ಬುಧವಾರ, ಸೆಪ್ಟೆಂಬರ್ 4, 2019

ಕಲ್ಯಾಣದಲ್ಲಿ ಮಾಯೆ


ಪೂಜ್ಯ ಶಿವಶರಣೆ ಇಟಗಿ ಭೀಮಮ್ಮನ ದೇವಸ್ಥಾನ

ಕುಂತಳನಗರ - ಕುಕನೂರ



 











  ಒಂದು ರಂಗ ಪ್ರಸ್ತುತಿ

ಕಲ್ಯಾಣದಲ್ಲಿ ಮಾಯೆ







ರಂಗರೂಪ : ಶಾಂತಮಣಿ ಹೆಚ್ ಬಿ

ವಿನ್ಯಾಸ/ನಿರ್ದೇಶನ : ಗುರುರಾಜ ಹೊಸಪೇಟೆ



































ಪ್ರಸ್ತುತ ಕಾಲಮಾನದಲ್ಲಿ ದುಡಿಯುವವರಿಗಿಂತ ದುಡಿಯದೇ ಇರುವವರ ಸಂಖ್ಯೆ ಹೆಚ್ಚು. ಆದರೆ ಐಷರಾಮಿ ಬದುಕು ನಮ್ಮನಿಂದು ಸುತ್ತಿಕೊಂಡಿದೆ. ಆದಾಯವನ್ನು ಮೀರಿ ಮಿತಿಯಿಲ್ಲದ ದುರಾಸೆಗಳ ಕಡೇ ನಾವು ಸಾಗುತ್ತಿದ್ದೇವೆ.  ಇವುಗಳನ್ನು ಕುರಿತು ನಮ್ಮ ವಚನಕಾರರು ಈ ಹಿಂದೆಯೇ ಸಾವಿರಾರು ವಚನಗಳನ್ನು ಕಟ್ಟಿ ಹಾಡಿದ್ದಾರೆ. ಆಸೆ ಎಂಬ ಮಾಯೆಯನ್ನು ನಮ್ಮಿಂದ ದೂರಾಗಿಸಲು ನಾವು ಪರಿವರ್ತನೆಗೊಳ್ಳಲು ಮತ್ತು ನಮ್ಮನ್ನು ನಾವು ಹುರಿಗೊಳಿಸಿಕೊಳ್ಳಲು ಶರಣರು ಈಗಾಗಲೇ ದಾರಿ ತೋರಿದ್ದಾರೆ. ಆ ಹಾದಿಯನ್ನು ಇಂದಿನ ಸಮಾಜ ಹಿಡಿದು ಸಾಗಬೇಕಿದೆ. ಮನದ ಆಸೆಯನ್ನು ದೂರಾಗಿಸಿದರೆ ನಾವು ನಮ್ಮನ್ನು ಗೆಲ್ಲಲು ಸಾದ್ಯ.

























(ಸಂಗೀತ ಕೇಳಿ ಬರುತ್ತಲೇ ರಂಗದ ಮೇಲೆ ನಟರ ಪ್ರವೇಶ. ಶರಣರೆಲ್ಲರೂ ಒಂದೊಂದು ಕಾಯಕದಲ್ಲಿ ತಲ್ಲೀನತೆಯಿಂದ ನಿರತರಾಗಿರುವರು ಆಗ ಶರಣನೊಬ್ಬ ಎಲ್ಲರನ್ನೂ ನೋಡುತ್ತಾ ರಂಗದ ಮಧ್ಯದಲ್ಲಿ ಬಂದು ಮಾತನ್ನು ಪ್ರಾರಂಭಿಸುವನು.)

ಶರಣ 1 : ಕಲ್ಯಾಣವೆಂಬ ಈ ಪಟ್ಟಣದಲ್ಲಿ ಬಸವಣ್ಣ.... ಅಲ್ಲಮ..... ಅಕ್ಕಮಹಾದೇವಿ..... ಚನ್ನಬಸವಣ್ಣ..... ನಾಗಲಾಂಬಿಕೆ....... ದೊಹಾರ ಕಕ್ಕಯ್ಯ........ ಮಾದರ ಚೆನ್ನಯ್ಯ........ ಅಂಬಿಗರ ಚೌಡಯ್ಯ......         ಆಯ್ದಕ್ಕಿ ಲಕ್ಕಮ್ಮ........ ಮಡಿವಾಳ ಮಾಚಿದೇವ...... ನುಲಿಯ ಚಂದಯ್ಯ....... ಎಲ್ಲರಿಗೂ ಶರಣು         ಶರಣಾರ್ಥಿಗಳು ಶರಣರೆಲ್ಲರಿಗೂ ಶರಣು ಶರಣಾರ್ಥಿಗಳು. ಶರಣರ ಕಾಯಕ ನಿಷ್ಠೆ, ಸ್ವಾನುಭವದಿಂದ       ಕಟ್ಟಿದ್ದ ಈ ಕಲ್ಯಾಣವು ಗುರು, ಲಿಂಗ, ಜಂಗಮ, ದಾಸೋಹದಿಂದಲೇ ನಡೆದು ಬಂದಿದೆ. ಕಾಯಕವೇ       ಚೈತನ್ಯ. ಕಾಯಕದಿಂದ ಈ ಕಲ್ಯಾಣ. ಬನ್ನಿ ಶರಣರೇ ಕಾಯಕಕ್ಕೆ ಬನ್ನಿ. ನಿಮ್ಮ ಅನುಭವಗಳನ್ನು ಈ          ಅನುಭವ ಮಂಟಪದಲ್ಲಿ ಹಂಚಿಕೊಳ್ಳಿ. ಬನ್ನಿ ಬನ್ನಿ

ಮಾಯೆಯ ಪ್ರವೇಶ.

ಮಾಯೆ : ಹ್ಹ ಹ್ಹ ಹ್ಹ...... ಮಾಯೆ. ನನ್ನ ಸುಳಿಯಲ್ಲಿ ಸಿಲುಕಿದವರಿಲ್ಲ. ಹ್ಹ ಹ್ಹ ಹ್ಹ ಬನ್ನಿ ನನಗೆ                       ಶಿರಬಾಗಿ

ಶರಣ 2 : ಕಾಯಕದಲ್ಲಿ ನಿರತನಾದರೆ

       ಗುರುದರ್ಶನವಾದರೂ ಮರೆಯಬೇಕು

       ಲಿಂಗ ಪೂಜೆಯಾದರೂ ಮರೆಯಬೇಕು

       ಜಂಗಮ ಮುಂದೆ ನಿಂತಿದ್ದರೂ ಹಂಗ ಹರಿಯಬೇಕು

       ಕಾಯಕವೇ ಕೈಲಾಸವಾದ ಕಾರಣ

       ಅಮರೇಶ್ವರಲಿಂಗವಾಯತ್ತದಡೂ ಕಾಯಕದೊಳಗೂ

ಮಾಯೆ : ಶರಣರಿವರು. ಹ್ಹ ಹ್ಹ ಹ್ಹ ಆಸೆ ಯಾರಿಗೂ ತಪ್ಪಿದ್ದಲ್ಲ. ಆಸೆಯನ್ನು ಬಿಟ್ಟು ಹೇಗೆ ಬದುಕುವಿರಿ.

ಶರಣ 3 : ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ

        ನೀವು ಬಂದ ಕಾರ್ಯಕ್ಕೆ ನಾವು ಬಂದೇವಯ್ಯಾ

        ನಾನು ನೀವು ಬಂದ ಕಾರ್ಯಕ್ಕೆ ಪ್ರಭು ದೇವರು ಬಂದರು.

        ಕಲ್ಯಾಣವೆಂಬುದು ಪ್ರಣತೆಯಾಯಿತು

        ನಾನು ತೈಲವಾದೇನು

        ನೀವು ಬತ್ತಿಯಾದಿರಿ

        ಪ್ರಭುದೇವರು ಜೋತಿಯಾದರು

ಮಾಯೆ : ನಾನು ಕಾಲಾನುಕಾಲದಿಂದಲೂ ಎಲ್ಲರನ್ನೂ ಪಳಗಿಸುತ್ತಾ ಬಂದೆ. ಇದು 12 ನೇಯ                           ಶತಮಾನ ಈ  ಶರಣರನ್ನು ನನ್ನ ಮೋಹದಲಿ ಸೆಳೆಯುವೆ.

ಶರಣ 4 : ಚಂದ್ರನ ಮುಂದೆ ಚುಕ್ಕಿಯೇ ?

        ಆನೆಯ ಮುಂದೆ ಕೋಣವೇ ?

        ಸಿಂಹದ ಮುಂದೆ ಶ್ವಾನವೇ ?

         ನಿಮ್ಮ ಮುಂದೆ ನಾನೇತರವಯ್ಯಾ ?

         ಕಪಿಲಸಿದ್ದ ಮಲ್ಲಿಕಾರ್ಜುನಯ್ಯ

ಮಾಯೆ : ಏನಿದು ? ಈ ಶರಣರ ಮೋಹದಲಿ ನಾನೇ ಸಿಲುಕುವನೇ ? ಇಲ್ಲ ಹಾಗಾಗಬಾರದು. ನಾನು

       ಶರಣನಲ್ಲ.

ಶರಣ 5 : ಮಸಿಯನೇಸುಕಾಲ ಬೆಳಗಿದರೆ ಬಿಳಿದಾಗುಬಲ್ಲದೇ

        ಕರ್ಮ ಸ್ಥಿತಿ ಬೆನ್ನು ಬಿಡದು

        ಅನಂತ ಕೋಟಿ ಸನ್ಮಾನವ ಮಾಡಿದರೇನು

         ನಿಮಿಷದ ಉದಾಸೀನ ಕೆಡಸಿತು

         ಕೂಡಲಸಂಗಮದೇವ

         ನಿನ್ನ ನಂಬಿಯೂ ನಂಬದ ಡಂಬಕ ನಾನಯ್ಯ

ಮಾಯೆ : ನಾನು ಮಸಿಯೇ. ನನ್ನ ಕತ್ತಲೊಳಗೆ ಎಲ್ಲರನು ಒಯ್ಯುವೇ. ನಿಮ್ಮ ನಿಮ್ಮ ನಂಬಿಕೆಯನು                ಒಡೆಯುವೆನು

ಶರಣ 3 : ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ

      ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ         

      ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ

      ಛಲಬೇಕು ಶರಣಂಗೆ ಲಿಂಗ ಜಂಗಮವನೊಂದೆಂಬ

      ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ

      ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ

ಮಾಯೆ : ಈ ಶರಣ ಛಲವೇ ನನ್ನನ್ನು ಕೊಲ್ಲುತಿಹುದಿಲ್ಲಿ. ಇವರ ಛಲದಿಂದ ಲಿಂಗ – ಜಂಗಮವ

       ನೊಂದಾಗಿಸಿದರೆ ನನ್ನ ಉಳಿವಿಲ್ಲ. ನನ್ನ ಉಳಿವಿಲ್ಲ.

ಶರಣ 2 : ಅಂದು ಇಂದು ಮತ್ತೊಂದೆನಬೇಡ

        ದಿನವಿಂದೇ ಶಿವಶರಣೆಂಬವಂಗೆ

        ದಿನವಿಂದೇ ಹರಶರಣವೆಂಬವಂಗೆ

        ದಿನವಿಂದೆ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ

ಮಾಯೆ : ಅಯ್ಯಾ ಶರಣ ಇಲ್ಲಿದ್ದು ಏನು ಸುಖ. ಬಾ ನನ್ನೊಂದಿಗೆ ಸ್ವರ್ಗವನು ತೋರುವೆನು.                               ಬೇಕಾದ   ವೈಭೋಗವನು ಕರುಣಿಸುವೆನು. ಜಗದಗಲವನು ನಿನಗೇ ನೀಡುವೆನು. ಬಾ                             ನನ್ನೊಂದಿಗೆ.

ಶರಣ 1 : ಹೊನ್ನು ಮಾಯೆ ಎಂಬರು

        ಹೆಣ್ಣು ಮಾಯೆ ಎಂಬರು

        ಮಣ್ಣು ಮಾಯೆ ಎಂಬರು

        ಹೊನ್ನು ಮಾಯೆಯಲ್ಲ

        ಹೆಣ್ಣು ಮಾಯೆಯಲ್ಲ

        ಮಣ್ಣು ಮಾಯೆಯಲ್ಲ

        ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ

ಮಾಯೆ : ಏನಿದು ? ಇವರನ್ನು ನನ್ನೆಡೆಗೆ ಸೆಳೆಯುವುದು ಹೇಗೆ ? ಹ್ಹ ಹ್ಹ ಹ್ಹ ಹೀಗೆ ಮಾಡುವೆನು.                        ಅತಿಲೋಕ  ಸುಂದರಿಯಾರಾದ ರಂಬೆ, ಊರ್ವಶಿ, ಮೇನಕೆಗಿಂತ ಮಿಗಿಲಾದವಳನ್ನು                           ನಿನಗೆ ಸತಿಯಾಗಿ ನೀಡುವೆನು.

ಶರಣ 4 : ಅಯ್ಯಾ

       ಪುರುಷನ ಮುಂದೆ ಮಾಯೆ

       ಸ್ತ್ರೀ ಎಂಬ ಅಭಿಮಾನವಾಗಿ ಕಾಡಿತ್ತು.

       ಸ್ತ್ರೀಯ ಮುಂದೆ ಮಾಯೆ

       ಪುರುಷನೆಂಬ ಅಭಿಮಾನವಾಗಿ ಕಾಡಿತ್ತು

       ಹೆಣ್ಣಿಗೆ ಗಂಡು ಮಾಯೆ

       ಗಂಡಿಗೆ ಹೆಣ್ಣು ಮಾಯೆ

ಮಾಯೆ : ಮೂರ್ಖರು ನೀವು. ಸುಖವನು ಬಯಸುವವನಿಗೆ ನಾನು ಹೊಳೆಯನ್ನೇ ಹರಿಸುವೆ. ಬನ್ನಿ   
                ಬನ್ನಿ ಬಯಕೆಗಳ ಹಸಿವನ್ನು ನೀಗಿಸುವೆನು. ಬನ್ನಿ ಬನ್ನಿ ಶರಣರೇ ಬನ್ನಿ ಬನ್ನಿ

ಶರಣ 5 : ಉಂಬ ಬಟ್ಟಲು ಬೇರೆ ಕಂಚಲ್ಲ.

       ನೋಡುವ ದರ್ಪಣ ಬೇರೆ ಕಂಚಲ್ಲ

       ಭಾಂಡ ಭಾಜನ ಒಂದೇ

       ಬೆಳಗೆ ಕನ್ನಡಿ ಎನಿಸಿತಯ್ಯಾ

       ಅರಿದರೆ ಶರಣ ಮರೆದರೆ ಮಾನವ

       ಮರೆಯದೇ ಪೂಜೀಸೋ ಕೂಡಲಸಂಗಯ್ಯನ

ಮಾಯೆ : ಅರಿದರೆ ಶರಣ..... ಮರೆದರೆ ಮಾನವ ಅರಿಯ ಬಾರದು ನೀವು ಮಾನವರು. ಮೂರ್ಖರು.                      ಆಸೆ ಆಕಾಂಕ್ಷೆಗಳಲ್ಲಿಯೇ ಬದುಕುಬೇಕು. ಜಗವನೆಲ್ಲವನು ನಾನೇ ನಾನೇ ಆಳಬೇಕು.                              ಶರಣರ ಈ ನಡೆ ನನಗೆ  ತರವಲ್ಲ.

ಶರಣ 2 : ಉಳ್ಳವರು ಶಿವಾಲಯ ಮಾಡಿಹರು

        ನಾನೇನು ಮಾಡವೆ ಬಡವನಯ್ಯಾ

        ಎನ್ನ ಕಾಲೇ ಕಂಬ, ದೇಹವೇ ದೇಗುಲ

        ಶಿರ ಹೊನ್ನ ಕಳಸವಯ್ಯಾ

        ಕೂಡಲಸಂಗಮದೇವ ಕೇಳಯ್ಯಾ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.

ಮಾಯೆ : ಸ್ಥಾವರಕೆ ಅಳಿವುಂಟು, ಜಂಗಮಕೆ ಅಳಿವಿಲ್ಲ. ಈ ಶರಣರೆಲ್ಲ ಜಂಗಮರಾಗುವತ್ತಾ ಸಾಗುತಿಹರು      ನನ್ನ ಮಾಯೆ ಈಗ ಇವರನ್ನು ಸೆಳೆಯುವಲ್ಲಿ ಸೋತಿರಬಹುದು. ಈ ಶರಣರನ್ನು ಹೀಗೆ ಬಿಡುವುದಿಲ್ಲ. ನನ್ನ ಮುಷ್ಠಿಯೊಳಗೆ ಸಿಗುವವರೆಗೂ ಬೆನ್ನಟ್ಟುವೆನು.  ಬಿಡೇನು. ಯಾರನ್ನೂ ಬಿಡೇನು. ಮತ್ತೇ ಬರುವೆನು ಕೊನೆಯವರೆಗೂ ಕಾಡುವೆನು. ಬಿಡೇನು ಬಿಡೇನು





ನಿರ್ಗಮನ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher