ಗುರುವಾರ, ಅಕ್ಟೋಬರ್ 22, 2015

ಐ.ಎಫ್.ಎ ಸಂಸ್ಥೆ

ದಸಾರ ಹಾಗೂ ಮೊಹರಂ ಹಬ್ಬದ ಶುಭಾಷಯಗಳು


ಮಂಗಳವಾರ, ಸೆಪ್ಟೆಂಬರ್ 15, 2015

ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ

             

ಸರ್ ಎಂ ವಿಶ್ವೇಶ್ವರಯ್ಯ ನವರ ಜನ್ಮ ದಿನವಾದ ಇಂದು ಜಿಲ್ಲೆಯ ಸ.ಹಿ.ಪ್ರಾ.ಶಾಲೆ, ರೈಲ್ವೆ ನಿಲ್ದಾಣ, ಕೊಪ್ಪಳ ಇಲ್ಲಿ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯ ವತಿಯಿಂದ ನಡೆದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸ್ಥಳೀಯ ಜಹಗೀರ ಗುಡದೂರ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಗಳಿಸಿ, ವಿಭಾಗ ಮಟ್ಟಕ್ಕೆ ಆಯ್ಕೆ ಹೊಂದಿದ್ದಾರೆ. ತಾಲೂಕಿನಿಂದ ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿ ಆಯ್ಕೆಗೊಂಡ ನಾಟಕಗಳನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಲಾಗಿತ್ತು. ನಾಲ್ಕು ತಾಲೂಕುಗಳಿಂದ ಒಟ್ಟು ಏಂಟು ತಂಡಗಳು ಇಂದು ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಉತ್ತಮ ನಟಿ ಗ್ಯಾನವ್ವ, ಮೊ.ವ.ನಿ.ಶಾಲೆ, ಕಾಟಪುರ ವಿದ್ಯಾರ್ಥಿನಿ ಪಡೆದರೆ, ಉತ್ತಮ ನಟ ಪ್ರಶಸ್ತಿಯನ್ನು ಲಕ್ಷ್ಮಣ ಗೊಲ್ಲರ, ಸ.ಪ್ರೌ.ಶಾಲೆ, ಜಹಗೀರಗುಡದೂರ ವಿದ್ಯಾರ್ಥಿ ಪಡೆದನು. ರಚನೆ, ನಿರ್ದೇಶನ ಈ ಎರಡು ಪ್ರಶಿಸ್ತಿಗಳನ್ನು ಶಿಕ್ಷಕರಾದ ಶ್ರೀ ಗುರುರಾಜ್ ಅವರು ಪಡೆದರು. ದ್ವಿತೀಯ ಬಹುಮಾನವನ್ನು ಮೊರಾರ್ಜಿ ಶಾಲೆ ಕಾಟಪುರ ಪಡೆದುಕೊಂಡಿದೆ.

ಮಂಗಳವಾರ, ಸೆಪ್ಟೆಂಬರ್ 1, 2015

ಪತ್ತಾರ ಮಾಸ್ತರರ ಬುತ್ತಿಯಿಂದ....


ಸುಮಾರು ೧೯೭೮ ರ ಕಥೆ. 

( ಅವಧಿಯಲ್ಲಿ  ಪ್ರಕಟಗೊಂಡಿದ್ದು )
ಶಿಕ್ಷಕರ ದಿನಾಚರಣೆ ಅಂಗವಾಗಿ ನನ್ನೊಂದಿಗೆ ಕಾರ್ಯ ನಿರ್ವಹಿಸುತ್ತಿರುವ, ನಿವೃತ್ತಿಯ ಅಂಚಿನಲ್ಲಿರುವ ದತ್ತಾತ್ರೇಯ ಶಾಮರಾವ್ ಪತ್ತಾರ್ ಗುರುಗಳು ನಾನು ಹುಟ್ಟುವ ಮುಂಚೆ ಪಾಠ ಮಾಡಲು ತೊಡಗಿಕೊಂಡವರು. ಅವರ ಒಂದೊಂದು ಅನುಭವಗಳನ್ನು ಕೇಳುತ್ತಾ ಇದ್ದರೆ ಕಾಣದ ಒಂದು ಪ್ರಪಂಚವೇ ಗೋಚರಿಸುತ್ತದೆ. ಕುಷ್ಟಗಿ ತಾಲೂಕಿನ ಪ್ರೌಢಶಾಲೆಯಲ್ಲಿ ತಮ್ಮ ಕೊನೆಯ ವರ್ಷದ ಸೇವೆಯಲ್ಲಿ ಅವರ್ ಮಾತುಗಳಲ್ಲಿಯೇ ಅವರನ್ನು ಕಾಣತೊಡಗಿದ್ದೇನೆ. ಶಿಕ್ಷಕನಿಗೊಂದು ಸಲಾಮು ಹೇಳುತ್ತಾ, ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭವನ್ನು ಕೋರುತ್ತೇನೆ.]
 
 4
ಒಂದು ದಿನ ಬೆಳಿಗ್ಗೆ ತೆಂತಂಡಿಗೆ ಅಂತ ನಾನು ಹೊರಟಿದ್ದೆ. ಅಲ್ಲೇ ಧಣೇರು ಒಂದು ನಾಯಿ ಕುನ್ನಿ ಹಿಡಕೊಂಡು ಮತ್ತೇ ರಾಜಸಾಬನ ಜೊತೆ ಹಂಗೇ ಅತ್ಲ ಕಡೇ ಬಂದ್ರೂ. ಅವರ ಕಂಪೋಂಡಿನ ಹತ್ತಿಲೇ ಹೋಗುತಿದ್ದ ನನ್ನ ನೋಡಿ, ರಾಜಸಾಬನಿಗೆ ” ಅಂವಾ ಮಾಸ್ತರಾಲ್ಲೇನು ? ” ಅಂತ ಅಂದ ಅದು ನನ್ ಕಿವಿಗೆ ಬಿದ್ದಿದ್ದೇ ನಾನು ” ಹೌದ್ರಿ ನಾನಾ ಮಾಸ್ತರ್, ದತ್ತಾತ್ರೇಯ ಮಾಸ್ತರಾ ” ಅಂತ ಅಲ್ಲೇ ಕೆಳಗೆ ಚರಗೀ ಇಟ್ಟು ನೆಲಕ್ಕೆ ಸಣ ಮಾಡ್ದೆ.
” ಹೇ ಮಾಸ್ತಾರ, ನೀ ಎಲ್ಲಿದಿಯಪ್ಪ….” ಅಂತ ಕೇಳಿದರು.
“ಇಲ್ಲರೀ ದಣೇರಾ, ಇಲ್ಲೇ ಪೋಸ್ಟ್ ಚನ್ನಯ್ಯನ್ ಮನೇಗಾ ಬಾಡಿಗಿ ಐದೀನ್ ರೀ…” ಅಂತಂದೆ..
” ಯಾಕಾ….? ನಾವಲ್ಲಿ ಸಾಲು ಹಿಡಿದು ಮಎ ಕಟ್ಟಿಸಿವಲ್ಲಾ, ನಮ್ಮ ದರ್ಬಾರ ಮುಂದೆ ಯಾರಿಗೆ ಕಟ್ಟಿಸಿವಿ ಅನ್ಕೋಂಡಿ ಅದು. ನೌಕರದಾರರಿಗೆ ಕಟಿಸಿದ್ದಪ್ಪ, ಅಲ್ಲಿರಬೇಕು.”
” ಆಯ್ತು ದಣೇರ. ದಣೇರಾ….. ಅಲ್ಲಿ ನೀರು ಪಾರು ಅನುಕೂಲ ಐತಿರೀ… ಸಾಲೀನು ಸನೇವು ಅಕ್ಕೇತಿ, ನಾನು ಒಬ್ನೇ ಬೇರೆ ಇರ್ತೀನಿ ಅದ್ಕ…… ಅಲ್ಲೇ……  ಚನ್ನಯ್ಯನ ಮನೇಗಾ ಇರ್ತೀನಿ ರೀ ” ಅಂದೆ
” ಏ ಇಲ್ಲ, ಇಲ್ಲ. ನಾನು ಅದನೆಲ್ಲ ಕೇಳೋದಿಲ್ಲ. ಸಿದಾ ಬಂದು ನಾವು ಕಟ್ಟಿಸಿದ್ದ ಮನೇಗಾ ಇರಬೇಕು.ಮತ್ತಾ ಯಾರಿಗೀ ಕಟ್ಟಿಸಿವಿ ಅದನ್ನ”
“ಅಯ್ತು ರೀ” ಅಂತಂದು ಅಲ್ಲಿಂದ ಹೊರಟೇ.
ಎರಡು ದಿನಗಳಾವರೆಗೆ ಅತ್ತ ಹೋಗೋದು ಬಿಟ್ಟೆ. ಮರೀತಾರೇನು ಅಂತ. ಶಾಲೆಗೆ ಇದ್ದ ಗಳಿಗೆಯಲಿ ಒಬ್ಬ ಆಳನ್ನ ಹೇಳಿ ಕಳುಹಿಸಿದರು.
” ಹಿಂಗರೀ ದಣೇರು ಕರಿಯಾಕುಂತಾರ ” ಅಂತ ಅಂದ ಬಂದ ಆಳು.
“ಇಲ್ಲಾಪ ನಾನು ಸಾಲೀ ಬಿಟ್ಟ ಮ್ಯಾಲೇ ಬರ್ತೀನಿ ಅಂತ ಹೇಳು ” ಅಂತಂದೆ
ಆಳು ” ಇಲ್ರೀ ಈಗಲೇ ಬರಬೇಕಂತೆ ” ಅಂತಂದ. ನಾನು ನೇರ ಹೆಡ್ ಮಾಸ್ತರರ ಬಳಿ ಹೋಗಿ ಕೇಳಿದೆ. ಅವರು ತಕ್ಷಣನೇ
” ಹೋಗು ತಡಮಾಡದೇ ಹೋಗಿ ಕಂಡು ಬಾ… ಹೋಗೂ ” ಅಂದ್ರು ನಾನು ಸೀದಾ ಆಳುವಿನ ಜೊತೆ ಹೊರಟೆ.
” ಯಾಕಪ ಮಾಸ್ತರ ಮೊನ್ನೆ ಹೇಳಿದ್ದು ಕಿವ್ಯಾಗ ಬೀಳಲಿಲ್ಲ ಏನು ನಿನಗಾ “
” ಇಲ್ಲರೀ ದಣೇರಾ… ಬರ್ತೀನಿ ರೀ..”
” ಎಂದು ಬರಾವ ನೀನು “
” ನಾಳೆ ಬರ್ತೀನಿ ರೀ “
” ಮಾಸ್ತರಾ… ಬಾಡಿಗೀ ಏಟು ಗೊತ್ತೈತೇನು ? ಅದ್ಕ ಎಲ್ಲ ಸೇರಿ ಎಂಟ್ರೂಪೈ ನೋಡು ಏಂಟ್ರೂಪೈ. ” ಅಂದ್ರು.
ನಾನು ” ಆಯ್ತ ರೀ  ದಣೇರಾ  ಅಂದೆ. “
” ನೋಡಾಪಾ ಮಾಸ್ತರಾ ಅದರಲ್ಲಿ ಲೈಟು-ಗೀಟೂ ಎಲ್ಲಾ ಬಂತೂ.  ಏನಾದ್ರೂ ಬೇಕಾದ್ರೆ ಕೇಳು. ಇಲ್ಲೇ ನಮ್ಮ ಹುಡುಗ್ರು ಇರ್ತಾವೇ..  ಮೊಸರು- ಪಸರು, ಮಜ್ಜಿಗಿ-ಪಜ್ಜಿಗಿ  ಯಾವುದಕ್ಕೂ ಸಂಕೋಚ ಪಡದೇ ಕೇಳು” ಅಂತಂದ್ರು.
ನನ್ನ ಜೊತೆ ಇದ್ದ ಒಂದು ಟ್ರಂಕ್,  ಚಾಪೆ, ಕೊಡಪಾನದ ಸಮೇತ ಬಂದು ದಣೇರು ಹೇಳಿದ್ದ ಕೊಣೆಯಲ್ಲಿ ವಾಸವಾದೆ.
ಇದು ನಾನು ೧೯೭೮ ರಲ್ಲಿ ನೌಕರಿಗೆ ಸೇರಿದಾಗ ಆದದ್ದು. ರಾಯಚೂರಿನ ಸಣ್ಣ ಹಳ್ಳಿಯಲ್ಲಿ ಯಾವುದೇ ಬಸ್ಸು ಸಂಚಾರವಿರದ ಜಾಗಕ್ಕೆ ನನ್ನ ನೇಮಕವಾಗಿತ್ತು. ಬಸ್ಸಿನ ಜಾಡು, ಊರಿಗೂ ಸರಿ ಸುಮಾರು ೪ ರಿಂದ ೫ ಕಿ.ಮೀ ನಡುಗೆಯಲ್ಲಿ ಸಾಗಬೇಕಿತ್ತು.

ಗುರುವಾರ, ಆಗಸ್ಟ್ 6, 2015

ಬುಧವಾರ, ಜುಲೈ 29, 2015

ಸಲಾಮ್ ಅಬ್ದುಲ್ ಕಲಾಂ


ನಮ್ಮೂರಿಗೇನು ಕಲಾಂ ಅವರು ಬರಲಿಲ್ಲ. ಆದರೆ ನಮ್ಮವರೇ ಆಗಿದ್ದರು ಕಲಾಂ ಅವರು.  ವಿದ್ಯಾರ್ಥಿಗಳ ಮನದಲ್ಲಿ ಬೇರೂರಿದ್ದಾರೆ. ಹೊಸತನಕ್ಕೆ ಹಾತೋರೆಯುವ ಈ ಹೊಸ ಕುಡಿಗಳು ಕಂಡಾಗ ಏನೆಲ್ಲ ಅವಕಾಶಗಳನ್ನು ಕಲ್ಪಿಸಿಕೊಡ ಬೇಕೆಂದು ನನ್ನ ಮನ ತುಡಿಯುತ್ತದೆ. ಕಲಾಂ ಅವರಿಗೊಂದು ಸಲಾಮ್ ಮಾಡುತ್ತಾ, ಮಕ್ಕಳಿಗಾಗಿಯೇ ಮತ್ತಷ್ಟು ಕೊಟ್ಟುಕೊಳ್ಳೋಣ. ಕಲಾಂ ಅವರಂತೆ. ಹೊಸ ಭವಿಷ್ಯಕ್ಕೆ ಹೊಸ ಹಾದಿಯನ್ನು ಸರಿಯಾಗಿಡೋಣ.

ಮಂಗಳವಾರ, ಜುಲೈ 21, 2015

ವಿಜ್ಞಾನ ನಾಟಕದ ತಯಾರಿಯಲ್ಲಿ ನಮ್ಮ ವಿದ್ಯಾರ್ಥಿಗಳು

ಆಗಷ್ಟ ೧೧, ೨೦೧೫ ರಂದು ನಮ್ಮ ಪ್ರೌಢಶಾಲೆಯಲ್ಲಿ ತಾಲುಕು ಮಟ್ಟದ ವಿಜ್ಞಾನ ನಾಟಕ ಸ್ಪರ್ದೆ ಇದೆ. ಅದಕ್ಕಾಗಿ ತಾಲಿಂ ಪ್ರಾರಂಭವಾಗಿದೆ. (ಪೋಟೋ ಹಿಂದಿನದು)




೨೦೧೫-೧೬ ನೇ ಸಾಲಿನ ಹನಮನಾಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ಸರ್ವರಿಗೂ ಸ್ವಾಗತ.

ಬುಧವಾರ, ಜುಲೈ 15, 2015

ಒಂದು ಹಣತೆ : ಒಂದು ಸಣ್ಣ ಕಥೆ!

Girish T P

ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ ” ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.

ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು.


ಇದನ್ನು ಕೇಳಿದ ಬತ್ತಿ ” Hello! ನಾನು ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ logically ಬೆಳಕು ನನ್ನದು “ಎಂದಿತು.


ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ ” ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು.


ನಾನು ನನ್ನಿಂದ ಎಂಬ ಕಚ್ಚಾಟದಲ್ಲಿ ಹಣತೆ ಹೊಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !

-------------------------
ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿತ್ತು. ” ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನಿಧ್ಯವಿಲ್ಲ ”

ಆ ಭರವಸೆಯ ಬೆಳಕು ನಿಮ್ಮದಾಗಲಿ


ಮಂಗಳವಾರ, ಜೂನ್ 16, 2015

POST CARD


ಭಾನುವಾರ, ಮೇ 17, 2015

ನಮ್ಮ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಶಶಿಧರ ಬಾದವಾಡಗಿ

ಶಶಿಧರ ಬಾದವಾಡಗಿ 
೨೦೧೪ - ೧೫ ನೇ ಸಾಲಿನ  ವರ್ಷ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ತೆಗೆದುಕೊಂಡು ( ಶೇ  87 % ) ಮೊದಲಿಗನಾಗಿದ್ದಾನೆ. ಶಶಿಧರ ಬಾದವಾಡಗಿ ವಿಧ್ಯಾರ್ಥಿಗೆ ಅಭಿನಂದನೆಗಳು. 

ಬುಧವಾರ, ಏಪ್ರಿಲ್ 29, 2015

ನಿನಗೆ ನೀನೇ !




ಗುರುವಾರ, ಮಾರ್ಚ್ 26, 2015

ಸೋಮವಾರ, ಮಾರ್ಚ್ 23, 2015

ಪ್ರಶಂಸನಾ ಪತ್ರ


ಭಾನುವಾರ, ಮಾರ್ಚ್ 22, 2015

'ಯಾನುಲ್ ಡೇ ಮಾಡೇವಿ.......

'ಯಾನುಲ್ ಡೇ ಮಾಡೇವಿ. . . . ನೋಡಾಕ ಬರೋರೇನ?' - ಶಾಲಾ ವಾರ್ಷಿಕೋತ್ಸವಗಳ ಬಗ್ಗೆ ಬರೆದಿರುವುದು, ಒಮ್ಮೆ ತಪ್ಪದೇ ಓದಿ ಆಮೇಲೆ ಹೇಳಿ ಹೇಗಿದೆ ಎಂದು...
'ಸರಾ ಏನೇನ್ ತಗೋಬೇಕ್ರಿ' ಅಂದೆ ರಂಗನಾಥಸರಿಗೆ.
'ಏ ಏನಿಲ್ರಿ ಎರಡು ಶಾಲ್ ತಾಟ್,ಹಣ್ಣು ಮತ್ತ್ ಒಂದೆರಡು ಗಿಫ್ಟ್ ತಗೋಳ್ಳೋಣು' ಅಂದ್ರು.' ಅಲ್ರೀ ಮಾಡೂದು ಯಾನುವಲ್ ಡೇ, ಸನ್ಮಾನ ಯಾರಿಗೆ' ಅಂದೆ. 'ಸ್ಟೇಜು ಸೌಂಡಿಗೆ ರೊಕ್ಕಾ ಕೊಟ್ಟಾರಲಾ ಅವರಿಗೆ' ಅಂದ್ರು. ಒಂದು ಕೈಲಿ ಸಾಯ ಮಾಡಿದ್ರ ಇನ್ನೊಂದ್ ಕೈಗ್ ಗೊತ್ತಾಗಬಾರದು ಅಂತಾರಲ್ರೀ ಸರಾ. ಮತ್ತಿದೇನು ಅವರು ಕೊಟ್ಟ ಯಾಲ್ಡೆಲ್ಡ್ ಸಾವ್ರದಾಗ ಐದೈದನೂರ್ ಸನ್ಮಾನಕ್ಕ ಖರ್ಚ ಆಗ್ತದಲ್ರೀ ಅಂದೆ. ಇಲ್ರೀ ಸರಾ ಸನ್ಮಾನಕ್ಕ ಬ್ಯಾರೇನ ರೊಕ್ಕ ಕೊಟ್ಟಾರ ಅಂದ್ರು. ಛಲೋ ಆತ್ ನಡೀರಿ ಅಂದೆ. ಸರಾ ಇವ್ರಿನ್ನಾ ಪಾಡ. ಇನ್ನೊಂದಿಬ್ರು ಬಂದಿದ್ರು. ಸನ್ಮಾನಕ್ಕೆಷ್ಟ ಆಗ್ತದ್ರಿ ಕೊಡ್ತೀವಿ ನಮಗೂ ಮಾಡ್ರಿ ಅನ್ನಾಕತ್ತಿದ್ರು ಅಂದ್ರು. ಅದಕ್ಕಂತಾನೇ ಬಾಳ ಮಂದಿ ಅದಾರಲ್ಲ ಅಲ್ಹೋಗಿ ರೊಕ್ಕ ಕೊಟ್ ಸನ್ಮಾನಮಾಡಿಸ್ಕೊಂಬರ್ರಿ ಅಂದ್ರಿಲ್ಲೋ ಅಂದೆ. ಅದ್ನೇನ ಮಾಡೋರು ಬಿಡ್ರಿ ಸರಾ ಲಗೂ ಲಗೂ ಸಂತಿ ಮಾಡ್ಕೊಂಡ ಹೋಗೂಣು ನಡೀರಿ ಅಂತ ಅವಸರಮಾಡಿದ್ರು.ನೂರಿನ್ನೂರು ಕೊಟ್ಟೋರಿಗ್ ಗುಲಾಬಿಹೂ, ಐನೂರು ಕೊಟ್ಟೋರಿಗೆ ಮಾಲಿ, ಸಾವ್ರದ ಮ್ಯಾಲ ಕೊಟ್ಟೋರಿಗೆ ಶಾಲಾಕಿ ಸನ್ಮಾನ ಮಾಡಾಕ ಎಲ್ಲಾ ತೊಗೊಂಡು ಮನಿಕಡೆ ಹೊಂಟ್ವಿ.
*************
ಲೇ ವಿನ್ಯಾ ಮೈಕಲ್ ಜಾಕ್ಸನ್ ಸತ್ತೋಗಿ ಬಾಳ ದಿನಾ ಆತಲಾ ಇಲ್ಯಾಂಗ ಬಂದ್ರು ಅಂದೆ. ಸರಾ ಅವಾ ಸಿದ್ಯಾ ರೀ. ಡಾನ್ಸಿಗ್ ರಡಿ ಆಗಿ ಊರಾಗ ಅಂವಂದ್ ಅರವಿ ತೋರ್ಸಕೋಂತ ಹರಗ್ಯಾಡಾಕ ಹೊಂಟಾನ ಅಂದ ವಿನ್ಯಾ. ಅಲಲೇ ಪ್ರೋಗ್ರಾಂ ಇರೂದು ಸಂಜೀಮುಂದಲ ಇಟ್ ಲಗೂ ರಡಿ ಆಗ್ಯಾನಾ ಅಂದೆ. ಸರಾ ಕಾವೇರಿ ನಿನ್ನಿ ರಾತ್ರಿನೇ ಭಾರತಾಂಬೆ ಡ್ರೆಸ್ ಹಾಕ್ಕೊಂಡ್ ರಡಿಯಾಗಿ ಮಕ್ಕೊಂಡಿದ್ಲಂತ್ರಿ. ಈಗ ನೋಡಿದ್ರ ಸಿಟ್ಟಿಗ್ ಬಂದಿರೋ ಚಾಮುಂಡಿಗತೆ ಕಾಣಾಕತ್ತಾಳ್ರಿ ಅಂದ. ಇನ್ನ ಸಂಜೀಮಟ ಹಿಂಗ ಇದ್ರ ಯಾರ್ಯಾರ್ ಹೆಂಗೆಂಗ್ ಕಾಣ್ತಾರೋ. . . ದೇವರೇ ನೀ ಇದ್ರ ನಮ್ನೂ ಕಾಪಾಡಪಾ.. ಅಂತ ಮನಸಿನೊಳಗಾ ಬೇಡ್ಕೊಂಡೆ.
ಎಲ್ರೂ ನಿಮ್ ನಿಮ್ ಮನಿಗುಳಾಗ ಸಂಜೀಕ ಕಾರ್ಯಕ್ರಮ ನೋಡಾಕ ಬರ್ರಿ ಅಂತ ಹೇಳಬರ್ಯಪಾ. ಮಾಡೂದ ಫಸ್ಟ್ ಟೈಮ್ ಮತ್ ನಂಗ್ಹೇಳಲಿಲ್ಲ ನಿಂಗ್ಹೇಳಲಿಲ್ಲ ಅಂತ ಜಗಳ ತಗದ್ ಇದಾ ಲಾಸ್ಟ್ ಟೈಮ್ ಮಾಡಿಗಿಡ್ಯಾರು ಅಂದೆ ಹುಡ್ರಿಗೆ. ಮನಿಗ್ಹೋಗಾಕ ಸಿಕ್ಕಿದ್ದ ಛಾನ್ಸು ಅಂತ ಪೇರಿ ಕಿತ್ರು.
ಹಂಗೂ ಹಿಂಗೂ ಹೆಂಗೆಂಗೋ ನಮಗ್ ಹರದಷ್ಟ್ ತಯಾರಿಮಾಡ್ಕೊಂಡ್ವಿ. ಆಜುಬಾಜೂ ಸಾಲಿಗೋಳ ಮಾಸ್ತಾರಗೋಳಿಗೂ ಬರಾಕ ಹೇಳಿದ್ವಿ. ಯಾವುದಕ್ಕೂ ಮಾಸ್ತಾರ್ ಮಂದಿ ಸ್ವಲ್ಪ ಹೆಚ್ಚಿರ್ಲಿ ಕಷ್ಟದಾಗ ಸಹಾಯಕ್ಕಾದ್ರೂ ಆಕ್ಕಾರ. ಮದ್ಲಾ ಈ ಊರಾಗಿರೋ ಗಂಡಸ್ರ ಸಂಕಿ ಸಂಜಿ ಆಗ್ತಿದ್ದಂಗ ಡಬಲ್ ಆಗಿರ್ತದ. ಒಬ್ಬೊಬ್ಬರೇ ಇದ್ದೋರು ಔಷದ ತಗೊಂಡ್ ಕೂಡ್ಲೆ ಇಬ್ಬಿಬ್ರ ಆಗಿರ್ತಾರ. ಇರ್ಲಿ ಅದೂ ಒಳ್ಳೇದ ಬಿಡ್ರಿ. ನಾಕ್ ಮಂದಿ ಇರೋ ನಾವು ಅವರಿಗೆ ಡಬಲ್ ಕಾಣ್ತೀವಲಾ ಜರಾ ದೂರ ಇರ್ಬೋದು ಅನ್ಕೊಂಡು ಸಮಾಧಾನ ಮಾಂಡ್ಕೊಂಡ್ನಿ. 
ಸಂಜಿಯಾಗ್ತಿದ್ದಂಗ ಊರಾಗಿರೋ ಹುಡುಗ್ರು ಹುಪ್ಪಡಿ ಸಾಲಿ ಅಂಗಳದಾಗ ಸೇರಿದ್ರು. ಗಂಡಸರೆಲ್ಲ ರಸ್ತಾ ಅಳತಿ ಮಾಡೋರಗತೆ ಆ ತುದಿಯಿಂದ ಈ ತುದಿಗಂಟ ಹೆಜ್ಜಿ ಹಾಕ್ಕೊಂಡ್ ಬರ್ತಿರೋದ ನೋಡಿ ಯಾಕೋ ಎದಿ ರವರವ ಅನ್ನಾಕತ್ತಿ. ಅವರ್ ಬಂದ್ ವರವರ ಅನ್ನೋದಕ್ಕ ಮೊದ್ಲ ಪ್ರೋಗ್ರಾಂ ಚಾಲೂ ಮಾಡೋದ ಛಲೋ ಅಂತ ಬಡಬಡ ವೇದಿಕಿಗೆ ಹತ್ತಿ, ದುಡ್ ಕೊಟ್ಟೋರನ್ನ, ಸ್ಟೇಜಿನ ಮ್ಯಾಲೆ ಮಾಲಿ ಹಾಕಿದಾಗ ಕೊಡೋರನ್ನ ಸೇರ್ಸಿ ಕರದ್ ಕುರ್ಚಿಗಳನ್ನ ತುಂಬಿಸಾಕತ್ವಿ. ತಮ್ಮ ಕುರ್ಚಿಗೆ ಯಾರೋ ಮಂತ್ರಿಸಿ ನಿಂಬಿಕಾಯಿ ಕಟ್ಯಾರಂತ ಕುರ್ಚಿನ ಪಂಚಾಯಿತಿಂದ ಹೊರಾಗ್ ಒಗದ್ ನೆಲದ ಮ್ಯಾಲಾ ಕುಂಡ್ರೋ ಪಂಚಾಯಿತಿ ಮೆಂಬರನ್ನ, ನಮ್ ಕೈಯಾಗ ಕಲೀತಿದ್ದಾಗ ಸಿಕ್ಕಂಗ್ ಬಡಸ್ಕೋಂಡ್ ಸಾಲಿ ಬಿಟ್ ಕಾವಿ ಹಾಕ್ಕೊಂಡ್ಈಗ ಎಲ್ರನ್ನೂ ತನ್ನ ಕಾಲಿಗ್ ಬೀಳಂಗ್ ಮಾಡ್ಕೊಂಡಿರೋ ನಮ್ ಹಳೇ ವಿದ್ಯಾರ್ಥಿ ಈಗಿನ ದೊಡ್ ಸ್ವಾಮೀಜಿಯನ್ನ ದಿವ್ಯ ಸಾನಿಧ್ಯವಹಿಸಾಕ ಬೇಡ್ಕೊಂಡೂ ಆತು. ಎಲ್ರೂ ಹ್ಯಾವೀಲೆ ನಾಮುಂದು ತಾಮುಂದು ಅಂತ ಸ್ಟೇಜಿನ ಮೊದಲನೇ ಸಾಲಿನ ಕುರ್ಚಿಗಳಲಿ ಕುಂಡ್ರಾಕತ್ರು. 
ಹೆಂಗೋ ಉದ್ಘಾಟನೆ ಮುಗೀತು ಇನ್ನೇನ್ ಡಾನ್ಸ್ ಚಾಲೂ ಮಾಡ್ಬೇಕು. ಬಾಜು ಸಾಲಿ ಮಾಸ್ತರ ಮೆಳವಂಕಿ ಸರ್ ಮತ್ ನಾ ಹಾಡಾ ಹಚ್ಚಾಕ ಸೌಂಡಿನೋರ ಹತ್ರ ಕುಂತ್ವಿ. ಎರಡ್ಮೂರು ಡಾನಸ್ ಆಗಿರ್ಬೇಕು, ಮಾಂತ್ಯಗೋಳ ಅಪ್ಪ ಸ್ಟೇಜ್ ಹತ್ತಾಕಂತ ಬರ್ತಿದ್ದ. ಪತ್ತಾರ ಸರಾ ಓಡ್ರಿ ಅವನ್ ಸೈಡಿಗ್ ನಿಲ್ಸ್ ಹೋಗ್ರಿ ಅಂತ ಪುಸಲಾಯಿಸಿದೆ. ಅವರು ಹೋಗಿ ಯಾಕಪಾ ಸ್ಟೇಜಿಗೆ ಹೊಂಟೀರಿ ಅಂತ ಕೇಳಿದ್ರು. ನಾ ಒಂದ ಡಾನ್ಸ್ ಮಾಡಾಂವ್ರಿ ಅಂದ ಮಾಂತ್ಯಗೋಳ ಅಪ್ಪ. ಒಂದ್ಸೊಲ್ಪೊತ್ ತಡೀರಿ ಮಾಡೋಂಕ್ರಿ ಅಂತ ಸಮಾಧಾನ ಮಾಡಿದ್ರು. ಇನ್ನ ‘ನೇಗಿಲು ಹಿಡಿದು ಹೊಲದೊಳು ದುಡಿವ ಯೋಗಿಯ ನೋಡಲ್ಲಿ’ ಅನ್ನೋ ಹಾಡು ಹಚ್ಚಬೇಕಾಗಿತ್ತು. ಮೈಕಲ್ ಜಾಕ್ಸನ್ಗತೆ ಡ್ರೆಸ್ ಮಾಡ್ಕೊಂಡ್ ಕರಿ ಚಸ್ಮಾ ಹಾಕ್ಕೊಂಡಿದ್ ಸಿದ್ಯಾ ಬಂದ್ ನಿಂತ. ಲೇ ಮಗನ ಯಾವ ಹಾಡಿಗೈತಲೇ ನಿನ್ ಡಾನ್ಸ್ ಅಂತ ಕೇಳೀನಿ ಗಾಬರಿಯಾಗಿ. ಸರಾ ನೇಗಿಲಯೋಗಿ ಹಾಡ್ರಿ ಅಂದ. ರೈತನಗತೆ ಅರವಿ ಹಾಕ್ಕೊಂಡ್ ಬರೋದ್ ಬಿಟ್ ಇದೇನ್ಲೇ ನಿನ್ನ ಅವತಾರ ಅಂತ ದಿಗಿಲಾಗಿ ಸಿಟ್ಟೀಲೇ ದಬಾಸಿದ್ನಿ. ಸರಾ ನಾ ಮುಂಜಾನಿಂದ ರಡಿ ಆಗೀನ್ರಿ ಹಾಡಾ ಹಚ್ರಿ ಲಗೂ ಅಂತ ಚಸ್ಮಾ ಸರಿಮಾಡ್ಕೊಂಡ. ಇನ್ನ ಕಲ್ಲು ಬೀಳೋದು ಗ್ಯಾಂರಂಟಿಯಾತು. ಆದ್ರೂ ಅನಿವಾರ್ಯ ಇತ್ತು. ‘ಲೇ ಹಾಡಾ ಹಚ್ರೋ’ ಅಂತ ಮಂದಿ ಒದ್ರಾಡಾಕತ್ರು. ಮಾಸ್ತಾರಗೋಳು ಹಾಡಾ ಹಚ್ಚಾತ್ತಾರ ಅಂಬೋದು ಅವರಿಗಾರ ಏನ್ ಗೊತ್ತು. 
ಚಿಕನಿ ಚಮೇಲಿ ಹಾಡಿಗೆ ಚನ್ಯಾ ಹೋಗಿನಿಂತ. ಲೇಡಿ ಡಾನ್ಸಿಗೆ ಹುಡುಗ! ಮೆಳವಂಕಿ ಸರಾ ನಾ ಒಂದಕ್ಹೋಗಿ ಬರ್ತೀನ್ರಿ ಅಂತ ಹೇಳಿ ಹತ್ತು ನಿಮಿಷ ಸ್ಟೇಜಿನ ಹಿಂದ್ ಹೋಗಿ ನಿಂತ್ ಬಿಟ್ನಿ.ಆ ಹಾಡ್ ಮುಗದ್ ಐದು ನಿಮಿಷ ಆದಮ್ಯಾಕ ಸವಕಾಶ ಬಂದ್ ಕುಂತ್ನಿ. ಮುಂದಿಂದು ಜೈ ಹೋ ಹಾಡಿತ್ತು. ವಿಟ್ಯಾ, ಮಂಜಾ, ನಾಗ್ಯಾ ಮತ್ತ್ ಮೈಬು ಸ್ಟೇಜಿಗ್ ಬಂದ್ ಸ್ಟೈಲಾಗಿ ಮಂದಿಕಡೆ ಬೆನ್ನುಮಾಡಿ ನಿಂತ್ರು. ಹಾಡಾ ಚಾಲೂ ಆತು. ಮೆಳವಂಕಿ ಮಾಸ್ತಾರ ಸರಾ ಇವರದು ಹಾಡು ಬ್ಯಾರೇ ಇರ್ಬೇಕ್ ನೋಡ್ರಿ ಅಂದ್ರು. ಯಾಕ್ರೀ ಸರ್ ಅಂತ ಕೇಳ್ದೆ. ಜೈಹೋ ಹಾಡಿಗೆ ಜಡ್ಡಿನಾಕ ಪಂಪನಾಕ ಅಂತ ಹಲಗಿ ಬಡ್ದಾಗ ಕುಣದಂಗ ಕುಣ್ಯಾತ್ತಾರಲಾ ಅಂದ್ರು. ಈ ಮಕ್ಳಿಗೆ ‘ಸಾಲ್ಯಾಗ ಟೀಚರ್ ಯಾರೂ ಇಲ್ರಪಾ, ಎಲ್ಲಾ ಸರ್ಗಳೇ ಅದೀವಿ. ಡಾನ್ಸ್ ಕಲಸಾಕ ನಮಗೂ ಪಕ್ಕಾ ಬರೂದಿಲ್ಲ. ನೀವೇ ಕಲ್ಕೊಳ್ರಿ’ ಅಂದಿದ್ನಿ. ಏಕಲವ್ಯನ ಮೀರಿಸೋರಂಗ ಹಿಂಗ್ ಕಲ್ತಾರ ನೋಡ್ರಿ ಸರ್ ಅಂದೆ. ಬಗೆಹರೀತು ಬಿಡ್ರಿ ಅಂತ ಅನ್ನಾಕತ್ರು ಮೆಳವಂಕಿ ಸರ್. 
ಜನಾ ನೋಡಿದ್ರ ಕ್ಯಾಕಿ ಹೊಡ್ದು ಎಂಜಾಯ್ ಮಾಡಾಕತ್ತಾರ. ರಾತ್ರಿ ಹನ್ನೆಲ್ಡಾದ್ರೂ ಒಬ್ರೂ ಹೋಗಾಕವಲ್ರು. ನಾವೇನ್ ಕಡಮಿ ಅಂತ ಒಂದಾದ ಮ್ಯಾಲೊಂದ ಹಾಡಾ ಹಚ್ಚೇಹಚ್ಚೀವಿ. ಮಕ್ಕಳು ಕುಣದೇ ಕುಣದ್ವು. ಲಾಸ್ಟಿಗ್ ನಮಗಾ ಸಾಕಾಗಿ ‘ಸರಾ ಇನ್ನ ಕೊನೇ ತಯಾರಿ’ ಅಂತ ಒದರ್ರಿ ಅಂದ್ರು ನಮ್ ಸರ್. ಏ ತಯಾರಿ ಎಲ್ಲೈತ್ರಿ, ಏನಿದ್ರೂ ಡೈರೆಕ್ಟ್ ಶೋ ಮಾಡೋ ನಟರಾಜರು ನಮ್ ಮಕ್ಳು ಅಂದೆ. ನಿದ್ದಿ ಬರಾತೈತಿ ಸಾಕ್ ನಿಲ್ಲಸ್ರಿ ಹೋಗೂಣು ಅಂತ ಕಾಡಾಕತ್ರು. ಸರಿ ಇದೇ ಲಾಸ್ಟ್ ಪ್ರೋಗ್ರಾಂ ಅಂತ ಮೈಕಿನ್ಯಾಗ ಒದರಿ ಕೊನೆಗೂ ಕಾರ್ಯಕ್ರಮ ಮುಗಿಸಿದ್ವಿ. ಹಂ ಅಂದಂಗ ಆಯೇರಿ(ಕಾರ್ಯಕ್ರಮ ಮೆಚ್ಚಿ ದುಡ್ ಕೊಡೋದು) ಮಾಡೋರದೇ ಒಂದ್ ಕತಿ ಆಗ್ತದ ಅದನ್ ಆಮ್ಯಾಕ ಹೇಳ್ತೀನಂತ. ಸರೀನಾ... . . 
ಸೂರ್ಯಕಾಂತ ಬಳ್ಳಾರಿ
ಮೊ:9902865762

ಮಂಗಳವಾರ, ಮಾರ್ಚ್ 10, 2015

ಆಹಾರ ನಾಟಕ ಪ್ರದರ್ಶನ








ಎಸ್.ಬಿ.ಪಾಟೀಲ್
ವಿ.ಜಿ.ಸೂಡಿಮಠ
ಜಗದೀಶ್.ಎಸ್.ಬಿ

ಸೋಮವಾರ, ಮಾರ್ಚ್ 9, 2015

ಆಹ್ವಾನ


ಗುರುವಾರ, ಮಾರ್ಚ್ 5, 2015

ವಿದ್ಯಾರ್ಥಿಗಳ ಚಿತ್ರಗಳು

ಚನ್ನಬಸವ ನೀಲಗುಂದ

ರತ್ನಕ್ಕ ಹೊನ್ನರು ೮ನೆ

ರತ್ನಕ್ಕ ಹೊನ್ನರು, ೮ನೆ

ಶನಿವಾರ, ಫೆಬ್ರವರಿ 28, 2015

ಬಸವಣ್ಣನು ಚನ್ನಬಸವನ ಪೆನ್ಸಿಲ್, ಸ್ಕೆಚ್ ನಿಂದ

ವಿದ್ಯಾರ್ಥಿ ಚನ್ನಬಸವ ನೀಲಗುಂದ, ೯ ನೆ ತರಗತಿ

ಬುಧವಾರ, ಫೆಬ್ರವರಿ 25, 2015

ಪಠ್ಯ ಆಧಾರಿತ ನಾಟಕದ ಬ್ರೋಷರ್ ಗಾಗಿ ಚಿತ್ರಗಳು.

ಶಂಕರ ಮಿಟ್ಟಲಕೋಡ

ಮಂಗಳವಾರ, ಫೆಬ್ರವರಿ 24, 2015

ಪ್ರಾಣ ಉಳಿಸಿ ಅಭಿನಂದಕ್ಕೆ ಅರ್ಹರಾದ ಆನಂದಪ್ಪ ಕುರಿ

       ಮೊನ್ನೆಯ ದಿನ ಶಾಲೆಯ ಕಳವು ಪ್ರಕರಣದಿಂದ ಇಡೀ ಶಾಲಾ ಸಿಬ್ಬಂದಿ ವರ್ಗದಲ್ಲಿ ಅತ್ಯಂತ ಆತಂಕ ಹಾಗೂ ದುಃಖ ಮಡುಗಟ್ಟಿತ್ತು. kscst ರಾಜ್ಯ ಕಛೇರಿಯಿಂದ ನೀಡಲ್ಪಟ್ಟ ಮಕ್ಕಳ ಕಲಿಕೆಗಾಗಿ ೮,೯ ಹಾಗೂ ೧೦ ನೆ ತರಗತಿಯ ದೃಶ್ಯ ಪಾಠಗಳನ್ನು ಚಿಕ್ಕ ಲ್ಯಾಪ್ ಟಾಪ್ ನಲ್ಲಿ ತುಂಬಿ ನೀಡಲಾಗಿತ್ತು. ಅದು ವಿದ್ಯಾರ್ಥಿಗಳಿಗೆ ಬಿಟ್ಟರೆ ಮತ್ತಾರಿಗೂ ಉಪಯೋಗವಿಲ್ಲ. ಅಲ್ಲದೇ ಅದು ನಮ್ಮ virtual lab ಲ್ಲಿ ಮಾತ್ರ ಬಳಕೆಗೆ ಬರುವಂತೆ ಮಾಡಿದ್ದು, ಅದು ಎಲ್ಲಿಯು ಉಪಯೋಗಕ್ಕೆ ಬರುವುದೇ ಇಲ್ಲ. ಅಷ್ಟೇ ಅಲ್ಲದೇ LED ಟಿ.ವಿ, ಬ್ಯಾಟರಿ, ಇನ್ ವೇಟರ್ ಹಾಗೂ ಚರ್ಜಾರ್ ಗಳನ್ನು ಶಾಲೆಯ ಬೀಗಗಳನ್ನು ಮುರಿದು ಕದ್ದು ಒಯ್ದಿದ್ದಾರೆ. ಮಕ್ಕಳ ಅಭ್ಯಾಸಕ್ಕೆ ಪೂರಕವಾದವುಗಳನ್ನೇ ತೆಗೆದುಕೊಂಡು ಹೋದಾಗ ಅದರಿಂದ ತಮಗೇನು ಲಾಭ...? ಮಕ್ಕಳ ಅಭ್ಯಾಸಕ್ಕೂ ಹಾನಿ ಮಾಡುವ ಇಂಥಹ ನಮ್ಮ ನಡುವಿನವರಿಗೆ ಏನೆಂದು ಹೇಳಬೇಕು.

         ಆ ನೋವಿನಿಂದ ಹೊರ ಬರಲು ಆಗದೇ ನಮ್ಮ ಎಲ್ಲ ಶಿಕ್ಷಕ ವೃಂದ ಸಂಕಟಪಡುತ್ತಿದೆ. ಅದೇ ನಿನ್ನೆಯ ದಿನ ನಮ್ಮ ಶಾಲೆಯ ಆನಂದಪ್ಪ ಕುರಿಯವರು ಒಂದು ಚಿಕ್ಕ ಮಗುವಿನ ಪ್ರಾಣ ಉಳಿಸಿ ಅಭಿನಂದಕ್ಕೆ ಅರ್ಹರಾಗಿದ್ದರೆ. ಟಾಟಾ ಎ.ಸಿ ಯಲ್ಲಿ ಗಜೇಂದ್ರಗಡದಿಂದ ಶಾಲೆಗೆ ಬರುವಾಗ ಹಿರೇಗೊಣ್ಣಗರದ ಪ್ರಾಥಮಿಕ ಶಾಲೆಯ ಬಳಿ ಇರುವ ಹೊಲದಲ್ಲಿ ನಡೆದ ಘಟನೆ. ರಸ್ತೆಯ ಪಕ್ಕದಲ್ಲಿಯೇ ಹೊಲಕ್ಕಾಗಿ ನೀರು ನಿಲ್ಲಲು ನಿರ್ಮಿಸಿದ ತೊಟ್ಟಿ (ದೋಣಿ) ಯಲ್ಲಿ ಇರುವ ಬೋರ್ ಅದು. ೨ ರಿಂದ ೩ ಅಡಿ ಆಳವಿರುವ ತೊಟ್ಟಿಯಲ್ಲಿ ಕರೆಂಟ್ ಇದ್ದಾಗ ಹೊಲದವರು ಬೋರ್ ನ್ನು ಚಾಲೂ ಮಾಡೋರು. ಅಲ್ಲಿಯೇ ಪಕ್ಕದಲ್ಲಿರುವ ಪ್ರಾಥಮಿಕ ಶಾಲ ಮಕ್ಕಳು ಇತ್ತ ಹಾಯುವುದು ಕಡಿಮೆ.  ಶಾಲೆಯ ಮಕ್ಕಳಿಗೆ ಈ ನೀರು ಅಂಥಹ ಅಪಾಯದ ಸ್ಥಿತಿಯನ್ನೇನು ತಂದು ಒಡ್ಡುವಂಥದ್ದಲ್ಲ. ಆದರೆ ನಮ್ಮ ಪಾಲಕರ ಬೇಜಾವಬ್ದಾರಿಯಿಂದಾಗಿ ಕೆಲವು ಅನಾಹುತಗಳು ಜರುಗಿದ್ದವನ್ನು ಕಂಡಿದ್ದೇವೆ. ಅಂಥಹ ಕ್ಷಣ ಇದಾಗದಿದ್ದದೇ ಒಳ್ಳೆಯದು.

           ನಮ್ಮ ಶಾಲೆಯ ಧ್ವಿತೀಯ ದರ್ಜೆ ಸಹಾಯಕರಾದ ಆನಂದಪ್ಪ ಕುರಿಯವರು ಎಂದಿನಂತೆ ಶಾಲೆಗೆ ಹತ್ತಿರದ ಗಜೇಂದ್ರಗಡದಿಂದ ಬಿಸಿಯೂಟಕ್ಕಾಗಿ ತರಕಾರಿಯನ್ನು ತರುವುದು ದಿನನಿತ್ಯದ ಪದ್ಧತಿ. ಹಾಗೇ ಮೊನ್ನೆ ಟಾಟಾ ಎಸಿ ಯಲ್ಲಿ ಬರುವಾಗ ಒಂದು ೭-೮ ವರ್ಷದ ಮಗು  ಈ ತೊಟ್ಟಿಯ ಕಡೇ ಚಿಕ್ಕ ಬಿಂದಿಗೆಯನ್ನು ಹಿಡಿದು ನೀರು ತರಲು ಬಂದಿದೆ. ಆ ಮಗುವಿನ ಹಿಂದೆ ೨-೩ ವರ್ಷದ ಮಗು ಆಡುತ್ತಾ ಹಾಗೇ ಬಂದಿದೆ. ಬಿಂದಿಗೆಯನ್ನು ನೀರು ಬರುತ್ತಿರುವ ಕೊಳವೆ ಬಳಿ ಈ ಮಗು ತೆಗೆದುಕೊಂಡು ಹೋಗಿ ಬಿಂದಿಗೆ ತುಂಬಿಸುವ ಪ್ರಯತ್ನದಲ್ಲಿದ್ದಾಗ ಚಿಕ್ಕ ಮಗು ನೀರಿನೊಳಗೆ ಹಾಗೇ ಸಾಗುತ್ತಾ ಬಂದು ಬಿದ್ದು ಬಿಟ್ಟಿದೆ. ಇದನ್ನು ಕಂಡಾ ಮಗು ಬಿಂದಿಗೆ ಬಿಟ್ಟು ಏನು ಮಾಡಬೇಕು ಎಂದು ತಿಳಿಯದೇ ಜೋರಾಗಿ ಕಿರುಚಲು ಪ್ರಾರಂಭಿಸಿದೆ. ಸುತ್ತಾ ಮುತ್ತಾ ಯಾರು ಸ್ಥಳೀಯರು ಇಲ್ಲ. ಶಾಲೆ ತರಗತಿಗಳು ಪ್ರಾರಂಭವಾಗಿದ್ದರಿಂದ ಶಿಕ್ಷಕರು ಹಾಗೂ ವಿದ್ಯಾರ್ಹಿಗಳು ಕೋಣೆಯೊಳಗೆ ಸೇರಿದ್ದಾರೆ. ಅದೇ ಸಮಯಕ್ಕೆ ಗೊಣ್ಣಗರದ ಕಡೇಯಿಂದ ಬಾದಿಮನಾಳ ಕ್ರಾಸ್ ಕಡೇ ಸಾಗುತ್ತಿದ್ದ, ಗಾಡಿಯಲ್ಲಿ ನಮ್ಮ ಆನಂದಪ್ಪ ಕುರಿಯವರ ಗಮನ ಈ ಮಕ್ಕಳ ಮೇಲೆ ಬಿದ್ದಿದ್ದು. ತಕ್ಷಣವೇ ಗಾಡಿ ನಿಲ್ಲಿಸಿ ಓಡಿದ್ದಾರೆ. ಮಗುವಿ ಕೇವಲ ಕೈ  ಮಾತ್ರ  ಕಾಣತ್ತಿದ್ದು ತಕ್ಷಣವೇ ಆ ಮ್ಗುವನ್ನು ನೀರಿನಿಂದ ಎತ್ತಿ ರಕ್ಷಣೆ ಮಾಡಿದ್ದಾರೆ. ಇನ್ನೋಂದು ಗಳಿಗೆ ತಡವಾಗಿದ್ದರೆ ಇಡೀ ಕುಟುಂಬ ಊರು ದುಃಖದ ಮಡುವಿನಲ್ಲಿರಬೇಕಾಗಿತ್ತು. ಆದರೆ ಸಮಯ ಒಳ್ಳೆಯದಾಗಿದ್ದರಿಂದ ಆ ಮಗು ಉಳಿಯಿತು.

          ಇಂಥಹ ಒಳ್ಳೆಯ ಕಾರ್ಯ ಮಾಡಿದ ನಮ್ಮ ಆನಂದಪ್ಪ ಕುರಿಯವರಿಗೆ ನಾವು ನಮ್ಮ ಶಾಲೆ ಹಾಗೂ ಎಲ್ಲ ಶಿಕ್ಷಕ, ವಿದ್ಯಾರ್ಥಿಗಳಿಂದ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
ಆನಂದಪ್ಪ ಕುರಿ

ಶನಿವಾರ, ಫೆಬ್ರವರಿ 21, 2015

ಬಣ್ಣದ ತಗಡಿನ ತುತ್ತೂರಿ...

( ಶ್ರೀವತ್ಸ ಜೋಷಿ ಯವರು ತಮ್ಮ Facebook ನಲ್ಲಿ ಮೂಡಿಸಿದ್ದನ್ನು ಇಲ್ಲಿ ಹಂಚಿಕೊಂಡಿದ್ದೇವೆ. )



 ಜಿ.ಪಿ.ರಾಜರತ್ನಂ ಅವರ ಅತಿಪ್ರಖ್ಯಾತ ಪದ್ಯ "ಬಣ್ಣದ ತಗಡಿನ ತುತ್ತೂರಿ"!

ಇದು ಕೂಡ ನನಗೆ ’ಕಂದನ ಕಾವ್ಯ ಮಾಲೆ’ ಪುಸ್ತಕದಲ್ಲಿ ಸಿಕ್ಕಿತು. 1933ರಲ್ಲಿ ಮುದ್ರಿತವಾದ ಆ ದಿವ್ಯ ಅಕ್ಷರಗಳ ಡಿಜಿಟಲ್ ಪ್ರತಿಯನ್ನೇ ಇಲ್ಲಿ ಬಳಸಿದ್ದೇನೆ. ಆಮೇಲೆ ಬಹಳಷ್ಟು ಪಠ್ಯಪುಸ್ತಕಗಳಲ್ಲಿ, ಮತ್ತು ಬೊಳುವಾರರ ’ತಟ್ಟು ಚಪ್ಪಾಳೆ ಪುಟ್ಟ ಮಗು’ ಸಂಕಲನದಲ್ಲೂ ಈ ಪದ್ಯ ಸೇರಿಕೊಂಡಿದೆಯಾದರೂ, ಜಿ.ಪಿ.ರಾಜರತ್ನಂ ಅವರೇ ಸಂಪಾದಕರಾಗಿ ಪ್ರಕಟಿಸಿದ ಪುಸ್ತಕದಿಂದ ಆಯ್ದುಕೊಂಡಿದ್ದೇನೆ ಎಂಬ ಹೆಮ್ಮೆ 
smile emoticon
 ಅಲ್ಲದೇ, ಇದು ಜಿ.ಪಿ.ರಾಜರತ್ನಂ ಬರೆದ ಮೊತ್ತಮೊದಲ ಶಿಶುಗೀತೆಯೂ ಹೌದು.

’ಹಾಡು ಹುಟ್ಟಿದ ಸಮಯ’ ಅಂಕಣದಲ್ಲಿ ಕನ್ನಡ ಚಿತ್ರಗೀತೆಗಳ ಉಗಮದ ಬಗ್ಗೆ ಮಣಿಕಾಂತ್ ಅವರು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದಂತೆ ಈ ಪದ್ಯದ ಉಗಮದ ಕುರಿತು ವಿವರಿಸುವುದಾದರೆ ಹೀಗಿದೆ:

ರಾಜರತ್ನಂ ಅವರು 1932ರಲ್ಲಿ ಎಂ.ಎ ಪದವೀಧರರಾದರು. ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ತತ್‌ಕ್ಷಣ ಸಿಗಲಿಲ್ಲ. ಏತನ್ಮಧ್ಯೆ ಅವರ ತಂದೆಯವರ ಆರೋಗ್ಯ ಕೆಟ್ಟಿತು. ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅವರು ತರಗತಿಗಳಿಗೆ ಹೋಗದಿರಲಾಗಿ ರಾಜರತ್ನಂ ಅವರೇ ಬದಲಿಶಿಕ್ಷಕರಾಗಿ ಹೋದರು. ಆದರೆ ಅಲ್ಲಿ ಪಠ್ಯವಿಷಯವಾಗಿ ಮಕ್ಕಳಿಗೆ ಅರ್ಥವಾಗದಂಥ, ಕಬ್ಬಿಣದ ಕಡಲೆಯಂಥ ಪದ್ಯಗಳಿದ್ದುದನ್ನು ಕಂಡು ಮರುಗಿದರು. ‘ಎಂಟು ಗೇಣಿನ ದೇಹ, ರೋಮಗಳೆಂಟು ಕೋಟಿಯು, ಮೂಳೆ ಅರವತ್ತೆಂಟು...’ ಎನ್ನುವ ಹರಿಭಕ್ತಿಸಾರದ ಪದ್ಯ, Winning of the golden fleece ಗ್ರೀಕ್ ಪುರಾಣವನ್ನು ’ಕನಕೋರ್ಣಾರ್ಜುನ’ ಎಂದು ಅನುವಾದ ಮಾಡಿದ್ದು- ಇದನ್ನೆಲ್ಲ ಈ ಪುಟ್ಟ ಮಕ್ಕಳು ಹೇಗೆ ತಾನೆ ಸವಿಯಬಲ್ಲವು ಎಂದು ಅವರಿಗೆ ಬೇಸರವಾಯಿತು. ಅವತ್ತು ಸಂಜೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಸ್ನಾನಘಟ್ಟದಲ್ಲಿ ಕಾಲು ಚಾಚಿ ಕುಳಿತುಕೊಂಡಾಗಲೂ ರಾಜರತ್ನಂ ಅವರಿಗೆ ಒಂದೇ ಯೋಚನೆ- ಮಕ್ಕಳಿಗೆ ಇಷ್ಟವಾಗುವ ಹಾಗೆ ಏನಾದರು ಬರಿಯಬೇಕು ಎಂದು. ಅದೇ ಕ್ಷಣದಲ್ಲಿ ಅವರ ತಲೆಯಲ್ಲಿ ತುತ್ತೂರಿ ಧ್ವನಿಸಿತು! ಪದ್ಯ ಬರೆದೇಬಿಟ್ಟರು. ರಾಗ ಹಾಕಿದರು, ಇದನ್ನು ಕೇಳಿದರೆ ಮಕ್ಕಳು ಎಷ್ಟು ಸಂತೋಷ ಪಡಬಹುದೆಂಬ ಹುಮ್ಮಸ್ಸಿನಲ್ಲೇ ರಾತ್ರಿಯೆಲ್ಲ ಕಳೆದರು. ಮಾರನೇದಿನ ಶಾಲೆಯಲ್ಲಿ ಪಾಠ ಮುಗಿದ ಮೇಲೆ, ’ತುತ್ತೂರಿ’ಯನ್ನು ಕರಿಹಲಗೆಯ ಮೇಲೆ ಬರೆದರು. ಮಕ್ಕಳಿಂದ ಹಾಡಿಸಿದರು. ಮಕ್ಕಳ ಹಿಗ್ಗಿಗೆ ಪಾರವಿಲ್ಲ. ಆ ಕಂದಮ್ಮಗಳ ಮೊಗದಲ್ಲಿ ನಗು ಕಂಡ ರಾಜರತ್ನಂ ಅವರ ಖುಷಿಗೂ ಪಾರವಿಲ್ಲ!

ಹಾಗಂತ, "ಅರ್ಜೆಂಟಿಗೆ ಹಡೆದ ಕೂಸು" ಎಂಬಂಥ ರಚನೆಯೇನಲ್ಲ ಇದು. ಮಕ್ಕಳ ಪದ್ಯಕ್ಕೆ ಅತ್ಯಗತ್ಯವಾದ ಲಯಬದ್ಧತೆ ಇದರಲ್ಲಿದೆ. ಬಣ್ಣದ/ ತಗಡಿನ/ ತುತ್ತೂರಿ/... ಕಾಸಿಗೆ/ ಕೊಂಡನು/ ಕಸ್ತೂರಿ... - ಹೀಗೆ ಪ್ರತಿ ಪಂಕ್ತಿಯಲ್ಲಿ ಮೂರು ನಿಲುಗಡೆಗಳು, ಅನುಕ್ರಮವಾಗಿ ನಾಲ್ಕು, ನಾಲ್ಕು ಮತ್ತು ಐದು ಮಾತ್ರೆಗಳ ಮೂರು ಗಣಗಳು. ಲಾಲಲ/ಲಲಲಲ/ಲಾಲಾಲ... ಲಾಲಲ/ಲಾಲಲ/ಲಾಲಾಲ... ಎಂದು ಗುಣುಗುಣಿಸಿಕೊಳ್ಳುತ್ತಿರುವಾಗಲೇ ಕಂಠಪಾಠವಾಗುತ್ತದೆ. ಲಯವನ್ನು ಅದು ಎಲ್ಲಿಯೂ ಬಿಡುವುದಿಲ್ಲ. ಉದಾಹರಣೆಗೆ: ತುತ್ತೂರಿ ಮತ್ತು ಕಸ್ತೂರಿ - ಇವು ಐದು ಮಾತ್ರೆಗಳ ಪದಗಳು. ಆದರೆ ನಾಲ್ಕು ಮಾತ್ರೆಯ ಪದವಾಗಿ ಬಳಸಬೇಕಾದಲ್ಲೆಲ್ಲ ರಾಜರತ್ನಂ ಅವುಗಳನ್ನು ಮೊಟಕುಗೊಳಿಸುತ್ತಾರೆ. 'ತನಗೇ ತುತ್ತುರಿ ಇದೆಯೆಂದ' (ಗಮನಿಸಿ: ತುತ್ತೂರಿಯ ಬದಲು ತುತ್ತುರಿ); 'ಕಸ್ತುರಿ ನಡೆದನು ಬೀದಿಯಲಿ' (ಗಮನಿಸಿ: ಕಸ್ತೂರಿಯ ಬದಲು ಕಸ್ತುರಿ). ಪದ್ಯದ ಕೊನೆಯಲ್ಲಿ ನೀತಿಬೋಧೆಯಂತೂ ಇದ್ದೇಇದೆ. ಇನ್ನೇನು ಬೇಕು ಅತ್ಯಂತ ಜನಪ್ರಿಯ ಶಿಶುಗೀತೆಯಾಗಿ ಪ್ರಸಿದ್ಧಿ ಹೊಂದಲಿಕ್ಕೆ?

ರಾಜರತ್ನಂರವರ ಸಮಕಾಲೀನರಾಗಿದ್ದ ನಾ.ಕಸ್ತೂರಿ (’ಅನರ್ಥಕೋಶ’ದಿಂದ ಪ್ರಖ್ಯಾತ) ಅವರು ಒಮ್ಮೆ ರಾಜರತ್ನಂರನ್ನು ಕರೆದು, "ಲೋ, ರಾಜರತ್ನ, ಪದ್ಯ ಬರೆದು ನನಗೆ ಅವಮಾನ ಮಾಡಿದ್ದೀಯಲ್ಲೋ" ಎಂದು ತಮಾಷೆಗೆಂದೇ ತರಾಟೆಗೆ ತೆಗೆದುಕೊಂಡಿದ್ದರಂತೆ. ರಾಜರತ್ನಂ ಕಕ್ಕಾಬಿಕ್ಕಿಯಾಗಿ "ಇಲ್ಲವಲ್ಲ ಸಾರ್" ಎಂದರಂತೆ. ಅದಕ್ಕೆ ನಾ.ಕಸ್ತೂರಿಯವರು "ಯಾಕೋ ಇಲ್ಲ, ಬರೆದಿದ್ದೀಯ: ಬಣ್ಣದ ತಗಡಿನ ತುತ್ತೂರಿ. ಕಾಸಿಗೆ ಕೊಂಡನು ಕಸ್ತೂರಿ ಅಂತ ಬರೆದಿಲ್ವೇನಯ್ಯ? ಅಲ್ಲದೆ ಕೊನೇಲಿ 'ಜಂಬದ ಕೋಳಿಗೆ ಗೋಳಾಯ್ತು' ಅಂತ ಬೇರೆ ಹೇಳಿದೀಯ! ಹೇಳು, ನಾನು ಜಂಬದ ಕೋಳಿಯೇನೋ?" ಎಂದು ಕಿಚಾಯಿಸಿದರಂತೆ. ಅಂದರೆ, ಫೇಸ್‌ಬುಕ್‌ನಲ್ಲಿ tag ಮಾಡಿದ ಹಾಗೆ ರಾಜರತ್ನಂ ಪದ್ಯದಲ್ಲಿ ಟ್ಯಾಗ್ ಮಾಡಿದ್ದಾರೆ ಎಂದು ನಾ.ಕಸ್ತೂರಿಯವರ ತಕರಾರು 
smile emoticon
 ಆದರೆ ಅಂಥ ಸರಸ ಘಟನೆಗಳು ಆಗಿನ ಸಜ್ಜನರ ನಿರ್ಮಲತೆಯನ್ನೂ, ಸರಳತೆಯನ್ನೂ, ತಮ್ಮ ಸಮಕಾಲೀನರ ಪ್ರತಿಭೆ ಮತ್ತು ಯಶಸ್ಸನ್ನು ಸಂಭ್ರಮಿಸುವುದನ್ನೂ ತೋರಿಸುತ್ತವೆ.

ಕನ್ನಡ ಶಿಶುಸಾಹಿತ್ಯವನ್ನು ರಾಜರತ್ನಂ ಶ್ರೀಮಂತಗೊಳಿಸಿದರು. ಪ್ರಗತಿಶೀಲ ಮತ್ತು ನವ್ಯಸಾಹಿತ್ಯ ಸಂದರ್ಭದಲ್ಲಿ ಬಾಲಸಾಹಿತ್ಯ ಅಲಕ್ಷ್ಯಕ್ಕೆ ಒಳಗಾಗಿತ್ತು. ಮೊದಲನೆಯದಾಗಿ ಬಾಲಕ-ಬಾಲಕಿಯರು ಸಮಾಜದ ಭವಿಷ್ಯವನ್ನು ನಿರ್ಮಿಸುವವರು, ಅವರಲ್ಲಿ ಸಾಹಿತ್ಯಪ್ರೇಮ ಬೆಳೆಯದಿದ್ದರೆ ಅವರು ದೊಡ್ಡವರಾದ ಮೇಲೆ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟುವುದು ಕಷ್ಟ. ಎರಡನೆಯದಾಗಿ, ಸಾಹಿತ್ಯವು ಮಗುವಿನ ಬಾಲ್ಯಕ್ಕೆ ಬಾಹ್ಯಜಗತ್ತನ್ನೂ ಭಾಷೆಯ ಬಳಕೆಯನ್ನೂ ಏಕಕಾಲಕ್ಕೆ ಪರಿಚಯ ಮಾಡಿಕೊಡುವ ಒಂದು ವಿಶಿಷ್ಟ ಸಾಧನ. ಇದನ್ನು ಮನಗಂಡ ರಾಜರತ್ನಂರಂಥ ಸಾಹಿತಿಗಳು ಬಾಲಸಾಹಿತ್ಯದಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ರಾಜರತ್ನಂ ಅವರ ಮ್ಯಾಜಿಕ್ ಎಂದರೆ ಪರಿಚಿತ ಜಗತ್ತನ್ನೇ ಹೊಚ್ಚಹೊಸ ಜಗತ್ತನ್ನಾಗಿ- ಅಂದರೆ ಮಗು ಯಾರನ್ನಾದರೂ ಪ್ರಶ್ನಿಸಬಹುದಾದ ಅಥವಾ ಮಾತನಾಡಿಸಬಹುದಾದ ಜಗತ್ತನ್ನಾಗಿ- ಮಾರ್ಪಡಿಸುವುದು. ಮಗುವಿನ ಪದಸಂಪತ್ತಿಗೆ ಹೊಸ ಶಬ್ದಗಳನ್ನು ಸೇರಿಸುವುದು. ನಿತ್ಯಜೀವನದ ಮಾತುಕತೆಗೆ ಸಹಜವಾದ ಎಲ್ಲ ಬಗೆಯ ವಾಕ್ಯರಚನೆಗಳು ಪ್ರತ್ಯಕ್ಷವಾಗಿ ಮಗುವಿಗೆ ತನ್ನಿಂತಾನೇ ವಾಕ್ಯಗಳನ್ನು ಕಟ್ಟುವ ಶಕ್ತಿಯನ್ನು ಬೆಳೆಸುವುದು. ಕನ್ನಡ ಮಕ್ಕಳಿಗೆ ಕನ್ನಡ ಭಾಷೆಯ ಪದಸಂಪತ್ತು, ವಾಕ್ಯರಚನಾ ವಿಧಾನ, ಪ್ರಾಸಸಂಪತ್ತು, ನಾದಸಂಪತ್ತು ಇವೆಲ್ಲವನ್ನು ಖುಷಿಯಾಗಿ ಆಡುತ್ತಾ ಹಾಡುತ್ತಾ ಕಲಿಸುವ ಮಾರ್ಗವೆಂದರೆ ಅವರಿಗೆ ರಾಜರತ್ನಂರ ಶಿಶುಗೀತೆಗಳನ್ನು ಹೇಳಿಕೊಡುವುದು. ಮಕ್ಕಳು ಕನ್ನಡ ಭಾಷೆಯ ಸಂಪತ್ತನ್ನೂ ಸೊಗಸನ್ನೂ ಹೀರಿಕೊಳ್ಳುವಂತೆ ಮಾಡುವುದು.

ಶುಕ್ರವಾರ, ಫೆಬ್ರವರಿ 20, 2015

Hejjekunitha

ಗುರುವಾರ, ಫೆಬ್ರವರಿ 19, 2015

ಒಳ್ಳೆಯ ದಿನಗಳು ಬರಲಿ

ಇಂದು ತುಂಭಾನೇ ಹಿಂಸೆಯಾಗಿದೆ. ಶಾಲೆಯ ಆರು ಕೋಣೆಯ ಬೀಗಗಳನ್ನು ಮುರಿದು ಕಳ್ಳತನ ನಡೆದು ಹೋಗಿದೆ. ಪೋಲೀಸ್ ಜೀಪುಗಳು ಮಕ್ಕಳು ಓಡಾಡುವ ಮೈದಾನದಲ್ಲಿ ಬಂದು ನಿಲ್ಲುವಂತಾಗಿದೆ. ದಿನ ಪೂರ್ತಿ ಮಕ್ಕಳು ಶಿಕ್ಷಕರು ಹೊರಗಡೆ ಇರಬೇಕಾದ ಸ್ಥಿತಿ. ಮಕ್ಕಳಿಗಾಗಿ ನೀಡಿದ್ದ ಲ್ಯಾಪ್ ಟಾಪ್, ಎಲ್.ಇ.ಡಿ,ಬ್ಯಾಟರಿ, ಇನ್ ವೇಟರ್ ಗಳನ್ನು ಕದ್ದು ಒಯ್ಯಲಾಗಿದೆ.. ಶಾಲೆಯ ತುಂಬಾ ಪೋಲಿಸ್ ಜೀಪು, ಊರ ಜನ, ನಾಯಿ  ಶೋಧನೆಯ ಕಾರ್ಯ ಬಿರುಸಿನಿಂದ ನಡೆದಿದೆ. ಮಕ್ಕಳಿಗೆ - ಶಿಕ್ಷಕರಿಗೆ ಆದ ಸಂಕಟ, ಹಿಂಸೆ ಅಷ್ಟಿಷ್ಟಲ್ಲ. ಸರಣಿ ಪರೀಕ್ಷೆ  ನಡೆಯುತಲಿದ್ದು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಆದ ದಿನದ ನಷ್ಟ, ಈ ಕಳುವಾದ ಸಾಮಾನುಗಳ ಬಳಕೆ ಮಕ್ಕಳಿಗಾಗಿಯೇ ಇರಬೇಕಾದದ್ದು, ಅದು ಯಾರ ಹೊಟ್ಟೆಗಾಗಿ ಅಲ್ಲ. ಸಮಸ್ಯ ಬಗೆ ಹರಿದು ಒಳ್ಳೆಯ ದಿನಗಳು ಬರಲಿ. ಮಕ್ಕಳ ಭವಿಷ್ಯದ ಜೊತೆ ಆಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ.

ಬುಧವಾರ, ಫೆಬ್ರವರಿ 18, 2015

Tatavapada

ಶುಕ್ರವಾರ, ಫೆಬ್ರವರಿ 13, 2015

ಮೇಕಪ್ ಕ್ಲಾಸ್




















ಪ್ರಸದಾನ ತರಗತಿಯಲ್ಲಿ ಮಕ್ಕಳು. ಶಾಲೆಯ ಎಲ್ಲ ಶಿಕ್ಷಕರೊಟ್ಟಿಗೆ  ಛಾಯಗ್ರಹಣಕ್ಕೆ ಪೋಸ್ ನೀಡಿದ್ದು.