ಶನಿವಾರ, ಆಗಸ್ಟ್ 9, 2014

ಬಿಸಿಯೂಟ

            ಶಾಲಾ ತರಗತಿ ಕೋಣೆಗೆ ಸರ್ ಬಂದು ’ನಾಳೆಯಿಂದ ಬಿಸಿಯೂಟ ಇಲ್ಲ. ನೀವು ಬುತ್ತಿ ತರಬೇಕು ನೋಡಿ’ ಎಂದಾಕ್ಷಣ ಹಲವು ಮಕ್ಕಳ ಮುಖದಲ್ಲಿ ನಿರಾಸೆ ಸುಳಿದಾಡತೊಡಗಿತು. ಹಳ್ಳಿಯಲ್ಲಿ ಸಾಕಷ್ಟು ಸ್ಥಿತಿವಂತರಲ್ಲದ ಜನ, ಅವರ ಮಕ್ಕಳು ಶಾಲೆಗೆ ಹೋಗುವುದರಿಂದ ಒಂದೊಪ್ಪತ್ತಿನ ಊಟ ಹೊರಗಾಗುತ್ತಲ್ಲ ಎಂಬ ಆಲೋಚನೆಯಲ್ಲಿ ದುಡಿತದತ್ತ ಮನಸ್ಸು ಹರಿಸಿದ್ದಾರೆ. ಇಲ್ಲದೇ ಹೋಗಿದ್ದರೆ ಮಕ್ಕಳನ್ನು ದುಡಿಯಲಿಕ್ಕೆ ಕರೆದೊಯ್ಯುವ ಎಷ್ಟೋ ಪಾಲಕರು ನಮ್ಮ ಪ್ರತಿಯೊಂದ ಹಳ್ಳಿಯಲ್ಲಿ ಇದ್ದಾರೆ.  ಬಿಸಿಯೂಟ ಸರ್ಕಾರ ಮಕ್ಕಳಿಗಾಗಿ ನೀಡಿರುವ ಒಂದು ವಿಶೇಷ ಯೋಜನೆ ಎನ್ನಬಹುದು.
ಶಾಲೆಯಲ್ಲಿ ಇಂದು ಮಕ್ಕಳಿಗಾಗಿ ವಿದ್ಯಾಭ್ಯಾಸ ಮಾತ್ರವಲ್ಲ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್, ವಿದ್ಯಾರ್ಥಿ ವೇತನ, ಹಾಲು, ಮಾತ್ರೆ ಹೀಗೆ ಹಲವಾರು ಯೋಜನೆಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಕೈಗೊಂಡಿದ್ದಾರೆ. ಬಿಸಿಯೂಟದಿಂದ ನಗರ ಪ್ರದೇಶಗಳ ಶಾಲೆಗಳಲ್ಲಿ ಎಷ್ಟು ಅನುಕೂಲಗಳಾಗಿದೆ ಎನ್ನುವುದನ್ನು ನಾನು ಪಕ್ಕಕ್ಕೆ ಇಟ್ಟು ನೋಡುತ್ತಾ ಗ್ರಾಮೀಣ ಪ್ರದೇಶಗಳಲ್ಲಿ ಆಗಿರುವ ಅನುಕೂಲಗಳನ್ನು ನಾವಿಲ್ಲಿ ಪ್ರಾಧಾನವಾಗಿ ಕಾಣಬೇಕಾಗಿದೆ. 

 ಕಳೆದ ಒಂದು ವಾರದಿಂದ ನಮ್ಮ ಪ್ರೌಢಶಾಲೆಯಲ್ಲಿ ಮಾತ್ರವಲ್ಲ ತಾಲೂಕು ಹಾಗೂ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಬಿಸಿಯೂಟ ಸ್ಥಗಿತಗೊಂಡಿತ್ತು. ಕಾರಣ ಈ ವರ್ಷದ ದಾಸ್ತನು ಸರಬರಾಜು ಮಾಡುವ ಲಾರಿಗಳ ಟೆಂಡರ್ ಆಗದೇ ಇರುವುದು. ಸರಕು ಇದೆ ಆದರೆ ಪೂರೈಕೆಯಲ್ಲಿ ಆದ ವ್ಯತ್ಯಾಸದಿಂದ ಇಡೀ ಮಕ್ಕಳ ಮುಖದಲ್ಲಿ ಚಿಂತೆಯ ಛಾಯೆ ಮೂಡಿಸುವುದರ ಜೊತೆಗೆ ಗೈರು ಹಾಜರಿಗೂ ಕಾರಣೀಕರ್ತರಾದರು. ತಂದೆ ತಾಯಿ ದುಡಿಯಲಿಕ್ಕೆ ಗೋವಾ, ಮಂಗಳೂರು, ಉಡುಪಿ, ಬೆಂಗಳೂರಿನಂಥಹ ಮಹಾನಗರಗಳಿಗೆ ಸಾಗಿ ಮಕ್ಕಳನ್ನು ಅವನ/ಳ ಚಿಕ್ಕಪ್ಪ, ಮಾವ ಅಥಾವ ಯಾರೋ ಸಂಬಂಧಿಗಳ ಮನೆಯಲ್ಲಿ ಬಿಟ್ಟು ಓದಿಕೊಂಡಿರಲಿ ಎಂದು ಸಾಗಿರುತ್ತಾರೆ. ಆದರೆ ಶಾಲೆಯಲ್ಲಿ ಊಟದ ಕೊರತೆಯಾಗಿ ನಾನು ಮನೆಗೆ ಹೋಗಿ ತಮ್ಮ ಪಾಲಕರಿಗೆ ಹೊರೆಯಾಗುವೇನಲ್ಲ ಎಂಬ ಆತಂಕ ಆ ಮಕ್ಕಳಲ್ಲಿ ಸುಳಿದಾಡುತ್ತಿರುತ್ತದೆ. ಒಂದು ಊಟ ಮಗುವಿನ ಮೇಲೆ ಬೀರುವ ಪರಿಣಾಮದ ಕುರಿತು ನಾವು ಯೋಚಿಸಬೇಕಾಗಿದೆ. ತಮ್ಮ ಸ್ಥಿತಿಯನ್ನು ಸರಿಪಡಿಸಿಕೊಳ್ಳಲಿಕ್ಕೆ ಮಕ್ಕಳು ಶಾಲೆಯನ್ನೇ ತಪ್ಪಿಸಿಕೊಳ್ಳುವ ನಿರ್ಧಾರ ಕೈಗೊಳ್ಳುತ್ತಾರೆ. ಆ ಒಂದು ಊಟ ಅವನ ಮೇಲೆ ಆಗುವ ಪರಿಣಾಮದ ಕುರಿತು ಸಹಜವಾಗಿ ಯಾರು ಯೋಚಿಸುವುದಿಲ್ಲ. ಆದರೆ ಆ ಮಗು ಅದರ ಮನಸ್ಸಿನೊಳಗೆ ಆಗುವ ಗೊಂದಲಗಳು ಇಂದು ಶಾಲೆಯನ್ನು ತೊರೆಯುವಂತೆ ಮಾಡಿದರೆ, ನಾಳೆ ಅವನ ಭವಿಷ್ಯದ ನಿರ್ಣಯವನ್ನು ತೆಗೆದುಕೊಳ್ಳುವಾಗ ಬದಲಾಗುವ ಸ್ಥಿತಿಯನ್ನು ಊಹಿಸಬೇಕಾಗಿದೆ. 

                     ಬರಗಾಲ, ಮುಂಗಾರು ಮಳೆಯ ಕೊರತೆ, ಬೆಲೆ ಏರಿಕೆ ಮನುಷ್ಯನನ್ನು ಸಹ್ಜವಾಗಿ ಬದುಕನ್ನು ನಡೆಸಲಿಕ್ಕಾಗಿ ಅರಸುತ್ತಾ ಸಾಗಬೇಕಾಗಿದೆ. ಬದುಕಿಗಾಗಿ ಗೂಳೇ ಹೋಗಲೇ ಬೇಕಾದ ಅನಿವಾರ್ಯ ಸ್ಥಿತಿ  ನಮ್ಮ ಹಳ್ಳಿಗರಿಗೆ ಇದೆ. ತಮ್ಮ ಮಕ್ಕಳ ಭವಿಷ್ಯದ ಚಿಂತನೆಯು ಇಲ್ಲಿ ಸೇರಿದೆ. ಆದರೆ ನಮ್ಮ ಎಲ್ಲ ಸೌಕರ್ಯದ ನಡುವೆ ನಮ್ಮ ಮಕ್ಕಳ ಮೇಲೆ ನಮಗಿರುವ ಕಾಳಜಿ ಏನು ? ಎಂದು ಆಲೋಚಿಸಬೇಕು. ಅತ್ಯಾಚಾರದಂಥಹ ಸುದ್ದಿಗಳು ಎಲ್ಲರಲ್ಲೂ ಭಯವನ್ನು ಹುಟ್ಟಿ ಹಾಕುತ್ತಿವೆ. ಮಾಧ್ಯಮಗಳ ತೀವ್ರತೆಯು ಮಕ್ಕಳ ಮನಸ್ಸನ್ನು ಘಾಸಿ ಮಾಡುವ ಬದಲು ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯಬೇಕಿದೆ. ಮಗುವಿಗೆ ಇಂದು ಹಸಿವು ಇದೆ. ಅದು ಒಂದೊಪ್ಪತ್ತಿನದಾಗಿರಬಹುದು, ಕಲಿಕೆಯದಾಗಿರಬಹುದು ಆದರೆ ಅವನ/ಳ ಹಸಿವನ್ನು ನೀಗಿಸುವಂಥ, ಅವರ ಮನಸ್ಸನ್ನು ಅರಳಿಸುವಂಥ ಕಾರ್ಯಗಳನ್ನು ನಮ್ಮ ಅಧಿಕಾರಿಗಳು, ಶಿಕ್ಷಕರು ಹಾಗೂ ಪಾಲಕರು ಮಾಡಬೇಕಾಗಿದೆ. ಮಕ್ಕಳ ಇಂದಿನ ಈ ಹಸಿವುಗಳನ್ನು ಇಂಗಿಸುವ, ದೂರದಲ್ಲಿ ನಿಂತು ಇದೇ ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತಿರುವ ತಂದೆ-ತಾಯಿಗಳಿಗೆ ಮಗನ ಶ್ರೇಯಸ್ಸನ್ನು ಕೇಳಿ ತಮ್ಮ ನೋವನ್ನು ಮರೆಯುವಂಥ ವಾತವರಣವನ್ನು ನಾವು ಕಟ್ಟಬೇಕಾಗಿದೆ. ಕಳೆದ ಸಾಲಿನಲ್ಲಿ ಓದುತ್ತಿದ್ದ ಒಬ್ಬ ವಿದ್ಯಾರ್ಥಿ ತನ್ನ ಬಿಡುವಿನ ವೇಳೆಯಲ್ಲಿ ಕೂಲಿ ಮಾಡಿಕೊಂಡು ತನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಹಣವನ್ನು ಸಂಗ್ರಹಿಸುತ್ತಿದ್ದ. ಹಾಗೆಯೇ ಅವನು ಇಡೀ ಶಾಲೆಗೆ ಹೆಚ್ಚಿನ ಅಂಕ ಪಡೆದು ಮೊದಲಿಗನಾದ. ನಮ್ಮ ಶಾಲೆಯ ಕನ್ನಡ ಅಧ್ಯಾಪಕರು ಅವನ ಓದುವಿಗೆ ಹಣದ ರೂಪದಲ್ಲಿ ಸಹಾಯ ಮಾಡಿದರು. ನಾನು ಕೆಲವು ಸಂಘ-ಸಂಸ್ಥೆಗಳೊಂದಿಗೆ ಮಾತನಾಡಿ ಅವನ ನೆರವಿಗೆ ಹಣದ ಹಾಗೂ ಪುಸ್ತಕದ ರೂಪದಲ್ಲಿ ಸಹಾಯ ಮಾಡಿದ್ದು ಇದೆ. ಒಂದೊಪ್ಪತ್ತಿನ ಊಟ ಅವನನ್ನು ಬಲಿ ತೆಗೆದುಕೊಳ್ಳದಿರಲಿ. ಈ ಊಟ ಕೇವಲ ಊಟವಾಗದೇ ಭವಿಷ್ಯತನ್ನು ರೂಪಿಸುವ ದಾರಿಯಾಗಲಿ.