ಬುಧವಾರ, ಏಪ್ರಿಲ್ 24, 2019

ಮಕ್ಕಳು , ಶಿಕ್ಷಣ , ರಂಗಭೂಮಿ

ಮಕ್ಕಳು , ಶಿಕ್ಷಣ , ರಂಗಭೂಮಿ



ಹೆಚ್ಚಿನ ಫಸ್ಟ್ ವರ್ಲ್ಡ್ ದೇಶಗಳು ರಂಗಭೂಮಿಯ ಪಾಠಗಳನ್ನು ಅವರ ಶೈಕ್ಷಣಿಕ ಕಲಿಕೆಗಳ ಭಾಗವಾಗಿಸಿವೆ. ಅಂದರೆ ರಂಗಭೂಮಿಯನ್ನು ಅವರ ಕಲಿಕಾ ಮಾಧ್ಯಮವಾಗಿಸಿಕೊಂಡಿವೆ. ರಂಗಭೂಮಿ ಮಕ್ಕಳಿಗೆ ಹಲವು ಬಗೆಯ ಕೌಶಲ್ಯ ,ಕಸುಬುಗಾರಿಕೆಯನ್ನ ಕಲಿಸುತ್ತದೆ ,ಹೌದು. ಅದು ರಂಗಭೂಮಿಯ ತೀರ ಮೇಲ್ಪದರದ ಉಪಯೋಗ ಅದರ ಜೊತೆಗೆ ಇನ್ನೊಂದಷ್ಟು ದೇಹ ಸಂಬಂಧಿ , ಭಾವ ಸಂಬಂಧಿ ಉಪಯೋಗಗಳು ಇದ್ದೆ ಇರುತ್ತವೆ. ಅವುಗಳನ್ನು ನಾನಿಲ್ಲಿ ಅಲ್ಲಗಳೆಯುತ್ತಿಲ್ಲ.
ನನಗೆ ರಂಗಭೂಮಿ ಮಕ್ಕಳ ಕಲಿಕೆಯ ಭಾಗವಾಗಬೇಕು ಅನಿಸುವುದು ರಂಗಭೂಮಿ ಒಂದು ಸಾಮುದಾಯಿಕ ಕಲೆಯಾಗಿ ಮಕ್ಕಳಲ್ಲಿ ಸೃಜಿಸಬಹುದಾದ ಕಲ್ಪನಾಶಕ್ತಿಯ ಕಾರಣಕ್ಕಾಗಿ. ಅದು ಏಕಕಾಲಕ್ಕೆ ವೈಯಕ್ತಿಕವೂ ಮತ್ತು ಸಾಮುದಾಯಿಕವೂ ಆದ ಕಲ್ಪನಾಜಗತ್ತನು ಸೃಷ್ಟಿಸುತ್ತದೆ ಮತ್ತು ಆ ಜಗತ್ತಿನೊಳಗೆ ತನ್ನ ಸುತ್ತಲಿನ ಜೀವ ಕೋಟಿಯನ್ನು ಒಳಗೊಳ್ಳಲು ಬಯಸುತ್ತದೆ.
ಕಲ್ಪನಶಕ್ತಿಗೂ, ಜ್ಞಾನಕ್ಕೂ,ಪ್ರಭುತ್ವಕ್ಕೂ ದೊಡ್ಡ ಸಂಭದವಿದೆ.ಕಲ್ಪನಾಶಕ್ತಿ ಯಾವುದೇ ಸೃಜನಶೀಲ ಪ್ರಕ್ರಿಯೆಯ ಮೂಲ ಬೇರು. ಅದು ನಟನೆ, ಚಿತ್ರಕಲೆ, ಕಾವ್ಯರಚನೆ ಇಷ್ಟೇ ಅಲ್ಲ ನಾವು ತೀರ ಲೆಕ್ಕಾಚಾರದ ವಿಷಯಗಳು ಅಂದುಕೊಳ್ಳುವ ಗಣಿತ ಮತ್ತು ವಿಜ್ಞಾನ,ರಾಜಕಾರಣದಂತಹ ಜ್ಞಾನಶಾಖೆಗಳು ಕೂಡ ಕಲ್ಪನಾಶಕ್ತಿಯ ಬೆಂಬಲವಿಲ್ಲದೆ ಹೆಚ್ಚಿನದನ್ನು ಕಾಣಲಾರವು ಮತ್ತು ಹೇಳಲಾರವು.ದಾರ್ಶನಿಕತೆ, ಕಾಲಜ್ಞಾನ ಇವೆಲ್ಲವೂ ಕೂಡ ಒಂದು ಸೂಕ್ಷ್ಮ ಕಲ್ಪನಾಶೀಲಗ್ರಹಿಕೆಗೆ ದಕ್ಕುವ ಅಭಿವ್ಯಕ್ತಿಗಳು . ಮಾನವಶಾಸ್ತ್ರದಲ್ಲಿ ಹೇಳುವ ಹಾಗೆ ಕಲ್ಪನಾ ಶಕ್ತಿ ಎನ್ನುವುದು ರೂಪುಗೊಂಡಿರುವುದು ಮನುಷ್ಯನ ಉಳಿವಿಗಾಗಿ ಬೇಕಾಗಿರುವ ಹತಾರವಾಗಿ. imagination is part of human survival instinct. ಇನ್ನು ಹೆಚ್ಚು ಹೇಳಬೇಕಂದರೆ  imagination is power. ಆದ್ದರಿಂದ ಮಕ್ಕಳ ಕಲ್ಪನಾ ಜಗತ್ತನ್ನು ವಿಸ್ತರಿಸುವುದು ಮತ್ತು ಆ ಮೂಲಕ ಅವರು ಬೇರೆ ಬೇರೆ ಜ್ಞಾನದ ಬೆರಗುಗಳಿಗೆ ತೆರೆದುಕೊಳ್ಳುವಂತೆ ಮಾಡಬೇಕಾದ್ದು ನಮ್ಮ ಶಿಕ್ಷಣದ ಮೂಲ ಉದ್ದೇಶಗಳಲ್ಲಿ ಒಂದಾಗಬೇಕಾಗಿತ್ತು. ಆದರೆ ಹಾಗೆ ಆಗುತ್ತಿದೆಯೇ? ಪ್ರತಿಮಗುವಿಗೂ ಹುಟ್ಟಿನಿಂದ ಹಾಗೂ ತನ್ನ ಜನಾಂಗಿಯ ಸ್ಮೃತಿಯ  ಹಿನ್ನೆಲೆಯಲ್ಲಿ ಬಳುವಳಿಯಾಗಿ ಬಂದಿರುವ ಹಲವಾರು ಜ್ಞಾನವನ್ನು ವಿಜ್ಞಾನದ ಭಾಷೆಯಲ್ಲಿ ಸೆಲ್ಯುಲರ್ ಮೆಮೋರಿ (ಕೋಶ ಸ್ಮೃತಿ )ಎಂದು ,ರಂಗಭೂಮಿಯ ಭಾಷೆಯಲ್ಲಿ ದೇಹ ಸ್ಮೃತಿ (body memory ,ಇದು ಸ್ತನಿಸ್ಲಾವಕ್ಸಿ ಹೇಳುವ ಭಾವಸ್ಮ್ರುತಿಗಿಂತ ಬೇರೆಯಾದ್ದು ) ಎಂದು ಕರೆಯುತ್ತೇವೆ. ಈ ಜ್ಞಾನಕ್ಕೆ ಮಗುವಿನ ಕಲ್ಪನಾ ಜಗತ್ತಿನಲ್ಲಿ ಜಾಗವಿರುತ್ತದೆ ಅದು ಅಭಿವ್ಯಕ್ಥಿಗೊಳ್ಳಲು ಕಾಯುತ್ತಿರುತ್ತದೆ.ಮಗುವಿನ ಕಲ್ಪನಾ ಜಗತ್ತನ್ನು ನಾವು ಆರೋಗ್ಯಪೂರ್ಣವಾಗಿ ಇರುವಂತೆ ನೋಡಿಕೊಂಡರೆ ಆಯಾ ಕಾಲದ, ಪರಿಸರದ, ಇನ್ನು ಹಲವು ಸ್ಮೃತಿಗಳು ದಾಖಲಾಗುತ್ತಾ ಹೋಗುತ್ತವೆ. ಇವು ಮಕ್ಕಳ ಗ್ರಹಿಕೆ ಮತ್ತು ಅಭಿವ್ಯಕ್ತಿಗಳು ಸ್ಪಷ್ಟವಾಗುತ್ತಾ ಸೂಕ್ಷ್ಮವಾಗುತ್ತಾ ಹೋಗುವುದಕ್ಕೆ ಸಹಾಯ ಮಾಡುತ್ತವೆ. ಇದ್ದನ್ನೇ ನಾವು ಪ್ರಜ್ಞೆಯ ವಿಕಾಸ ಅನ್ನುವುದು. ನಾವು ನಮ್ಮ ಶಿಕ್ಷಣದ ಗುಣಮಟ್ಟವನ್ನು ಅಳೆಯಬೇಕಾದ್ದು ಇದರ ಆಧಾರದ ಮೇಲೆ ಹೊರತು ಅಂಕಗಳು ಮತ್ತು ರಾಂಕ್ಗಳ ಮೂಲಕವಲ್ಲ.
ಪ್ರಜ್ಞೆಯ ವಿಕಾಸದ ಪ್ರಕ್ರಿಯೆಯನ್ನು ನಮ್ಮ ಶಿಕ್ಷಣ ವ್ಯವಸ್ತೆಯು ಇನ್ನಷ್ಟು ಮುತವರ್ಜಿ ವಹಿಸಿ ಹೆಚ್ಚಿನ ಜವಾಬ್ದಾರಿಯಿಂದ ಮಾಡಬೇಕಿತ್ತು. ಆದರೆ ಪ್ರಭುತ್ವ ಅದನ್ನು ಮಾಡುಲು ಬಿಡುವುದಿಲ್ಲ. ಕಾರಣ ಪ್ರಜ್ಞಾವಂತಿಕೆ ಯಾವಾಗಲು ಸ್ವತಂತ್ರವಾಗಿರಲು , ಅನನ್ಯವಾಗಿರಲು ಬಯಸುತ್ತದೆ. ಅದು ಗುಲಾಮತನವನ್ನು ,ಸರ್ವಾಧಿಕಾರವನ್ನು ಮತ್ತು ಏಕಮುಖ ಸಂಸ್ಕೃತಿಯನ್ನು ವಿರೋದಿಸುತ್ತದೆ. ಹೀಗೆ ಕಲ್ಪನಾ ಶಕ್ತಿಯನ್ನು ದುರ್ಬಳಗೊಳಿಸುವ ಮೂಲಕ , ಪ್ರಜ್ಞಾವಂತಿಕೆಯನ್ನು ಇಲ್ಲವಾಗಿಸಿ ಪ್ರಭುತ್ವವು ತನ್ನ ಆಟವನ್ನು ನಡೆಸುತ್ತ ಹೋಗುತ್ತದೆ. ಆ ಆಟದ ಭಾಗವಾಗಿಯೇ ನಾವಿಂದು ಸರ್ವಾಧಿಕಾರವನ್ನು ತೀರ ಸಹಜವೆಂಬಂತೆ ಒಪ್ಪಿಕೊಳ್ಳುತ್ತಿರುವುದು.
ರಂಗಭೂಮಿಯದು ಇದಕ್ಕೆ ವಿರುದ್ದವಾದ ಕೆಲಸ. ಕಾಲ ಕಾಲಕ್ಕೂ ನಿಶ್ಯಕ್ತವಾಗುತ್ತಿರುವ ಪ್ರಜ್ಞಾವಂತಿಯನ್ನು ಹರಿತ ಮಾಡುತ್ತಾ ಹೋಗುವುದು. ಮಕ್ಕಳ ರಂಗಭೂಮಿಯು ಈ ಪ್ರಜ್ಞಾವಿಕಾಸ ಪ್ರಕ್ರಿಯೆಯ ಆರಂಭದ ಹದಗೊಳಿಸುವ ,ಬೀಜ ಬಿತ್ತುವ ಕೆಲಸವನ್ನು ಸರಿಯಾಗಿ ಮಾಡಬೇಕು. ಮಕ್ಕಳ ಶಿಬಿರಗಳಲ್ಲಿ ರಿಯಾಲಿಟಿ ಶೋಗಳ ನಟ ನಟಿಯರನ್ನೋ ,ಸಿನಿಮಾ ಕಲಾವಿದರನ್ನೋ ಮಕ್ಕಳ ಮುಂದೆ ಮಾದರಿಯಾಗಿ ಇಡುವುದು ಅವರು ಮಾಡುತ್ತಿರುವ ವೃತ್ತಿಯ ಕಾರಣಕ್ಕೆ ಕೆಟ್ಟ ಮಾದರಿಗಳಲ್ಲ, ಬದಲಿಗೆ ಅವು ಮಕ್ಕಳ ಕಲ್ಪನಾ ಶಕ್ತಿಯನ್ನು, ಜಗತ್ತನ್ನು, ಪ್ರಜ್ಞಾವಿಕಾಸವನ್ನುಮಿತಗೊಳಿಸುತ್ತವೆಯಾದ್ದರಿಂದ ಅವು ಹೆಚ್ಚು ಮಾರಕವಾದವು.ಇಂತಹ  ಮಾದರಿಗಳಿಂದ ರಂಗಭೂಮಿ ಮೂಲಸತ್ವವೇ ಮಕ್ಕಳಿಗೆ ದಾಟುವುದಿಲ್ಲ. ಅದು ಒಂದು ಸಮಾಜವು ,ಸಮುದಾಯವು ಒಂದು ಕೂಸಿಗೆ ಅಂದರೆ ತನ್ನ ಮುಂದಿನ ತಲೆಮಾರಿಗೆ ಮಾಡಬಹುದಾದ ಮಹಾವಂಚನೆ. ಇದೊಂದು ಸಣ್ಣ ವಿಚಾರ ಇದ್ಯಾಕೆ ಇಷ್ಟೊಂದು ದೊಡ್ಡದಾಗಿ ಬರೆಯುತ್ತಿದ್ದಾರೆ ಅನ್ನಿಸಿಬಹುದು. ಆದರಿದು ನಾವು ಅಂದುಕೊಂಡಷ್ಟು ಸಣ್ಣದಲ್ಲ. ಈ ರೀತಿ ನಾವು ಕಳೆದ ದಶಕಗಳಲ್ಲಿ ಶಿಕ್ಷಣದಲ್ಲಿ ಮಾಡಿರಬಹುದಾದ ಸಣ್ಣ ಸಣ್ಣ ತಪ್ಪುಗಳೇ ಇಂದು ಇಂಡಿಯ ದೇಶವನ್ನು ಇಷ್ಟು ಕೆಟ್ಟ ರಾಜಕೀಯ ವ್ಯವಸ್ತೆಗೆ,ಸರ್ವಾದಿಕಾರಕ್ಕೆ ಹತ್ತಿರತ್ತಿರ ತಂದು ನಿಲಿಸಿವೆ. ಇಂದು ಯಾವುದೇ ಪಕ್ಷವು ನಮ್ಮ ಮೂಲಭೂತ ಅಗತ್ಯವಾದ ಶಿಕ್ಷಣ , ಅರೋಗ್ಯ, ಪರಿಸರದ ವಿಷಯಗಳ ಕುರಿತು ಮಾತಾಡುತ್ತಿಲ್ಲ. ನಮ್ಮ ಮಾಧ್ಯಮಗಳು ಅದನ್ನು ಕೇಳುತ್ತಿಲ್ಲ. ಜನಸಮುಹವೂ ರಾಜಕೀಯ ಆಡುವ ಭಾಷಣಗಳ ಆಚೆಗೆ ಏನನ್ನೂ ನೋಡಲಾರದು. ಅಷ್ಟರ ಮಟ್ಟಿಗೆ ನಮ್ಮ ಕಲ್ಪನಾ ಜಗತ್ತನ್ನು ಮಿತಿಗೊಳಿಸಲಾಗಿದೆ. ಪಳಗಿಸಲಾಗಿದೆ. ಒಂದು ಸುಶಿಕ್ಷಿತ, ಸ್ವಾಯುತ್ತ ಚಿಂತನೆಯುಳ್ಳ  ಸಮಾಜವನ್ನು ಯಾವುದೇ ಪ್ರಭುತ್ವವು ಭಾವನಾತ್ಮಕ ವಿಷಯಗಳ ಮೂಲಕ ವಂಚಿಸಲಾಗದು. ಮುಂದಿನ ಹತ್ತಿಪತ್ತು ವರ್ಷಗಳಲ್ಲಾದರು ಆರೋಗ್ಯಪೂರ್ಣ ಯುವ ಸಮೂಹವನ್ನು ಬಯಸುತ್ತವಾದರೆ ರಂಗಭೂಮಿ ಸಮುದಾಯವು ಮಕ್ಕಳ ಶಿಬಿರಗಳನ್ನು ಮುಖ್ಯವಾಗಿ ಪರಿಗಣಿಸಬೇಕು. ಅವರಿಗೆ ರಾಜಕೀಯ ಪಾಠ ಮಾಡಬೇಕು ಅನ್ನುವುದು ಇದರ ಅರ್ಥವಲ್ಲ, ಅವರ ಕಲ್ಪನಾಶಕ್ತಿ ಬಂಜರಾಗದಂತೆ, ಭ್ರಷ್ಟಗೊಳ್ಳದಂತೆ , ಕೆಟ್ಟ ಮಾದರಿಗಳಿಗೆ ಮಾರುಹೋಗದಂತೆ ಎಚ್ಚರವಹಿಸಬೇಕು.ಹಾಗೆ ನೋಡಿದರೆ ಮಕ್ಕಳ ಶಿಬಿರಗಳು ವಯಸ್ಕರಿಗೆ ನಡೆಸುವ ರಂಗಶಿಬಿರಗಳಿಗಿಂತ ಹೆಚ್ಚು ಸೂಕ್ಷ್ಮತೆ ಮತ್ತು ಸಂವೇದನಾಶೀಲತೆಯನ್ನ ಬೇಡುತ್ತವೆ. ರಂಗಕರ್ಮಿಗಳಿಗೆ ಇದೊಂದು ದೊಡ್ಡ ಸವಾಲು ಮತ್ತು ಜವಾಬ್ದಾರಿ ಇದನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾದರೆ ಇದಕ್ಕಿಂತ ದೊಡ್ಡ ಸಮಾಜಸೇವೆಯಾಗಲಿ , ದೇಶಸೇವೆಯಾಗಲಿ ಮತ್ತೊಂದಿಲ್ಲ.
                 -  ಕೆ .ಪಿ .ಲಕ್ಷ್ಮಣ್
(ಅಂತಾರಾಷ್ಟ್ರೀಯ ನಟ ಹಾಗು ನಿರ್ದೆಶಕರು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher