ಶುಕ್ರವಾರ, ನವೆಂಬರ್ 8, 2013

ಮೊಹರಂ



               ಜಾನಪದ ಹಳ್ಳಿಯ ಪ್ರಾಣ. ಅಧುನಿಕ ಶಿಕ್ಷಣವನ್ನು ಚಿಂತನೆಗೆ ಬಿಟ್ಟು ಜನರ  ಉಸಿರಿನೊಡನೆ ಬೆರೆತದ್ದು ಜಾನಪದ. ಆದರೆ ಇಂದು ನಾವು  ತಿಳಿದಂತೆ ಇದೆಯೇ ಎಂದು ಯೋಚಿಸುವಾಗ ಧನಾತ್ಮಕ ಹಾಗೂ ಋಣತ್ಮಕ ಎರಡು ಅಂಶಗಳು ಗೋಚರಿಸುತ್ತವೆ. ನಾನೊಂದು ಸಣ್ಣ ಹಳ್ಳಿಯಲ್ಲಿ ಶಿಕ್ಷಕನಾಗಿ ಕಾರ್ಯ ವಹಿಸುತ್ತಿರುವವ. ಇಂಥಹ ವಿಷಯಗಳು ಜಾಗತಿಕವಾಗಿ ಗಮನಿಸುವುದಕ್ಕಿಂತ ಸಾಮಾನ್ಯನಂತೆ ಕಾಣಲು ಬಯುಸುತ್ತೇನೆ. ಇಲ್ಲಿಯ ಜನರ ನಂಬಿಕೆಯಲ್ಲಿ ಆಧುನಿಕತೆ ಇಲ್ಲಿಯವರೆವಿಗೂ ಎಷ್ಟೇ ವಿಧದಲ್ಲಿ, ಯಾವುದೇ ರೀತಿಯಲ್ಲಿ ಪ್ರವೇಶ ಪಡೆದಿದ್ದರು ಅದು ಹಬ್ಬ ಹಾಗೂ ಆಚರಣೆಗಳಲ್ಲಿ ಎಲ್ಲವನ್ನು ಮೀರಿ ನಿಲ್ಲುತ್ತಿದೆ. ಮುಂದೆ ಬದಲಾವಣೆಗಳು ಕಾಣಬಹುದು, ಆದರೆ ಪ್ರಸ್ತುತವಾಗಿ ನಾವು ಕಾಣುವಾಗ ಸ್ಪಷ್ಟವಾಗಿದೆ. ಮೊಹರಂನ ಈ ದಿನಗಳಲ್ಲಿ ಕಳೆದ ಎರಡು ತಿಂಗಳುಗಳಿಂದ ದಿನವೂ ಬಿಡದೆ ಸಂಘದ ಕೋಣೆಯಲ್ಲಿ ಸೇರಿ ಹೆಜ್ಜೆಕುಣಿತ, ರಿವಾಯಿತ್ ಪದಗಳನ್ನು ಬಿಡದೆ ಅಭ್ಯಾಸ ಮಾಡುತ್ತಿರುವ ಯುವಕರು ಅವರಿಗೆ ಮಾರ್ಗದರ್ಶನ ಮಾಡುತ್ತಿರುವ ಹಿರಿಯರನ್ನು ಕಂಡಾಗ ಮೂಲದ ಕೊಂಡಿಯ ಶಕ್ತಿಯ ಕುರಿತು ಅಶ್ಚಾರ್ಯವಾಗುತ್ತದೆ. 

                                                                                             ಮುಸ್ಲಿಂರ ಆಗಮನದಿಂದ ಅವರ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಚಾರಗಳು ಎಲ್ಲ ರೀತಿಯಲ್ಲಿ ನಮ್ಮ ಜನರೊಟ್ಟಿಗೆ ಬೆರೆತವು. ಇಂದು ಹೇಗಾಗಿದೆಯೆಂದರೇ ಹಸೇನ್ ಹುಸೇನ್ ( ಪೀರ) ನು ಹಾಗೂ ಊರ ದ್ಯಾಮವ್ವ ಅಣ್ಣ ತಂಗಿ ಎಂದು ಮಾತನಾಡುವ ಹಿರಿಯರು ಧರ್ಮಗಳು ಭಿನ್ನ ಎಂದು ನೋಡುವ ಆ ಕುರಿತು ಮಾತನಾಡುವ ಪ್ರಸಂಗವೇ ಉದ್ಭವವಾಗಿಯೇ ಇಲ್ಲ. ಬಿನ್ನ ಸಮುದಾಯದ ಯುವಕರು ಒಂದೆಡೆ ಕಲೆತು ಹೆಜ್ಜೆ ಹಾಕುವ ಈ ಕ್ಷಣಗಳು ಮಧುರವೆಂದು ಹೇಳುತ್ತೇನೆ.

    ನಮ್ಮ ಜಹಗೀರಗುಡದೂರಿನ ಗ್ರಾಮದಿಂದ ಬದುಕಿಗಾಗಿ 
ದೂರದ ಮಂಗಳೂರು,ಉಡುಪಿ, ಬೆಂಗಳೂರು, ಗೋವ ಹೀಗೆ ನಾನಾ ಮಹಾ ನಗರಗಳಿಗೆ ಗುಳೆ ಹೊರಟು ಹೋಗಿ ದುಡಿಯುತ್ತಿರುವ ಹಲವು ಜನರಿದ್ದಾರೆ. ಆದರೆ ನಮ್ಮದೇ ಆಗಿ ಹೋಗಿರುವ ಈ ಮೊಹರಂನ ದಿನಗಳನ್ನು ತಪ್ಪಿಸಿಕೊಳ್ಳದೆ ಅಲಾವಿ ಸುತ್ತಾ ಒಂದು ಬಾರಿ ಹೆಜ್ಜೆ ಹಾಕದಿದ್ದರೆ ಸಮಾಧಾನವಿಲ್ಲ ಎಂದು ಊರಿಗೆ ಮರಳಿ ಬರುತ್ತಿದ್ದ ಯುವಕನ ಮಾತಿನಿಂದ ತಿಳಿದುಕೊಂಡೆ. ಹಬ್ಬದ ಸಂಭ್ರಮದ ಕಾವು ನಿಧಾನವಾಗಿ ಮೇಲೇರುತ್ತಿದೆ. ಮೊಹರಂನ ಕೊನೆಯ ಕತ್ತಲ ರಾತ್ರಿಯ ದಿನ ಹೆಜ್ಜೆಕುಣಿತದ ಆಟವನ್ನು ಸವಿಯಬೇಕು. ಒಬ್ಬ ನಾಟಕ ಶಿಕ್ಷಕನಾಗಿ ಇಂಥಹ ಕ್ಷಣಗಳನ್ನು ಆಸ್ವಾದಿಸುವುದು ಖುಷಿ ಕೊಡುತ್ತದೆ. ಸಂಭ್ರಮದ ಈ ದಿನಗಳನ್ನು ನಾನು ಅವರಂತೆಯೇ ಬದಕಲು ಇಚ್ಚಿಸುತ್ತೇನೆ.