ಅವರೇ ಸಂಪಾದಕರಾಗಿ ಪ್ರಕಟಿಸಿದ ಪುಸ್ತಕದಿಂದ ಆಯ್ದುಕೊಂಡಿದ್ದೇನೆ ಎಂಬ ಹೆಮ್ಮೆ 
smile emoticon
 ಅಲ್ಲದೇ, ಇದು ಜಿ.ಪಿ.ರಾಜರತ್ನಂ ಬರೆದ ಮೊತ್ತಮೊದಲ ಶಿಶುಗೀತೆಯೂ ಹೌದು.

’ಹಾಡು ಹುಟ್ಟಿದ ಸಮಯ’ ಅಂಕಣದಲ್ಲಿ ಕನ್ನಡ ಚಿತ್ರಗೀತೆಗಳ ಉಗಮದ ಬಗ್ಗೆ ಮಣಿಕಾಂತ್ ಅವರು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದಂತೆ ಈ ಪದ್ಯದ ಉಗಮದ ಕುರಿತು ವಿವರಿಸುವುದಾದರೆ ಹೀಗಿದೆ:

ರಾಜರತ್ನಂ ಅವರು 1932ರಲ್ಲಿ ಎಂ.ಎ ಪದವೀಧರರಾದರು. ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ತತ್‌ಕ್ಷಣ ಸಿಗಲಿಲ್ಲ. ಏತನ್ಮಧ್ಯೆ ಅವರ ತಂದೆಯವರ ಆರೋಗ್ಯ ಕೆಟ್ಟಿತು. ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅವರು ತರಗತಿಗಳಿಗೆ ಹೋಗದಿರಲಾಗಿ ರಾಜರತ್ನಂ ಅವರೇ ಬದಲಿಶಿಕ್ಷಕರಾಗಿ ಹೋದರು. ಆದರೆ ಅಲ್ಲಿ ಪಠ್ಯವಿಷಯವಾಗಿ ಮಕ್ಕಳಿಗೆ ಅರ್ಥವಾಗದಂಥ, ಕಬ್ಬಿಣದ ಕಡಲೆಯಂಥ ಪದ್ಯಗಳಿದ್ದುದನ್ನು ಕಂಡು ಮರುಗಿದರು. ‘ಎಂಟು ಗೇಣಿನ ದೇಹ, ರೋಮಗಳೆಂಟು ಕೋಟಿಯು, ಮೂಳೆ ಅರವತ್ತೆಂಟು...’ ಎನ್ನುವ ಹರಿಭಕ್ತಿಸಾರದ ಪದ್ಯ, Winning of the golden fleece ಗ್ರೀಕ್ ಪುರಾಣವನ್ನು ’ಕನಕೋರ್ಣಾರ್ಜುನ’ ಎಂದು ಅನುವಾದ ಮಾಡಿದ್ದು- ಇದನ್ನೆಲ್ಲ ಈ ಪುಟ್ಟ ಮಕ್ಕಳು ಹೇಗೆ ತಾನೆ ಸವಿಯಬಲ್ಲವು ಎಂದು ಅವರಿಗೆ ಬೇಸರವಾಯಿತು. ಅವತ್ತು ಸಂಜೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಸ್ನಾನಘಟ್ಟದಲ್ಲಿ ಕಾಲು ಚಾಚಿ ಕುಳಿತುಕೊಂಡಾಗಲೂ ರಾಜರತ್ನಂ ಅವರಿಗೆ ಒಂದೇ ಯೋಚನೆ- ಮಕ್ಕಳಿಗೆ ಇಷ್ಟವಾಗುವ ಹಾಗೆ ಏನಾದರು ಬರಿಯಬೇಕು ಎಂದು. ಅದೇ ಕ್ಷಣದಲ್ಲಿ ಅವರ ತಲೆಯಲ್ಲಿ ತುತ್ತೂರಿ ಧ್ವನಿಸಿತು! ಪದ್ಯ ಬರೆದೇಬಿಟ್ಟರು. ರಾಗ ಹಾಕಿದರು, ಇದನ್ನು ಕೇಳಿದರೆ ಮಕ್ಕಳು ಎಷ್ಟು ಸಂತೋಷ ಪಡಬಹುದೆಂಬ ಹುಮ್ಮಸ್ಸಿನಲ್ಲೇ ರಾತ್ರಿಯೆಲ್ಲ ಕಳೆದರು. ಮಾರನೇದಿನ ಶಾಲೆಯಲ್ಲಿ ಪಾಠ ಮುಗಿದ ಮೇಲೆ, ’ತುತ್ತೂರಿ’ಯನ್ನು ಕರಿಹಲಗೆಯ ಮೇಲೆ ಬರೆದರು. ಮಕ್ಕಳಿಂದ ಹಾಡಿಸಿದರು. ಮಕ್ಕಳ ಹಿಗ್ಗಿಗೆ ಪಾರವಿಲ್ಲ. ಆ ಕಂದಮ್ಮಗಳ ಮೊಗದಲ್ಲಿ ನಗು ಕಂಡ ರಾಜರತ್ನಂ ಅವರ ಖುಷಿಗೂ ಪಾರವಿಲ್ಲ!

ಹಾಗಂತ, "ಅರ್ಜೆಂಟಿಗೆ ಹಡೆದ ಕೂಸು" ಎಂಬಂಥ ರಚನೆಯೇನಲ್ಲ ಇದು. ಮಕ್ಕಳ ಪದ್ಯಕ್ಕೆ ಅತ್ಯಗತ್ಯವಾದ ಲಯಬದ್ಧತೆ ಇದರಲ್ಲಿದೆ. ಬಣ್ಣದ/ ತಗಡಿನ/ ತುತ್ತೂರಿ/... ಕಾಸಿಗೆ/ ಕೊಂಡನು/ ಕಸ್ತೂರಿ... - ಹೀಗೆ ಪ್ರತಿ ಪಂಕ್ತಿಯಲ್ಲಿ ಮೂರು ನಿಲುಗಡೆಗಳು, ಅನುಕ್ರಮವಾಗಿ ನಾಲ್ಕು, ನಾಲ್ಕು ಮತ್ತು ಐದು ಮಾತ್ರೆಗಳ ಮೂರು ಗಣಗಳು. ಲಾಲಲ/ಲಲಲಲ/ಲಾಲಾಲ... ಲಾಲಲ/ಲಾಲಲ/ಲಾಲಾಲ... ಎಂದು ಗುಣುಗುಣಿಸಿಕೊಳ್ಳುತ್ತಿರುವಾಗಲೇ ಕಂಠಪಾಠವಾಗುತ್ತದೆ. ಲಯವನ್ನು ಅದು ಎಲ್ಲಿಯೂ ಬಿಡುವುದಿಲ್ಲ. ಉದಾಹರಣೆಗೆ: ತುತ್ತೂರಿ ಮತ್ತು ಕಸ್ತೂರಿ - ಇವು ಐದು ಮಾತ್ರೆಗಳ ಪದಗಳು. ಆದರೆ ನಾಲ್ಕು ಮಾತ್ರೆಯ ಪದವಾಗಿ ಬಳಸಬೇಕಾದಲ್ಲೆಲ್ಲ ರಾಜರತ್ನಂ ಅವುಗಳನ್ನು ಮೊಟಕುಗೊಳಿಸುತ್ತಾರೆ. 'ತನಗೇ ತುತ್ತುರಿ ಇದೆಯೆಂದ' (ಗಮನಿಸಿ: ತುತ್ತೂರಿಯ ಬದಲು ತುತ್ತುರಿ); 'ಕಸ್ತುರಿ ನಡೆದನು ಬೀದಿಯಲಿ' (ಗಮನಿಸಿ: ಕಸ್ತೂರಿಯ ಬದಲು ಕಸ್ತುರಿ). ಪದ್ಯದ ಕೊನೆಯಲ್ಲಿ ನೀತಿಬೋಧೆಯಂತೂ ಇದ್ದೇಇದೆ. ಇನ್ನೇನು ಬೇಕು ಅತ್ಯಂತ ಜನಪ್ರಿಯ ಶಿಶುಗೀತೆಯಾಗಿ ಪ್ರಸಿದ್ಧಿ ಹೊಂದಲಿಕ್ಕೆ?

ರಾಜರತ್ನಂರವರ ಸಮಕಾಲೀನರಾಗಿದ್ದ ನಾ.ಕಸ್ತೂರಿ (’ಅನರ್ಥಕೋಶ’ದಿಂದ ಪ್ರಖ್ಯಾತ) ಅವರು ಒಮ್ಮೆ ರಾಜರತ್ನಂರನ್ನು ಕರೆದು, "ಲೋ, ರಾಜರತ್ನ, ಪದ್ಯ ಬರೆದು ನನಗೆ ಅವಮಾನ ಮಾಡಿದ್ದೀಯಲ್ಲೋ" ಎಂದು ತಮಾಷೆಗೆಂದೇ ತರಾಟೆಗೆ ತೆಗೆದುಕೊಂಡಿದ್ದರಂತೆ. ರಾಜರತ್ನಂ ಕಕ್ಕಾಬಿಕ್ಕಿಯಾಗಿ "ಇಲ್ಲವಲ್ಲ ಸಾರ್" ಎಂದರಂತೆ. ಅದಕ್ಕೆ ನಾ.ಕಸ್ತೂರಿಯವರು "ಯಾಕೋ ಇಲ್ಲ, ಬರೆದಿದ್ದೀಯ: ಬಣ್ಣದ ತಗಡಿನ ತುತ್ತೂರಿ. ಕಾಸಿಗೆ ಕೊಂಡನು ಕಸ್ತೂರಿ ಅಂತ ಬರೆದಿಲ್ವೇನಯ್ಯ? ಅಲ್ಲದೆ ಕೊನೇಲಿ 'ಜಂಬದ ಕೋಳಿಗೆ ಗೋಳಾಯ್ತು' ಅಂತ ಬೇರೆ ಹೇಳಿದೀಯ! ಹೇಳು, ನಾನು ಜಂಬದ ಕೋಳಿಯೇನೋ?" ಎಂದು ಕಿಚಾಯಿಸಿದರಂತೆ. ಅಂದರೆ, ಫೇಸ್‌ಬುಕ್‌ನಲ್ಲಿ tag ಮಾಡಿದ ಹಾಗೆ ರಾಜರತ್ನಂ ಪದ್ಯದಲ್ಲಿ ಟ್ಯಾಗ್ ಮಾಡಿದ್ದಾರೆ ಎಂದು ನಾ.ಕಸ್ತೂರಿಯವರ ತಕರಾರು 
smile emoticon
 ಆದರೆ ಅಂಥ ಸರಸ ಘಟನೆಗಳು ಆಗಿನ ಸಜ್ಜನರ ನಿರ್ಮಲತೆಯನ್ನೂ, ಸರಳತೆಯನ್ನೂ, ತಮ್ಮ ಸಮಕಾಲೀನರ ಪ್ರತಿಭೆ ಮತ್ತು ಯಶಸ್ಸನ್ನು ಸಂಭ್ರಮಿಸುವುದನ್ನೂ ತೋರಿಸುತ್ತವೆ.

ಕನ್ನಡ ಶಿಶುಸಾಹಿತ್ಯವನ್ನು ರಾಜರತ್ನಂ ಶ್ರೀಮಂತಗೊಳಿಸಿದರು. ಪ್ರಗತಿಶೀಲ ಮತ್ತು ನವ್ಯಸಾಹಿತ್ಯ ಸಂದರ್ಭದಲ್ಲಿ ಬಾಲಸಾಹಿತ್ಯ ಅಲಕ್ಷ್ಯಕ್ಕೆ ಒಳಗಾಗಿತ್ತು. ಮೊದಲನೆಯದಾಗಿ ಬಾಲಕ-ಬಾಲಕಿಯರು ಸಮಾಜದ ಭವಿಷ್ಯವನ್ನು ನಿರ್ಮಿಸುವವರು, ಅವರಲ್ಲಿ ಸಾಹಿತ್ಯಪ್ರೇಮ ಬೆಳೆಯದಿದ್ದರೆ ಅವರು ದೊಡ್ಡವರಾದ ಮೇಲೆ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟುವುದು ಕಷ್ಟ. ಎರಡನೆಯದಾಗಿ, ಸಾಹಿತ್ಯವು ಮಗುವಿನ ಬಾಲ್ಯಕ್ಕೆ ಬಾಹ್ಯಜಗತ್ತನ್ನೂ ಭಾಷೆಯ ಬಳಕೆಯನ್ನೂ ಏಕಕಾಲಕ್ಕೆ ಪರಿಚಯ ಮಾಡಿಕೊಡುವ ಒಂದು ವಿಶಿಷ್ಟ ಸಾಧನ. ಇದನ್ನು ಮನಗಂಡ ರಾಜರತ್ನಂರಂಥ ಸಾಹಿತಿಗಳು ಬಾಲಸಾಹಿತ್ಯದಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ರಾಜರತ್ನಂ ಅವರ ಮ್ಯಾಜಿಕ್ ಎಂದರೆ ಪರಿಚಿತ ಜಗತ್ತನ್ನೇ ಹೊಚ್ಚಹೊಸ ಜಗತ್ತನ್ನಾಗಿ- ಅಂದರೆ ಮಗು ಯಾರನ್ನಾದರೂ ಪ್ರಶ್ನಿಸಬಹುದಾದ ಅಥವಾ ಮಾತನಾಡಿಸಬಹುದಾದ ಜಗತ್ತನ್ನಾಗಿ- ಮಾರ್ಪಡಿಸುವುದು. ಮಗುವಿನ ಪದಸಂಪತ್ತಿಗೆ ಹೊಸ ಶಬ್ದಗಳನ್ನು ಸೇರಿಸುವುದು. ನಿತ್ಯಜೀವನದ ಮಾತುಕತೆಗೆ ಸಹಜವಾದ ಎಲ್ಲ ಬಗೆಯ ವಾಕ್ಯರಚನೆಗಳು ಪ್ರತ್ಯಕ್ಷವಾಗಿ ಮಗುವಿಗೆ ತನ್ನಿಂತಾನೇ ವಾಕ್ಯಗಳನ್ನು ಕಟ್ಟುವ ಶಕ್ತಿಯನ್ನು ಬೆಳೆಸುವುದು. ಕನ್ನಡ ಮಕ್ಕಳಿಗೆ ಕನ್ನಡ ಭಾಷೆಯ ಪದಸಂಪತ್ತು, ವಾಕ್ಯರಚನಾ ವಿಧಾನ, ಪ್ರಾಸಸಂಪತ್ತು, ನಾದಸಂಪತ್ತು ಇವೆಲ್ಲವನ್ನು ಖುಷಿಯಾಗಿ ಆಡುತ್ತಾ ಹಾಡುತ್ತಾ ಕಲಿಸುವ ಮಾರ್ಗವೆಂದರೆ ಅವರಿಗೆ ರಾಜರತ್ನಂರ ಶಿಶುಗೀತೆಗಳನ್ನು ಹೇಳಿಕೊಡುವುದು. ಮಕ್ಕಳು ಕನ್ನಡ ಭಾಷೆಯ ಸಂಪತ್ತನ್ನೂ ಸೊಗಸನ್ನೂ ಹೀರಿಕೊಳ್ಳುವಂತೆ ಮಾಡುವುದು.