ಶನಿವಾರ, ಅಕ್ಟೋಬರ್ 19, 2019

ಜಾನಪದೀಯ ಚಿಂತನೆಗಳು, ಕಲಾ ಪ್ರಕಾರಗಳು ಮತ್ತು ಸಾಹಿತ್ಯ ಉದಾಹರಣೆಗಳು- ಕಲಿಕೆ ಅನ್ನುವುದರ ಮೂಲ ವೇದಿಕೆ.

ಜಾನಪದೀಯ ಚಿಂತನೆಗಳು, ಕಲಾ ಪ್ರಕಾರಗಳು ಮತ್ತು ಸಾಹಿತ್ಯ ಉದಾಹರಣೆಗಳು- ಕಲಿಕೆ ಅನ್ನುವುದರ ಮೂಲ ವೇದಿಕೆ.

- ಗುರುರಾಜ ಎಲ್




                 ನಾನು ಎರಡು ಬಾರಿ ಐ ಎಫ್ ಎ ನ ಯೋಜನೆಯನ್ನು ನಮ್ಮ ಶಾಲೆಯಲ್ಲಿ ಕೈಗೊಂಡಿದ್ದೇನೆ. ಮೊದಲು 2012 ರಲ್ಲಿ ನಂತರ 2016 ರಲ್ಲಿ. ಎರಡು ಬಾರಿ ನನ್ನ ಹುಡುಕಾಟ ಜಾನಪದದ ಸುತ್ತಲೇ ಸಾಗಿದ್ದು. ಕಾರಣ ನಾವು ಕೆದಿಕಿದಷ್ಟು ಹೊಸ ವಿಚಾರಗಳು, ಹೊಸ ಅರ್ಥಗಳು ಸಿಗುತ್ತಾ, ನಮ್ಮ ಮಕ್ಕಳ ಕಲಿಕೆಯಲ್ಲಿ ಸಾಕಷ್ಟು ಸುಧಾರಣೆಗಳು ಕಂಡು ಬಂದ ಕಾರಣ ನಾನು ಮತ್ತೇ ಮತ್ತೇ ಮುಂದುವರಿಸಲು ಬಯಸಿದ್ದು. ಇಂದಿಗೂ ನಾನು ಸ್ಥಳೀಯ ಜನಪದವನ್ನು ಕಟ್ಟಿಕೊಂಡೇ ಸಾಗುತ್ತಿದ್ದೇನೆ. ಜನಪದ ನಮ್ಮ ಕಾರ್ಯಕ್ಕೆ ಹೊಸ ಜೀವಂತಿಕೆಯನ್ನು ನೀಡುತ್ತೇ ಎಂದು ನನಗೆ ಮೊದಲಿಗೆ ಅನಿಸಿರಲಿಲ್ಲ. ಆದರೆ ನಮ್ಮ ಶಾಲೆಯಲ್ಲಿ ಯೋಜನೆಯನ್ನು ಪ್ರಾಂರಂಭಿಸಿ ಅದರ ಸುತ್ತ ಕಾರ್ಯ ಚಟುವಟಿಕೆಗಳನ್ನು ನಡೆಸಿದಾಗ ಹೊಸ ದಾರಿಯೇ ನನಗೆ ಗೋಚರಿಸಿತು. ಹೆಜ್ಜೆಗಳು ಜಾನಪದದತ್ತ... ಹೆಸರಿನಡಿ ನಮ್ಮ ಕಾರ್ಯ ಸಾಗಿದ್ದು ನೇರವಾಗಿ ನಮ್ಮ ಮಕ್ಕಳ ಮನೆಗಳೆಡೆಗೆ. ಅಜ್ಜಿ, ಮುತ್ತಜ್ಜಿಯರ ಜೊತೆ ತಾಯಂದಿರು ಯುವತಿಯರು ಸೇರಿ ನಮ್ಮ ಮುದ್ದು ಮಕ್ಕಳು ಜನಪದವನ್ನು ಇಂದು ಹಾಡುತ್ತಿರುವುದು ತುಂಬಾನೇ ಸಂತೋಷವಾಗುತ್ತದೆ. ಮಕ್ಕಳ ಕಲಿಕೆಯಲ್ಲಿ ಆಸಕ್ತಿಯ ಜೊತೆಗೆ ನಮ್ಮ ನಾಟಕಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ವಿಶೇಷ. ನಮ್ಮೂರಿನ ದೇವಕಿಯಮ್ಮ ಎಂಬ 80-85 ವರ್ಷದ ಅಜ್ಜಿ ಇಂದಿನ ಶಿಕ್ಷಣ ಪದ್ದತಿಯನ್ನೇ ತೆಗಳುತ್ತಾಳೆ. ಏನೆಲ್ಲ ಸೌಲಭ್ಯಗಳು ಬಂದಿರಬಹುದು ಆದರೆ ನಾವು ಕಲಿಯುವಾಗ ಇರೋ ಶಿಸ್ತು ಇಂದಿನ ಮಕ್ಕಳಲ್ಲಿ ಕಾಣಲ್ಲ ಎಂದು ನೇರವಾಗಿಯೇ ಹೇಳುತ್ತಾರೆ. ಅದು ನಿಜವೂ ಆಗಿದ್ದರೂ ನಾವು ಶಿಕ್ಷಕರು ಮಕ್ಕಳನ್ನು ಮತ್ತಷ್ಟು ಕ್ರಿಯಾಶೀಲತೆಯಿಂದ ತೊಡಗಿಸಲು ಸಾಧ್ಯವಿದೆ ಎನ್ನುವುದನ್ನು ನಮ್ಮ ಮಕ್ಕಳು ಇಂದು ಎಲ್ಲ ಚಟುವಟಿಕೆಗಳಲ್ಲಿ ಭಾಗುವಹಿಸುವ ರೀತಿಯಿಂದಲೇ ತಿಳಿದು ಬಂದಿದೆ. 

ನಮ್ಮ ವಿದ್ಯಾರ್ಥಿಗಳ ಮನೆ ಮನೆಗಳಲ್ಲಿ ಬೀಸುವ ಸಂದರ್ಭದಲ್ಲಿ, ಕುಟ್ಟೋ ಸಂದರ್ಭದಲ್ಲಿ ಇಂದಿಗೂ ಹಾಡುವ ರೂಢಿ ಇದ್ದಿದ್ದನ್ನು ನಮ್ಮ ಮಕ್ಕಳ ಮೂಲಕ ದಾಖಲಾತಿಯನ್ನು ಮಾಡುತ್ತಿದ್ದೇನೆ. ಮಕ್ಕಳೇ ಆ ಹಾಡುಗಳನ್ನು ಕಲಿಯುವ ಪ್ರಯತ್ನದ ಜೊತೆಗೆ ಉಳಿಸುವ ಕಾರ್ಯವನ್ನು ಮಾಡುತ್ತಿರುವುದು ಗ್ರಾಮದ ಹಿರಿಯರಿಗೆ ಎಲ್ಲಿಲ್ಲದ ಆನಂದ. ಮನೆಯಲ್ಲಿ ಮಗು ಜನಿಸಿದಾಗ, ತೊಟ್ಟಿಲಿಗೆ ಹಾಕುವಾಗ, ಕಿವಿ ಚುಚ್ಚುವ ಸಂದರ್ಭದಲ್ಲಿ ಹಾಗೆಯೇ ಹೆಣ್ಣು ಮಕ್ಕಳು ಪ್ರಾಯಕ್ಕೆ ಬಂದಾಗ, ಮದುವೆಯ ಸಂದರ್ಭಗಳಲ್ಲಿ, ಮದುಮಗ/ಮದುಮಗಳನ್ನು ತಯಾರಿ ಮಾಡುವ ಸಂದರ್ಭದಲ್ಲಿ, ಆರತಿ ಬೆಳಗುವ ಸಂದರ್ಭಗಳಲ್ಲಿ, ಮನೆ ತುಂಬಿಸುವ ಸಂದರ್ಭದಲ್ಲಿ, ಬಾಣಂತಿಯಾದಾಗ  ಹೀಗೆ ಪ್ರತಿ ಸಂದರ್ಭದಲ್ಲೂ ಹಾಡುವ ಹಾಡುಗಳು ಕಣ್ಮರೆಯಾದದ್ದನ್ನು ಇಂದು ನಮ್ಮ ಮಕ್ಕಳ ಉತ್ಸಾಹದಿಂದ ತೊಡಗಿಸಿಕೊಂಡಿರುವುದರಿಂದ ಮರು ಜೀವಂತಿಕೆ ಪಡೆದಿವೆ.
ನಮ್ಮ ಜನಪದ ನಿರಂತರವಾಗಿ ಉಳಿಸಿಕೊಳ್ಳಬೇಕು ಎನ್ನುವ ಮಾತುಗಳು ನಮ್ಮ ಪಾಲಕರ ಮನೆ ಮನಗಳಲ್ಲಿ ಮೂಡಿ ಬಂದಿರುವುದು ಸಂತೋಷದ ವಿಷಯವಾಗಿದೆ.

     ಸೋಬಾನೆ, ಕುಟ್ಟೋಪದ, ಬಿಸೋಪದ, ತತ್ವಪದ, ಜೋಗುಳಪದ, ರಿವಾಯಿತಿ ಪದಗಳು ಹೀಗೆ ಪ್ರತಿಯೊಂದು ಹಾಡುಗಳು ಅದರದೇ ಹಿನ್ನಲೆಯನ್ನು ಹೊಂದಿದ್ದು ನಮ್ಮ ಮಕ್ಕಳ ಕುತೂಹಲದಿಂದ ಅವುಗಳನ್ನು ಕೇಳಿ ಕಲೆತು ಇಂದು ಹಾಡುತ್ತಿರುವುದು ಖುಷಿ ಕೊಡುತ್ತದೆ. ಮಕ್ಕಳನ್ನು ಜಾನಪದದಲ್ಲಿ ತೊಡಗಿಸುವಿಕೆಯಿಂದ ನಮ್ಮ ನಾಟಕ ಪ್ರಕ್ರಿಯೆಯಲ್ಲಿ ಹೊಸತನವನ್ನು ಬಳಸಿಕೊಳ್ಳುತ್ತಿದ್ದೇವೆ.


ಮೊಹರಂನ ರಿವಾಯಿತಿ ಪದಗಳು ಹಾಗೂ ಹೆಜ್ಜೆಕುಣಿತ ನಮ್ಮ ಪ್ರಾಜೆಕ್ಟನಲ್ಲಿ ಬಳಸಿಕೊಳ್ಳುವಾಗ ಇದು ಬೇಕಾ ಎಂಬ ಅನುಮಾನ ಹುಟ್ಟಿದ್ದ ನಿಜ. ಆದರೆ ನಾವು ಹಿರಿಯರೊಟ್ಟಿಗೆ ಒಡನಾಟ ಬೆಳೆಸಿ ಅವರೊಂದಿಗೆ ಚರ್ಚಿಸುತ್ತಾ ಸಾಗಿದಾಗ ಮೊಹರಂ ಆಚರಣೆಯ ಹಲವು ಸಾಧ್ಯತೆಗಳು ಬಿಚ್ಚಿಕೊಳ್ಳುತ್ತಾ ಹೋದವು. ಗುದ್ದಲಿ ಪೂಜೆಯಿಂದ ಹಿಡಿದು ದಫನ್ ಮಾಡುವವರಿಗೂ ಬಗೆಬಗೆಯ ಆಚರಣೆಗಳು ತೆರೆದುಕೊಳ್ಳುತ್ತಾ ಮೂರು ತಿಂಗಳಿಂದ ಹೆಜ್ಜೆ ಕುಣಿತ ಅಭ್ಯಾಸ ಮಾಡುವ ಊರಿನ ಹಿರಿಯರು, ಯುವಕರು ತಮ್ಮ ಹೊಲ ಮನೆ ಕೆಲಸ ಕಾರ್ಯಗಳನ್ನೆಲ್ಲ ಮುಗಿಸಿ ರಾತ್ರಿಯ ಹೊತ್ತು ಎಲ್ಲರೊಡಗೂಡಿ ರಿವಾಯಿತ್ ಪದಗಳನ್ನು ಅಭ್ಯಾಸ ಮಾಡುತ್ತಾ ಹೆಜ್ಜೆ ಕುಣಿತದ ಅಭ್ಯಾಸ ಮಾಡುವುದೇ ವಿಶೇಷ. ಈ ಎಲ್ಲ ಸಂದರ್ಭಗಳಲ್ಲಿ ಮಕ್ಕಳ ಆಸಕ್ತಿ ತಮ್ಮ ಇತರೇ ತರಗತಿಗಳಲ್ಲಿ ಇರುವ ರೀತಿಯಲ್ಲಿರದೇ ನೂರಕ್ಕೆ ನೂರರಷ್ಟು ತಮ್ಮನ್ನು ತಾವು ಕೊಟ್ಟು ಕೊಂಡಿದ್ದು ನನ್ನನ್ನು ಸೆಳೆದಿತ್ತು. ಮಕ್ಕಳಿಗೆ ತಮ್ಮ ಹಬ್ಬ ಆಚರಣೆಯನ್ನು ವಿವರಿಸುವುದು ಸಿಹಿಯೂಟ ಮಾಡಿದಷ್ಟು ತೃಪ್ತಭಾವ ಅವರಲ್ಲಿ ಕಂಡುಬಂದಿದ್ದನ್ನು ನಾನು ಗುರುತಿಸಿದ್ದೆ. 

  ಭಾರತಕ್ಕೆ ಮೊಹರಂ ಹಬ್ಬ ಮುಸ್ಲಿಂರ ಆಕ್ರಮಣದ ಜೊತೆ ಜೊತೆಗೆ ಬಂದಿದ್ದನ್ನು ಇಂದು ಉತ್ತರ ಕರ್ನಾಟಕದೆಲ್ಲೆಡೆ ತಮ್ಮ ಮನೆಯ ಹಬ್ಬವೆಂಬಂತೆ ಹಿಂದೂಗಳೇ ಆಚರಿಸುತ್ತಿರುವುದು ವಿಶೇಷ. ಮೊಹರಂ ಹಿನ್ನಲೆಯ ಕುರಿತು ತಿಳಿಸಲು ಕೇಳಿದಾಗ ಅದು ನಮ್ಮ ಹಬ್ಬ ಎನ್ನುವುದಷ್ಟೇ ತಿಳಿದಿದ್ದ ಮಕ್ಕಳಿಗೆ ಊರಿನಲ್ಲಿ, ಮನೆಗಳಲ್ಲಿ ತಮ್ಮ ಹಿರಿಯರು ನಂಬಿದ್ದನ್ನೇ ಕೇಳಿಕೊಂಡಿದ್ದ ಮಕ್ಕಳು ಅದರ ಇತಿಹಾಸದ ಕುರಿತು ತಿಳಿದುಕೊಳ್ಳಲು ಆಸಕ್ತರಾಗಿದ್ದರು. ಹಸೇನ್-ಹುಸೇನ್ (ಪೀರ್) ನಿಗೂ - ದ್ಯಾಮವ್ವಳಿಗೂ ಯಾವ ತರಹದ ಸಂಬಂಧ....? ಮುಸಲನಿಗೂ ಹಾಗೂ ಹಿಂದೂ ದೇವತೆಗೂ ಹೇಗೆ ಸಂಬಂಧ.....? ಪುರಾಣದಲ್ಲಿ ಎಲ್ಲಿಯೂ ಈ ಧರ್ಮಗಳು ಕೂಡಿದ್ದು ಕಂಡು ಬರಲ್ಲ ಅದರೇ ಇಲ್ಲಿಯವರೆಗೂ ತಮ್ಮ ಮನೆಯ ಹಿರಿಯರು, ತಾವು, ಎಲ್ಲರೂ ಅದನ್ನೇ ನಂಬಿಕೊಂಡು ಬಂದಿದ್ದು ಹೇಗೆ ಎನ್ನುವ ಸಹಜವಾದ ಪ್ರಶ್ನೇಗಳು ಮಕ್ಕಳಿಂದ ಬಂದಾಗ ಮಕ್ಕಳ ಸಮಸ್ಯೆಗಳನ್ನು ಮೂಲದಿಂದ ಹಿಡಿದು ವಿವರವಾಗಿ ಸರಳಗೊಳಿಸುತ್ತಾ ಇಸ್ಲಾಂ ಧರ್ಮ ಸ್ಥಾಪನೆಯಿಂದ ಹಿಡಿದು,  ಇಸ್ಲಾಂ ಧರ್ಮ ರಕ್ಷಣೆಗಾಗಿ ಹೊರಾಡಿದ ಪೈಗಾಂಬರರ ಮೊಮ್ಮಕ್ಕಳು, ಹಸೇನ್‍ನಿಗೆ ವಿಷ ನೀಡಿ ಕೊಂದ ಬಗೆ, ಹುಸೇನ್‍ನ ಮಕ್ಕಳು ಹಸಿವಿನಿಂದ ಭಿಕ್ಷೆ ಬೇಡಿದಾಗ ನೀರು ನೀಡದೇ ಹೊಡೆದು ಸಾಯಿಸುತ್ತಾರೆ. ಈ ಆಚರಣೆಯನ್ನು ಮುಸ್ಲಿಂರು ಮೌನದಿಂದ ಇದ್ದು ರೋಜಾ (ಉಪವಾಸ) ಕೈಗೊಳ್ಳುವುದನ್ನು ನಡೆಸಿ ಹಸೇನ್-ಹುಸೆನ್ ರನ್ನು ನೆನೆಯುವುದು ಒಂದು ಕಡೇಯಾದರೆ, ಹುಲಿ ವೇಶ ಹಾಕಿ, ಕುಣಿದಾಡುವವರು ಹಸೇನ್-ಹುಸೇನ್‍ರ ವಿರೋಧಿ ಬಣದವರ ಎಂಬ ಸಂಕೇತಿಕವಾಗಿ ಕಾಣುತ್ತಾರೆ. 
               ಈ ರೀತಿಯ ಕಥೆಗಳು ಬಿಚ್ಚಿಕೊಳ್ಳುತ್ತಾ ಸಾಗಿದಾಗ ನಮ್ಮ ವಿದ್ಯಾರ್ಥಿಗಳು ಐತಿಹಾಸಿಕ ಹಿನ್ನಲೆಗಳ, ಧರ್ಮ, ಆಚರಣೆಗಳು, ಅದರ ಹಿಂದಿನ ಕಥೆಗಳ ಕುರಿತು ತುಂಬಾ ಗಂಭೀರವಾಗಿ ಚಿಂತಿಸುವ ಚರ್ಚಿಸುವ ವಾತವರಣ ಬೆಳೆದು ಬಂದಿದ್ದು ಶಾಲೆಯ ಎಲ್ಲರಿಗೂ ಸಂತೋಷ ತಂದಿತು. ಜಾನಪದೀಯ ಸಾಕ್ಷ್ಯಚಿತ್ರವನ್ನು ತೋರ್ಪಡಿಸುವ ಮೂಲಕವೇ ನಮ್ಮ ಶೈಕ್ಷಣಿಕ ವರ್ಷ ಪ್ರಾರಂಭಗೊಂಳ್ಳುವುದರ ಮೂಲಕ ಮಕ್ಕಳಿಗೆ ಪ್ರಶ್ನೀಸುವ, ಚಿಂತಿಸುವ ಅವಕಾಶಗಳನ್ನು ನೀಡುವುದರ ಮೂಲಕ ಮಕ್ಕಳಲ್ಲಿ ತಮ್ಮ ಮೂಲದ ಜನಪದದ ಜೊತೆ ಜೊತೆಗೆ ತಮ್ಮ ಕಲಿಕೆಯನ್ನು ಮುಂದುವರೆಸುವ ಆಸಕ್ತಿಯನ್ನು ಬೆಳೆಸಿದ್ದೇವೆ.


      ಸಾಹಿತ್ಯದ ಹುಡುಕಾಟವು ನಮ್ಮ ಮಕ್ಕಳಲ್ಲಿ ನಿರಂತರವಾಗಿ ಬೆಳೆಸುತ್ತಿರುವುದರಿಂದ ಇಂದು ನಮ್ಮ ಶಾಲೆಯ ವಿದ್ಯಾರ್ಥಿಯೊಬ್ಬ ಕಿರುಚಿತ್ರಕ್ಕೆ ಸಾಹಿತ್ಯವನ್ನು ಬರೆಯುತಲಿದ್ದಾನೆ. ಅದು ಸ್ಥಳೀಯ ಜನಪದವನ್ನೇ ಆಧಾರಿಸಿ ಬರೆದ ಕಥೆಯು ಕೆಲವು ಬದಲಾವಣೆ ಮಾಡಿ ನೀಡಿ ಎಂದು ಪ್ರತಿಷ್ಟಿತ ಚಾನಲ್ ಒಂದು ನಮ್ಮ ವಿದ್ಯಾರ್ಥಿಗೆ ಅವಕಾಶ ನೀಡಿದ್ದಾರೆ. ಮಕ್ಕಳ ಪ್ರತಿಭೆಯನ್ನು ಇಂದು ನಮ್ಮ ಭಾಗದ ಎಲ್ಲ ಶಿಕ್ಷಕರು, ಆಧಿಕಾರಿಗಳು ಕೊಂಡಾಡುತ್ತಿದೆ. ನಾವು ಮಾಡಿದ ಈ ಕಾರ್ಯ ಇಂದು ಊರಿನ ಯಾವುದೇ ಕಾರ್ಯಕ್ರಮದಲ್ಲಿ ಜನಪದಕ್ಕೆ ಒಂದು ವೇದಿಕೆಯ ಅವಕಾಶ ದೊರಕುತ್ತಿದೆ. ಮಕ್ಕಳು ಶಿಕ್ಷಣ ಪಡೆಯಲು ಬೇರೆ ಕಡೇಗೆ ಸಾಗಿದರು ಅವರ ಈ ಸಾಹಿತ್ಯ, ಜನಪದ ಹಾಗೂ ಕಲಾ ಶಿಕ್ಷಣದ ಹಿನ್ನಲೆಯಲ್ಲಿಯೇ ಚಿಂತನೆ ನಡೆಸುತ್ತಿರುವುದು ಕಂಡುಬಂದಿದೆ. ಕಲಿಕೆಯ ಮೂಲ ವೇದಿಕೆಯಾಗಿ ನಮ್ಮ ಜಾನಪದೀಯ ಚಿಂತನೆಗಳು, ಕಲಾಪ್ರಕಾರಗಳು ಹಾಗೂ ಸಾಹಿತ್ಯ ಇಂದು ನಮ್ಮ ಗ್ರಾಮದಲ್ಲಿ ಆಗಿರುವುದನ್ನು ನಾನು ಇಲ್ಲ ಒಪ್ಪಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ನಾನು ಹಳ್ಳಿ ಬಿಟ್ಟು ಹೋದರು ರಂಗಭೂಮಿ ಹಾಗೂ ಜಾನಪದೀಯ ಕಾರ್ಯಗಳು ನಿರಂತರವಾಗಿರುತ್ತದೆ ಎಂಬ ವಿಶ್ವಾಸವನ್ನು ನನಗೆ ಗ್ರಾಮದ ಹಿರಿಯರು, ಯುವಕರು ಹಾಗೂ ವಿದ್ಯಾರ್ಥಿಗಳು ಮೂಡಿಸಿದ್ದಾರೆ ಎನ್ನುವುದನ್ನು ತಿಳಿಯಪಡಿಸುತ್ತೇನೆ.


ಗುರುರಾಜ ಎಲ್
ನಾಟಕ ಶಿಕ್ಷಕ
ಸರಕಾರಿ ಪ್ರೌಢಶಾಲೆ
ಜಹಗೀರಗುಡದೂರ
ತಾ||ಕುಷ್ಟಗಿ ಜಿ||ಕೊಪ್ಪಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher