ಗುರುವಾರ, ಡಿಸೆಂಬರ್ 18, 2014

ಪಾಕಿಸ್ತಾನದ ಆ ಕಂದಗಳು


          
      ಇಂದು ತಡೆಯಲಾರದಷ್ಟು ನೋವಾಗಿದೆ. ಆ ಮುದ್ದು ಕಂದಗಳು ಕಟುಕರಿಗೇನು ಮಾಡಿದ್ದರು. ಕೊಂದವನು ಒಬ್ಬ ಮಗುವಾಗಿಯೇ ಬಂದವನಲ್ಲವೇ? 

ರಾಕ್ಷಸ...!

      ನಿಜವಾಗಲೂ ಇಂಥವರನ್ನು ರಾಕ್ಷಸ ಎಂಬ ಶಬ್ದವೂ ಸಣ್ಣದಾಯಿತೆಂದು ತಿಳಿಯುತ್ತೇನೆ. ಆ ರಕ್ತ ದ ಮಡುವಿನಲ್ಲಿ ಮಿಂದು ಭವಿಷ್ಯವನ್ನೇ ಕಾಣದೇ ದೂರಾದ ಮಕ್ಕಳು. ಆ ಸ್ಥಿತಿಗೆ ಕಾರಣನಾದವನಿಗೆ ನನ್ನ ದಿಕ್ಕಾರ. ನಾನು ನನ್ನ ವಿದ್ಯಾರ್ಥಿ - ಶಿಕ್ಷಕರೊಡಗೂಡಿ ಆ ಮಕ್ಕಳಿಗಾಗಿ ೨ ನಿಮಿಷ ಮೌನಚಾರಣೆ ಮಾಡುವಾಗ ಎದೆ ನಡುಗಿ ಗದ್ಗದಿತನಾಗಿ ಮಾತೇ ಹೊರಡಲಿಲ್ಲ. ನನ್ನ ಮುಂದಿರುವ ಈ ಮಕ್ಕಳೇ ಅಲ್ಲಿನ ಮಕ್ಕಳೆಂದು ಊಹಿಸಿಕೊಂಡು ನಿಲ್ಲಲೂ ಆಗಲಿಲ್ಲ. ನಾನು ಆಲೋಚಿಸುತ್ತಿರುವುದು ಸರಿಯೋ ತಪ್ಪೋ ತಿಳಿದಿಲ್ಲ. ಆದರೆ ಆ ಮಕ್ಕಳಿಗೂ ನಾನು ಬೋಧಿಸುತ್ತಿದ್ದೆ, ನಾಟಕವಾಡಿಸುತ್ತಿದ್ದೆ, ರಂಗಗೀತೆಗಳನ್ನು ಹೇಳಿಕೊಡುತ್ತಿದ್ದೆ. ಎಂದು ನನ್ನೊಳಗೆ ಭಾಸವಾಗಿ ದೇಶ ದೇಶಗಳ ಕಿತ್ತಾಟ, ಧರ್ಮಗಳ ಸಂಘರ್ಷ ನನಗೆ ಯಾವುದು ತಲೆಗೆ ತೋಚದೆ ಕಂಡ ಮಕ್ಕಳೆಲ್ಲ ಆ ಬಲಿಯಾದ ಮಕ್ಕಳೇ ಎಂದೆನಿಸಿ ಜೀವ ಜೀವದೊಳಗೆ ನಿಲ್ಲದೆ ಒದ್ದಾಡುತ್ತಿರುವುದು ಯಾರಿಗೆ ಹೇಳಲಿ? ಆ ಮಕ್ಕಳು ಬದುಕಬಾರದಿತ್ತೇ... ರಾಜಕೀಯದ ಆ ಸಣ್ಣತನ ಜಗತ್ತನ್ನೇ ಬೆಚ್ಚಿಬೀಳಿಸಿತು. ಯಾಕಾಗಿ-ಯಾವುದಾಕ್ಕಾಗಿ ಜೀವವನ್ನು ತೆಗೆದು ಕೊಂಡರೋ ಆ ಮುರ್ಖರಿಗೇ ತಿಳಿಯದೇ ಹೋದರು. 

ದಿಕ್ಕಾರ

ದಿಕ್ಕಾರ.
        ನನಗೂ ಅನಿಸುತ್ತದೆ, ಆ ಕಟುಕರ ಗುಂಪೊಳಗೆ ಸೇರಬೇಕು ಎಂದು. ಸೇರಿ ಅವರ ಬಂದೂಕುಗಳಿಂದ ಅವರನ್ನೇ ಸುಡಬೇಕು ಎಂದು. ಮಕ್ಕಳನ್ನು ಬಲಿ ತೆಗೆದುಕೊಂಡ ಪ್ರತಿಯೊಬ್ಬ ಉಗ್ರಗಾಮಿಗೂ ಮನುಷ್ಯತ್ವನೇ ಇಲ್ಲದೇ ಹೋಗುವಾಗ ಭಾರತ, ಅಮೆರಿಕಾ, ಚೀನಾ, ರಷ್ಯಾ ದೇಶಗಳು ಮರುಗಿ ಸಂತಾಪ ಸೂಚಿಸುವುದರಲ್ಲಿಯೋ ಮೌನಾಚರಣೆ ಆಚರಿಸಿ ಸುಮ್ಮನಿರುವುದಲ್ಲ, ನಾಳೆ ಮತ್ತೋಂದಿಷ್ಟು ಮಕ್ಕಳು ಬಲಿಯಾಗದೇ ಇರುವ ಹಾಗೇ ಉಗ್ರವಾದಿಗಳನ್ನು ನಿರ್ಮೂಲನೆ ಮಾಡಬೇಕಾಗಿದೆ. ಮಲಾಲಳಿಗೆ ನೊಬೆಲ್ ಪ್ರಶಸ್ತಿ ಕೊಟ್ಟರಷ್ಟೇ ಅಲ್ಲ, ಅಂಥಹ ಪ್ರತಿಭಾವಂಥ ಮಕ್ಕಳ ರಕ್ಷಣೆಯು ನಮ್ಮ ಹೊಣೆಯಾಗಿದೆ. 

      ನಮ್ಮ ಮನೆಯಲ್ಲಿ, ನಮ್ಮ ಹಳ್ಳಿಯಲ್ಲಿ ಕುಳಿತು ನಾವು ಒಂದಿಷ್ಟು ಮಾತನಾಡಿ, ಹರಟೆ ಹೊಡೆದು ಮುಗಿಸಿದರಾಯಿತೇ... ಸರ್ಕಾರ ಸಂಬಳ ನೀಡುತ್ತದೆ ನಾನು ನನ್ನ ಕುಟುಂಬ ಎಂದು ಸೀಮಿತವಾಗದೇ ಇಡೀ ಮನು ಕುಲವೇ ನನ್ನ ಕುಟುಂಬ - ಬಳಗವೆಂದುಕೊಂಡು ಪ್ರತಿಕ್ರಿಯಿಸಬೇಕಾಗಿದೆ. ವಿದ್ಯಾರ್ಥಿಯೊಬ್ಬ ನನ್ನಲ್ಲಿ ಬಂದು "ಸಾರ್ ಅವರು ಅವರ ಮಕ್ಕಳನ್ನೇ ಕೊಂದುಕೊಳ್ಳುತ್ತಾರಲ್ಲ ಸಾರ್” ಎಂದು. ಮಕ್ಕಳಲ್ಲಿರುವ ಪ್ರಜ್ಞೆ ಆ ಯುವಕನಲ್ಲೋ ಜಿಹಾದ್ ಎಂದು ಬೊಬ್ಬೆ ಹಾಕುವ ಯಾವೊಬ್ಬನಲ್ಲೂ ಮಕ್ಕಳಲ್ಲಿರುವ ಮಾನವೀಯತೆ ಇಲ್ಲದಾಗಿದೆ.